Site icon Vistara News

Gruesome Murders | ಪೂಜೆಗೆ ಅಡ್ಡಿ ಮಾಡಿದ್ದಕ್ಕೆ ಹೆಂಡತಿ, ತಾಯಿ, ಮೂವರು ಮಕ್ಕಳ ಕತ್ತು ಸೀಳಿ ಕೊಂದ!

Murder

ರಾಣಿಪೋಖ್ರಿ: ಯಾವ ಯಾವ ಕಾರಣಕ್ಕೆ ಕೊಲೆಗಳಾಗುತ್ತವೆ ಎಂಬುದನ್ನು ಊಹಿಸುವುದು ಕಷ್ಟ. ಇಲ್ಲೊಬ್ಬ ತನ್ನ ತಾಯಿ (75), ಹೆಂಡತಿ (36) ಮತ್ತು 9, 11 ಮತ್ತು 13 ವರ್ಷದ ಮೂವರು ಮಕ್ಕಳನ್ನು ಕೊಂದು ಹಾಕಿದ್ದಾನೆ. ಕಾರಣ ತೀರಾ ಕ್ಷುಲ್ಲಕ. ಸೋಮವಾರದ ಬೆಳಗಿನ ಪೂಜೆಗೆ ಹೆಂಡತಿ ಅಡ್ಡಿ ಮಾಡಿದಳು ಎಂಬ ಕಾರಣಕ್ಕೆ ನಾಲ್ವರನ್ನೂ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಈ ಭೀಭತ್ಸ ಕೊಲೆ (Gruesome Murders) ಘಟನೆಗೆ ಅಕ್ಕಪಕ್ಕದವರು ಬೆಚ್ಚಿಬಿದ್ದಿದ್ದಾರೆ!

ಈ ಭೀಕರ ಕೊಲೆಗಳು ಉತ್ತರಾಖಂಡದ ಡೆಹ್ರಾಡೂನ್‌ನಿಂದ 28 ಕಿ ಮೀ ದೂರದಲ್ಲಿರುವ ರಾಣಿಪೋಖ್ರಿ ಎಂಬಲ್ಲಿ ನಡೆದಿವೆ. 47 ವರ್ಷದ ಮಹೇಶಕುಮಾರ್ ಕೊಲೆಗಾರ. ಈತ ಉತ್ತರ ಪ್ರದೇಶದ ಬಂಡಾ ಮೂಲದವನು. ತನ್ನ ಕುಟುಂಬದೊಂದಿಗೆ ರಾಣಿಪೋಖ್ರಿಯ ನಾಗಘರ್‌ ಪ್ರದೇಶದಲ್ಲಿರುವ ಸಹೋದರನ ಮನೆಯಲ್ಲಿ ವಾಸವಾಗಿದ್ದ. ಹೆಂಡತಿ ನೀತು ದೇವಿ, ತಾಯಿ ಬೀತನ್ ದೇವಿ, ಮಕ್ಕಳಾದ ಅಪರ್ಣಾ, ಸ್ವರ್ಣಾ ಮತ್ತು ಅನ್ನಪೂರ್ಣ. ಇವರೆಲ್ಲರೂ ಜತೆ ಸುಮಾರು 10 ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದಾನೆ. ವಿದ್ಯಾಭ್ಯಾಸಕ್ಕಾಗಿ ಹಿರಿಯ ಮಗಳು ಕೃಷ್ಣಾ ಬೇರೆ ಊರಿನಲ್ಲಿ ವಾಸವಾಗಿದ್ದ ಕಾರಣ ಇಡೀ ಕುಟುಂಬದಲ್ಲಿ ಆಕೆಯೊಬ್ಬಾಕೆ ಬದುಕುಳಿದಿದ್ದಾಳೆ.

