Site icon Vistara News

Halashri Swameeji : 4 ಮೊಬೈಲ್‌, 4 ಸಿಮ್, 50 ಲಕ್ಷ ರೂ.;‌ ಇದು ಹಾಲಶ್ರೀ ಸ್ವಾಮೀಜಿಯ ಹಿರೇಹಡಗಲಿ ಟು ಕಟಕ್‌ ಟ್ರಾವೆಲ್‌ ಸ್ಟೋರಿ!

HalaShri and Cuttack Railway station

ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಐದು ಕೋಟಿ ರೂ. ವಂಚನೆ (Five crore rupees Fraud) ಮಾಡಿದ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ (Halashri Swameeji) ಒಡಿಶಾದ ಕಟಕ್‌ನಲ್ಲಿ ಅರೆಸ್ಟ್‌ (Halashri swameeji arrested in Cuttak) ಆಗಿದ್ದಾರೆ. ಇದೀಗ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆ ತರಲಾಗಿದೆ. ಈ ನಡುವೆ ಅವರು ಹಾಲ ಮಠದಿಂದ ತಪ್ಪಿಸಿಕೊಂಡು ಕಟಕ್‌ ವರೆಗೆ ಸಾಗಿದ ಕಥೆಯೇ ರೋಚಕವಾಗಿದೆ. (Hire hadagali to Cuttak an nerve biting story) ಅವರನ್ನು ಬೆನ್ನು ಹತ್ತಿದ ಪೊಲೀಸ್‌ ಸ್ಟೋರಿಯಂತೂ (Police story) ಇನ್ನಷ್ಟು ಇಂಟ್ರೆಸ್ಟಿಂಗ್‌!

ಗೋವಿಂದ ಬಾಬು ಪೂಜಾರಿ ಮತ್ತು ಚೈತ್ರಾ ಕುಂದಾಪುರ ಗ್ಯಾಂಗ್‌ ನಡುವೆ ಸಂಘರ್ಷ ಸೃಷ್ಟಿಯಾಗಿ ಬಹುಕಾಲವೇ ಆಗಿ ಹೋಗಿದೆ. ಆದರೆ, ಅಂತಿಮವಾಗಿ ಕೇಸು ದಾಖಲಾಗಿದ್ದು ಸೆಪ್ಟೆಂಬರ್‌ 8ರಂದು. ಆವತ್ತಿನಿಂದ ಪ್ರತಿಯೊಬ್ಬರಿಗೂ ಯಾವಾಗ ಬೇಕಾದರೂ ಅರೆಸ್ಟ್ ಆಗಬಹುದು ಎಂಬ ಸನ್ನಿವೇಶ. ಸೆಪ್ಟೆಂಬರ್‌ 11ರ ವೇಳೆಗೆ ಚೈತ್ರಾ ಕುಂದಾಪುರ ಯಾರದೋ ಮನೆಯಲ್ಲಿ ಅಡಗಿ ಕುಳಿತಿದ್ದಳು. ಮರುದಿನ ಉಡುಪಿ ಕೃಷ್ಣ ಮಠದ ಬಳಿ ಆಕೆಯನ್ನು ಅರೆಸ್ಟ್‌ ಮಾಡಿದ್ದರು ಸಿಸಿಬಿ ಪೊಲೀಸರು. ಅದರ ನಡುವೆ ಹಾಲಶ್ರೀ ಸ್ವಾಮೀಜಿಗೆ ತನ್ನ ಬಂಧನದ ವಾಸನೆ ಬಡಿದಿದೆ. ಸೆಪ್ಟೆಂಬರ್‌ 11ರ ರಾತ್ರಿ 11 ಗಂಟೆಯ ಹೊತ್ತಿಗೆ ಯಾರಿಗೂ ಹೇಳದೆ ಮಠವನ್ನು ಬಿಟ್ಟು ಹೊರಟಿದ್ದರು ಸ್ವಾಮೀಜಿ. ಹೇಳಿದ್ದು ತನ್ನ ಕಾರು ಚಾಲಕನಾದ ನಿಂಗರಾಜುಗೆ ಮಾತ್ರ.

ಹಾಲಸ್ವಾಮಿ ಸಂಸ್ಥಾನ ಮಠ ಹಿರೇಹಡಗಲಿ

ಹಿರೇಹಡಗಲಿ ಟು ಮೈಸೂರು!

