ಬೆಲ್‌ಗ್ರೇಡ್: ಆಗ್ನೇಯ ಯುರೋಪ್‌ನ ಪುಟ್ಟ ದೇಶ ಮಾಂಟೆನೆಗ್ರೊದಲ್ಲಿ ಶುಕ್ರವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಮತ್ತು ಬಂದೂಕುಧಾರಿ ಸೇರಿದಂತೆ 11 ಜನರು ಸತ್ತಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ.
ಒಬ್ಬ ಶೂಟರ್ ಸೇರಿದಂತೆ ಒಟ್ಟು 12 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. “ನಾವು ಘಟನಾ ಸ್ಥಳಕ್ಕೆ ಬಂದಾಗ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಮೃತ ದೇಹಗಳು ಕಂಡುಬಂದವು ಮತ್ತು ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ನಿಧನರಾದರು” ಎಂದು ರಾಜ್ಯ ಪ್ರಾಸಿಕ್ಯೂಟರ್ ಆಂಡ್ರಿಜಾನಾ ನಾಸ್ಟಿಕ್ ತಿಳಿಸಿದ್ದಾರೆ.
ಕೊಲ್ಲಲ್ಪಟ್ಟ ಮಕ್ಕಳ ವಯಸ್ಸು ಎಷ್ಟು ಎಂದು ಗೊತ್ತಾಗಿಲ್ಲ. ಕೊಲೆಯಾದವರ ಗುರುತುಗಳ ಬಗ್ಗೆ ವಿವರಗಳು ಬಹಿರಂಗವಾಗಿಲ್ಲ. ಗಾಯಗೊಂಡವರಲ್ಲಿ ಒಬ್ಬ ಪೋಲೀಸರೂ ಇದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶೂಟರ್ ಅನ್ನು ಕೊಲ್ಲಲಾಗಿದೆ.
ಸೆಟಿಂಜೆಯಲ್ಲಿ ನಡೆದ ಕೌಟುಂಬಿಕ ಕಲಹದ ನಂತರ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಶುಕ್ರವಾರ ಸಂಜೆಯಿಂದ ದೇಶದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗುವುದು ಎಂದು ಮಾಂಟೆನೆಗ್ರೊದ ಪ್ರಧಾನಿ ಡ್ರಿಟನ್ ಅಬಾಜೋವಿಕ್ ಹೇಳಿದ್ದಾರೆ. ಸೆಟಿಂಜೆಯಲ್ಲಿ ಸಂಭವಿಸಿದ ಭೀಕರ ದುರಂತದ ವರದಿಗಳಿಂದ ನಾನು ತೀವ್ರವಾಗಿ ವಿಚಲಿತನಾಗಿದ್ದೇನೆ. ಸಂತ್ರಸ್ತ ಕುಟುಂಬಕ್ಕೆ ನನ್ನ ಆಳವಾದ ಸಂತಾಪ ವ್ಯಕ್ತಪಡಿಸುತ್ತೇನೆ ಎಂದು ಅಧ್ಯಕ್ಷ ಮಿಲೋ ಜುಕಾನೋವಿಕ್ ಟ್ವೀಟ್ ಮಾಡಿದ್ದಾರೆ.
ಅಪರಾಧ ಪ್ರಮಾಣ ಅತ್ಯಂತ ಕಡಿಮೆ ಹೊಂದಿರುವ ಈ ದೇಶದಲ್ಲಿ ಈ ಪರಿಯ ಗಂಭೀರ ಪ್ರಮಾಣದ ಅಪರಾಧ ನಡೆದಿರುವುದು ಎಲ್ಲರನ್ನೂ ಆಘಾತಗೊಳಿಸಿದೆ.
ಇದನ್ನೂ ಓದಿ: ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆಸಿದವನು ಯಾರು?