ಗಾಂಧಿನಗರ: ದೇಶ ಎಷ್ಟೇ ಮುಂದುವರಿದರೂ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಎಷ್ಟೇ ಪ್ರಗತಿ ಸಾಧಿಸಿದರೂ, ಶಿಕ್ಷಣದಲ್ಲಿ ಮೇಲುಗೈ ಸಾಧಿಸಿದರೂ ಕೆಲವೆಡೆ ಮಾತ್ರ ಮೌಢ್ಯ ಇನ್ನೂ ನಿರ್ನಾಮವಾಗಿಲ್ಲ. ಕಾಯಿಲೆ ಬಿದ್ದರೂ ಮಾಟ-ಮಂತ್ರ ಮಾಡುವವರ ಬಳಿ ಹೋಗುವುದು, ತಾಯಿತ ಕಟ್ಟಿಕೊಳ್ಳುವುದು, ನಿಧಿ ಆಸೆಗಾಗಿ ನರ ಬಲಿ ಕೊಡುವುದು ಸೇರಿ ಹಲವು ಮೌಢ್ಯಗಳ ಆಚರಣೆ ಇನ್ನೂ ಇದೆ. ಇದಕ್ಕೆ ನಿದರ್ಶನ ಎಂಬಂತೆ, ಗುಜರಾತ್‌ನಲ್ಲಿ ಗಂಡ-ಹೆಂಡತಿಯು ರುಂಡ ಕತ್ತರಿಸಿಕೊಂಡು ಸ್ವಯಂ ನರಬಲಿ (Human Sacrifice) ಕೊಟ್ಟಿದ್ದಾರೆ.
ಹೌದು, ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ವಿಂಚಿಯಾ ಗ್ರಾಮದ ತೋಟದ ಮನೆಯಲ್ಲಿ ಇಂಥದ್ದೊಂದು ದುರಂತ ನಡೆದಿದೆ. ಗ್ರಾಮದ ಹೇಮುಭಾಯಿ (38) ಹಾಗೂ ಹಂಸಬೆನ್ ಮಕ್ವಾನ (35) ಅವರು ಮನೆಯಲ್ಲಿ ಗಿಲೋಟಿನ್ ಮಾದರಿಯ ಯಂತ್ರಕ್ಕೆ ತಲೆ ಕೊಟ್ಟು ರುಂಡ ಕತ್ತರಿಸಿಕೊಂಡಿದ್ದಾರೆ. ಗಿಲೋಟಿನ್ ಮಾದರಿಯ ಯಂತ್ರಕ್ಕೆ ಹಗ್ಗ ಕಟ್ಟಿದ್ದಾರೆ, ಹಗ್ಗ ಎಳೆದ ಬಳಿಕ ಕಬ್ಬಿಣದ ಬ್ಲೇಡ್ ಅವರ ರುಂಡ ಕತ್ತರಿಸಿದೆ. ಬಳಿಕ ಬೆಂಕಿ ಹೊತ್ತಿಕೊಂಡಿದ್ದು, ಅವರ ರುಂಡಗಳು ಅಗ್ನಿಕುಂಡಕ್ಕೆ ಬಿದ್ದಿವೆ. ರುಂಡಗಳು ಅಗ್ನಿಕುಂಡಕ್ಕೆ ಬೀಳಬೇಕು ಎಂಬುದೇ ಅವರ ನರಬಲಿಯ ಉದ್ದೇಶವಾಗಿತ್ತು ಎಂದು ತಿಳಿದುಬಂದಿದೆ.
ಫ್ರೆಂಚ್ ಕ್ರಾಂತಿಯ ವೇಳೆ ಗಿಲೋಟಿನ್ ಯಂತ್ರಗಳನ್ನು ಬಳಸಲಾಗುತ್ತಿತ್ತು. ವಿರೋಧಿಗಳನ್ನು ಎಳೆತಂದು, ಗಿಲೋಟಿನ್ ಯಂತ್ರದ ಮೇಲೆ ಮಲಗಿಸಿ, ಕಬ್ಬಿಣದ ಬ್ಲೇಡ್‌ಗಳಿಂದ ಅವರ ರುಂಡಗಳನ್ನು ಕತ್ತರಿಸಲಾಗುತ್ತಿತ್ತು. ಗುಜರಾತ್‌ನ ದಂಪತಿಯು ಇದೇ ಮಾದರಿಯ ಯಂತ್ರವನ್ನು ಮನೆಯಲ್ಲಿಯೇ ತಯಾರಿಸಿ, ನರಬಲಿ ಕೊಟ್ಟಿದ್ದಾರೆ. ಕಳೆದ ಶನಿವಾರ ರಾತ್ರಿಯಿಂದ ಭಾನುವಾರ ಮಧ್ಯಾಹ್ನದೊಳಗೆ ನರಬಲಿ ಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮೀನಿನ ಮನೆಯಲ್ಲಿಯೇ ಹೋಮ-ಹವನ, ನರಬಲಿ ನಡೆದಿದ್ದು, ಪೊಲೀಸರಿಗೆ ಡೆತ್‌ನೋಟ್ ಸಿಕ್ಕಿದೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಅವರು ಬರೆದಿದ್ದಾರೆ. ಕಳೆದ ಒಂದು ವರ್ಷದಿಂದಲೂ ದಂಪತಿಯು ಪ್ರತಿದಿನ ಪೂಜೆ, ಹೋಮ, ಹವನ ಮಾಡುತ್ತಿದ್ದರು ಎಂದು ಸುತ್ತಮುತ್ತಲಿನ ಗ್ರಾಮದ ಜನರು ಮಾಹಿತಿ ನೀಡಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ. ಆದಾಗ್ಯೂ, ನರಬಲಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆಸ್ತಿಯ ಆಸೆಗಾಗಿ ಮಾಡಿದ್ದಾರೋ, ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು ಮೌಢ್ಯಕ್ಕೆ ಶರಣಾಗಿದ್ದಾರೋ ಎಂಬ ಮಾಹಿತಿ ಇಲ್ಲ.
ಇದನ್ನೂ ಓದಿ: Human Sacrifice: ತನ್ನ ಮಗನ ಆರೋಗ್ಯಕ್ಕಾಗಿ ಸಂಬಂಧಿಯ 10ವರ್ಷದ ಪುತ್ರನನ್ನೇ ಬಲಿಕೊಟ್ಟ; ಮೂವರ ಬಂಧನ