ಸೆಪ್ಟೆಂಬರ್‌ 11ರ ರಾತ್ರಿ ಹನ್ನೊಂದರ ಹೊತ್ತಿಗೆ ಮಠವನ್ನು ಬಿಟ್ಟು ತನ್ನ ಕಾರಿನ ಚಾಲಕ ನಿಂಗರಾಜು ಜತೆಗೆ ಹೊರಟಿದ್ದರು. ಅಲ್ಲಿಂದ ಅವರು ಬಂದು ತಲುಪಿದ್ದು ಮೈಸೂರಿಗೆ. ಸೆ.12ರಂದು ಮೈಸೂರಿನ ಎಚ್‌ಎಎಲ್‌ ವೀರಸ್ವಾಮಿ ಮಠದಲ್ಲಿ ಅವರು ಒಂದು ದಿನ ಕಳೆದಿದ್ದರು. ಆದರೆ, ಇದು ಯಾರಿಗೂ ಗೊತ್ತಿರಲಿಲ್ಲ. ಅತ್ತ ಹಿರೇಹಡಗಲಿ ಮಠಕ್ಕೆ ಹೋಗಿದ್ದ ಪೊಲೀಸರಿಗೆ ಅಲ್ಲಿ ಸ್ವಾಮೀಜಿ ಕಾಣಲಿಲ್ಲ. ಅವರು ಹುಡುಕಾಟ ಶುರು ಮಾಡಿದ್ದರು.

ಸೆಪ್ಟೆಂಬರ್‌ 12ರ ದಿನವನ್ನು ಕಳೆಯುತ್ತಿದ್ದಂತೆಯೇ ರಾತ್ರಿ ಹೊತ್ತಿಗೆ ಅವರಿಗೆ ಚೈತ್ರಾ ಮತ್ತು ಇತರರ ಬಂಧನದ ಸುದ್ದಿ ಬರುತ್ತದೆ. ಸೆ.13ರ ಬೆಳಗ್ಗೆಯೇ ಎದ್ದವರು ಅವರು ಮೈಸೂರಿನ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಪೂರ್ವ ಮೊಬೈಲ್ ಸ್ಟೋರ್‌ಗೆ ಹೋಗುತ್ತಾರೆ. ಅಲ್ಲಿ ಸ್ವಾಮೀಜಿ ಖರೀದಿ ಮಾಡಿದ್ದು ನಾಲ್ಕು ಹೊಸ ಮೊಬೈಲ್ ಹಾಗೂ ನಾಲ್ಕು ಸಿಮ್!

ಅಲ್ಲಿ ಖರೀದಿಸಿದ ಎರಡು ಮೊಬೈಲ್‌ ಮತ್ತು ಎರಡು ಸಿಮ್‌ಗಳನ್ನು ಸ್ವಾಮೀಜಿ ಬಳಸಲು ಶುರು ಮಾಡುತ್ತಾರೆ. ಇದು ಯಾರಿಗೂ ಗೊತ್ತಿಲ್ಲದ ನಂಬರ್‌ ಆಗಿರುವುದರಿಂದ ಅವರಿಗೆ ಬೇಕಾದವರಿಗೆ ಮಾತ್ರ ಮಾತನಾಡಲು ಬಳಸುತ್ತಾರೆ. ಅಪ್ಪಿ ತಪ್ಪಿಯೂ ಚೈತ್ರಾ ಕುಂದಾಪುರ ಟೀಮನ್ನು ಸಂಪರ್ಕ ಮಾಡುವುದಿಲ್ಲ.

50 ಲಕ್ಷ ರೂ. ತರಿಸಿಕೊಂಡರು ಸ್ವಾಮೀಜಿ!

ಆವತ್ತು ಮೈಸೂರಿನ ಆಶ್ರಮಕ್ಕೆ ಮರಳಿದ ಸ್ವಾಮೀಜಿ ಮಧ್ಯಾಹ್ನದ ಹೊತ್ತು ತನ್ನ ಕಾರು ಚಾಲಕ ನಿಂಗರಾಜುವನ್ನು ಕರೆದು ಪ್ರಣವ್‌ ಎಂಬಾತನ ಬಳಿಗೆ ಕಳುಹಿಸುತ್ತಾರೆ. ಪ್ರಣವ್‌ ಮೈಸೂರಿನಲ್ಲಿರುವ ಸ್ವಾಮೀಜಿ ಆಪ್ತ. ಆತನಲ್ಲಿ ಸ್ವಾಮೀಜಿ ಸುಮಾರು 50 ಲಕ್ಷ ರೂ. ಹಣವನ್ನು ಕೊಟ್ಟಿದ್ದರು. ಅದನ್ನು ಪ್ರಣವ್‌ ಚಾಲಕ ನಿಂಗರಾಜು ಕೈಗೆ ಕೊಡುತ್ತಾನೆ. ನಿಂಗರಾಜು ಅದನ್ನು ಸ್ವಾಮೀಜಿಗೆ ತಂದುಕೊಡುತ್ತಾನೆ.