ಕೊಲೆಗಾರ ಮಹೇಶ್ ಕುಮಾರ್ ಕಳೆದ 10 ವರ್ಷದಿಂದ ನಿರುದ್ಯೋಗಿಯಾಗಿದ್ದ. ತನ್ನ ಹೆಚ್ಚಿನ ಸಮಯವನ್ನೆಲ್ಲ ಪ್ರಾರ್ಥನೆ ಮತ್ತು ಪೂಜೆಯಲ್ಲಿ ಕಳೆಯುತ್ತಿದ್ದ ಎಂದು ಅಕ್ಕಪಕ್ಕದವರು ತಿಳಿಸಿದ್ದಾರೆ. ಈ ಭಯಾನಕ ಕೊಲೆ ಪ್ರಕರಣದಿಂದ ರಾಣಿಪೋಖ್ರಿ ಜನರು ಬೆಚ್ಚಿಬಿದ್ದಿದ್ದಾರೆ. ಈತನ ಸಹೋದರ ಉಮೇಶ್ ಸ್ಪೇನ್‌ನಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬದ ನಿರ್ವಹಣೆಗೆ ಪ್ರತಿ ತಿಂಗಳು ಹಣ ಕಳುಹಿಸಿತ್ತಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿಲಿಂಡರ್ ಬದಲಿಸಿ ಎಂದಿದ್ದೇ ತಪ್ಪಾಯಿತು
10 ವರ್ಷದಿಂದ ಯಾವುದೇ ಕೆಲಸ ಮಾಡದೇ ಮನೆಯಲ್ಲಿ ಸಮಯ ಕಳೆಯುತ್ತಿದ್ದ ಮಹೇಶ್ ಕುಮಾರ್, ಸೋಮವಾರ ಕೂಡ ಎಂದಿನಂತೆ ಬೆಳಗ್ಗೆ ಸ್ನಾನ ಮಾಡಿ, ಪೂಜೆ ಮಾಡಲು ಕುಳಿತಿದ್ದಾನೆ. ಇತ್ತ ಪತ್ನಿ ಅಡುಗೆಮನೆಯಲ್ಲಿ ಬೆಳಗಿನ ತಿಂಡಿ ತಯಾರಿಸುವಲ್ಲಿ ನಿರತಳಾಗಿದ್ದಳು. ಈ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿದ್ದು, ಸಿಲಿಂಡರ್ ಬದಲಿಸುವಂತೆ ಪತಿ ಮಹೇಶ್‌ಕುಮಾರ್‌ಗೆ ಕೇಳಿದ್ದಾಳೆ. ಆತನಿಗೆ ಕೋಪಗೊಳ್ಳಲು ಇಷ್ಟೇ ಸಾಕಾಯಿತು. ಪೂಜೆಯಿಂದ ಎದ್ದವನೇ ಸೀದಾ ಅಡುಗೆ ಮನೆಗೆ ಹೋಗಿ, ನೀನು ಪೂಜೆಗೆ ಅಡ್ಡಿ ಮಾಡುತ್ತಿದ್ದೀಯಾ ಎಂದು ಹೆಂಡತಿ ಜತೆ ಜಗಳವಾಡಿದ್ದಾನೆ. ಹರಿತವಾದ ಆಯುಧದಿಂದ ಹೆಂಡತಿಯ ಕತ್ತು ಸೀಳಿದ್ದಾನೆ.

ಆಗ ಮಕ್ಕಳು, ಮಹೇಶಕುಮಾರನ ತಾಯಿ ಎಲ್ಲರೂ ಓಡಿ ಬಂದಿದ್ದಾರೆ. ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಚಿಕ್ಕಮಗಳು ಅನ್ನಪೂರ್ಣ, ರಕ್ಷಿಸಿ ಎಂದು ಜೋರಾಗಿ ಕಿರುಚಿಕೊಂಡಿದ್ದಾಳೆ. ಪಕ್ಕದಮನೆಯವರು ಓಡಿ ಬಂದು ನೋಡುವಷ್ಟರಲ್ಲಿ ಎಲ್ಲರೂ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಚಿಕ್ಕ ಮಗವನ್ನಾದರೂ ಉಳಿಸಿ ಎಂದು ಪಕ್ಕದ ಮನೆಯಾತ ಕಿಟಕಿಯಿಂದಲೇ ಕಿರುಚಿದರೂ, ರಾಕ್ಷಸರೂಪ ತಾಳಿದ್ದ ಮಹೇಶ್ ಕುಮಾರ್ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆ ಚಿಕ್ಕಮಗುವಿನ ಕತ್ತನ್ನು ಸೀಳಿದ್ದಾನೆ. ಕ್ಷಣಾರ್ಧದಲ್ಲಿ ಇಡೀ ಕುಟುಂಬವೇ ಸರ್ವನಾಶವಾಗಿ ಹೋಯಿತು ಎದು ಪಕ್ಕದ ಮನೆಯವರು ಪೊಲೀಸರ ಮುಂದೆ ಇಡೀ ಘಟನೆಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ | Murder Case | ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ರುಂಡ ಕತ್ತರಿಸಿ ಬರ್ಬರ ಕೊಲೆ!

Exit mobile version