ಜಾಮೀನಿಗೆ ಪ್ರಯತ್ನಿಸುವ ಹಾಲಶ್ರೀ ಸ್ವಾಮೀಜಿ

ಇತ್ತ ಇಡೀ ರಾಜ್ಯದಲ್ಲಿ ಚೈತ್ರಾ ಕುಂದಾಪುರ ಪ್ರಕರಣ ಬೆಂಕಿ ಬಿರುಗಾಳಿಯ ಹಾಗೆ ಹರಡಿತ್ತು. ಹಾಲಶ್ರೀ ಸ್ವಾಮೀಜಿಯ ಎದೆಯಲ್ಲಿ ಸಾವಿನ ಒನಕೆಗಳ ಡವಡವ. ಈ ಹಂತದಲ್ಲೂ ಆಶಾವಾದ ಕಳೆದುಕೊಳ್ಳದ ಅವರು ತಮ್ಮ ಆತ್ಮೀಯ ವಕೀಲರನ್ನು ಸಂಪರ್ಕಿಸಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಸೆಪ್ಟೆಂಬರ್‌ 15ರಂದು ನಡೆದ ಮೊದಲ ವಿಚಾರಣೆಯಲ್ಲಿ ಜಾಮೀನು ಸಿಗುವುದಿಲ್ಲ. ಇನ್ನು ಇಲ್ಲೇ ಉಳಿದರೆ ಯಾವುದೇ ಕ್ಷಣದಲ್ಲಾದರೂ ಪೊಲೀಸರು ಬಾಗಿಲುಬಡಿಯುವುದು ಗ್ಯಾರಂಟಿ ಎಂಬ ತೀರ್ಮಾನಕ್ಕೆ ಬರುತ್ತಾರೆ ಹಾಲಶ್ರೀ. ಆಗ ಶುರುವಾಗುವುದೇ ಪರಾರಿ ಪ್ಲ್ಯಾನ್‌.

ಕಾರನ್ನು ಪ್ರಣವ್‌ ಮನೆಯಲ್ಲಿ ನಿಲ್ಲಿಸಿ ಪರಾರಿ ಪ್ಲ್ಯಾನ್‌!

ತಾನು ಹಿರೇಹಡಗಲಿಯಿಂದ ಮೈಸೂರಿಗೆ ಬಂದಿರುವ ಕಾರು ತನ್ನನ್ನು ಸಿಕ್ಕಿಸಿ ಹಾಕೀತು ಎಂಬ ಸಂಶಯ ಮೂಡುತ್ತಿದ್ದಂತೆಯೇ ಕಾರಿನ ನಂಬರ್‌ ಪ್ಲೇಟ್‌ ತೆಗೆದು ಪ್ರಣವ್‌ನ ಮನೆಯಲ್ಲಿ ಇಡಿಸುತ್ತಾರೆ. ಇನ್ನು ಇಲ್ಲಿಸುವುದು ಸೇಫ್‌ ಅಲ್ಲ ಅನಿಸುತ್ತಿದ್ದಂತೆಯೇ ಸ್ವಾಮೀಜಿ ಪರಾರಿಯಾಗುತ್ತಾರೆ.

ನೀವು ನಂಬಲೇಬೇಕು. ಆವತ್ತು ಮೈಸೂರಿನಿಂದ ಸ್ವಾಮೀಜಿ ಹೊರಟಿದ್ದು ಯಾವುದೋ ಬಸ್‌ ಹತ್ತಿ. ಇತ್ತೀಚಿನ ವರ್ಷಗಳಲ್ಲಿ ಪ್ರಖರ ಸ್ವಾಮೀಜಿಯಾಗಿ ಬೆಳಗುತ್ತಿದ್ದ ಹಾಲಶ್ರೀ ಬಹುಶ: ಸೆಪ್ಟೆಂಬರ್‌ 16ರಂದು ಮೈಸೂರಿನ ಸರ್ಕಾರಿ ಬಸ್‌ ನಿಲ್ದಾಣದಿಂದ ಬಸ್‌ ಹತ್ತಿ ಪರಾರಿಯಾಗುತ್ತಾರೆ. ಅದೂ ಒಬ್ಬಂಟಿಯಾಗಿ!.

ಮೈಸೂರಿನಿಂದ ಹೈದರಾಬಾದ್‌ಗೆ ಹೋಗುವ ಬಸ್ಸಿನಲ್ಲಿ ಕುಳಿತ ಸ್ವಾಮೀಜಿ ಅತ್ತ ಹೋಗುತ್ತಿದ್ದಂತೆಯೇ ಸ್ವಾಮೀಜಿಯ ಕಾರು ಚಾಲಕ ನಿಂಗರಾಜುವಿನ ಹೆಗಲ ಮೇಲೆ ಸಿಸಿಬಿ ಪೊಲೀಸರ ಕೈಬೀಳುತ್ತದೆ. ಬಹುಶಃ ಕೆಲವು ಗಂಟೆಗಳ ಮೊದಲು ಅವನ ಅರೆಸ್ಟ್‌ ಆಗುತ್ತಿದ್ದರೆ ಸ್ವಾಮೀಜಿ ಮೈಸೂರಿನಲ್ಲಿ ಸಿಕ್ಕಿಬೀಳುತ್ತಿದ್ದರು.

ಇಷ್ಟೆಲ್ಲ ಕಥೆ ಹೇಳಿದ್ದು ನಿಂಗರಾಜು!

ನಿಜವೆಂದರೆ ಇದುವರೆಗೆ ಹೇಳಿದ ಇದಿಷ್ಟೂ ಕಥೆಗಳನ್ನು ಪೊಲೀಸರಿಗೆ ಹೇಳಿದ್ದು ನಿಂಗರಾಜು. ಅದುವರೆಗೂ ಯಾರ ಕೈಗೂ ಸಿಗದೆ ಇದ್ದ ನಿಂಗರಾಜು ಸ್ವಾಮೀಜಿ ಹೈದರಾಬಾದ್‌ ಬಸ್‌ ಹತ್ತುತ್ತಿದ್ದಂತೆಯೇ ಸಿಕ್ಕಿಬಿದ್ದ. ಅವನನ್ನು ಕರೆದುಕೊಂಡು ಹೋಗಿ ಕೂರಿಸಿ ವಿಚಾರಿಸಿದಾಗ ಹಿರೇಹಡಗಲಿ, ಮೈಸೂರಿನ ಆಶ್ರಮ, ಅಪೂರ್ವ ಮೊಬೈಲ್‌, ಅದರ ನಂಬರ್‌, ಮೈಸೂರು ಬಸ್‌ ನಿಲ್ದಾಣ, ಹೈದರಾಬಾದ್‌ ಬಸ್‌ ಎಲ್ಲ ಕಥೆ ಹೇಳಿದ. ಆಗ ಅವನು ಕೊಟ್ಟ ಒಂದೇ ಒಂದು ಕ್ಲೂ ಇವತ್ತು ಕಟಕ್‌ನಲ್ಲಿ ಸ್ವಾಮೀಜಿಯ ಬಂಧನಕ್ಕೆ ಕಾರಣವಾಗಿದೆ. ಆ ಕ್ಲೂ ಏನು?

ಹೈದರಾಬಾದ್‌ನಿಂದ ಶ್ರೀಶೈಲಕ್ಕೆ ಹೋದ ಸ್ವಾಮೀಜಿ

ಇತ್ತ ಮೈಸೂರಿನಿಂದ ಹೈದರಾಬಾದ್‌ ಬಸ್‌ ಹತ್ತಿದ ಸ್ವಾಮೀಜಿಗೆ ನಿಂಗರಾಜು ಅರೆಸ್ಟ್‌ ಸುದ್ದಿ ಬರಸಿಡಿಲಿನಂತೆ ಬಡಿಯಿತು. ಒಂದೊಮ್ಮೆ ತಾನು ಹೈದರಾಬಾದ್‌ಗೆ ಹೋಗಿದ್ದೇನೆ ಎಂದು ಗೊತ್ತಾದರೆ ಬೆನ್ನಟ್ಟುತ್ತಾರೆ ಎಂದು ತಿಳಿದ ಸ್ವಾಮೀಜಿ ಅಲ್ಲಿಂದಲೇ ಶ್ರೀಶೈಲದ ಕಡೆಗೆ ಸಾಗುತ್ತದೆ. ಆದರೆ, ಈ ವಿಷಯವೂ ಪೊಲೀಸರಿಗೆ ಗೊತ್ತಾಗುತ್ತಿದೆ ಎಂಬ ಸಣ್ಣ ಸುಳಿವೊಂದು ಸ್ವಾಮೀಜಿಯನ್ನು ಕಾಡುತ್ತದೆ. ಹೀಗಾಗಿ ಅವರು ಪೂರಿಗೆ ಹೋಗುತ್ತಾರೆ, ಅಲ್ಲಿಂದ ಗಂಜಾಂ, ಮುಂದೆ ಕಟಕ್‌ನಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಪೂರಿ ಜಗನ್ನಾಥ ದೇವಸ್ಥಾನ, ಕೋನಾರ್ಕ್‌ನ ಸೂರ್ಯ ದೇವಾಲಯಕ್ಕ ಹೋಗಿ ಒಂದು ಒಂದು ಸಲ ಪಾರು ಮಾಡು ಎಂದು ಬೇಡುವ ಸ್ವಾಮೀಜಿಗೆ ಈತ ತನ್ನ ಹಿಂದೆ ಯಾವ ದೇವರೂ ಇಲ್ಲ, ಇರುವುದು ಸಿಸಿಬಿ ಎಂಬ ಸತ್ಯ ಗೊತ್ತಾಗುತ್ತದೆ. ಆದರೂ ಅವರು ಒಂದು ತೀರ್ಮಾನಕ್ಕೆ ಬರುತ್ತಾರೆ. ಬದುಕಿದರೆ ಬೇಡಿ ತಿಂದೇನು? ಹೇಗಾದರೂ ಮಾಡಿ ಕಾಶಿಯನ್ನು ಸೇರಿಕೊಳ್ಳುತ್ತಾನೆ. ಅಲ್ಲಿ ಹೇಗಾದರೂ ತಪ್ಪಿಸಿಕೊಂಡು ಬದುಕಬಹುದು ಎನ್ನುವುದು ಅವರ ಪ್ಲ್ಯಾನ್‌ ಆಗಿತ್ತು. ಹೀಗಾಗಿ ಕಟಕ್‌ನ ರೈಲ್ವೇ ನಿಲ್ದಾಣಕ್ಕೆ ಹೋಗಿ ಕಾಶಿಗೆ ಟಿಕೆಟ್‌ ಮಾಡುತ್ತಾರೆ. ಆ ಟಿಕೆಟ್‌ ಮತ್ತು ಅದರ ಪಿಎನ್‌ಆರ್‌ ನಂಬರೇ ಅವರನ್ನು ಮತ್ತೆ ಬೆಂಗಳೂರಿಗೆ ತಂದು ನಿಲ್ಲಿಸಿದೆ, ಅರ್ಥಾತ್‌ ಅವರ ಬಂಧನಕ್ಕೆ ಕಾರಣವಾಗಿದೆ.

ಸ್ವಾಮೀಜಿಯ ಮೊಬೈಲ್‌ ಟ್ರ್ಯಾಕ್‌ ಆಗುತ್ತಿತ್ತು!

ಇತ್ತ ನಿಂಗರಾಜುವನ್ನು ಬಂಧಿಸಿದ ಪೊಲೀಸರು ಸ್ವಾಮೀಜಿ ಮೈಸೂರಿನಲ್ಲಿದ್ದಾಗ ಏನೇನು ಮಾಡಿದ್ದರು ಎಂಬುದರ ಎಲ್ಲ ಡಿಟೇಲ್ಸ್‌ ಪಡೆಯುತ್ತಾರೆ. ಅಪೂರ್ವ ಮೊಬೈಲ್ಸ್‌ನಲ್ಲಿ ಖರೀದಿಸಿದ ಮೊಬೈಲ್‌ ಮತ್ತು ಅದಕ್ಕೆ ಹಾಕಿದ ಸಿಮ್‌ ಅವರಿಗೆ ಹಲವು ಕ್ಲೂಗಳನ್ನು ಕೊಡುತ್ತದೆ. ಅಪೂರ್ವ ಮೊಬೈಲ್‌ನಿಂದ ಮೊಬೈಲ್‌ನ ಐಎಂಇ ನಂಬರ್‌ ಮತ್ತು ಸಿಮ್‌ ನಂಬರ್‌ಗಳನ್ನು ಸಂಗ್ರಹಿಸಿ ಟ್ರ್ಯಾಕ್‌ಗೆ ಹಾಕುತ್ತಾರೆ. ಆದರೆ, ಮೊಬೈಲ್‌ಗಳು ಗಂಟೆಗೊಂದು ಬದಲಾಗುತ್ತಾ ದಿಕ್ಕು ತಪ್ಪಿಸುತ್ತಾ ಇರುತ್ತವೆ. ಆದರೆ ಕಟಕ್‌ನಿಂದ ಕಾಶಿಗೆ ತೆರಳಲು ಮಾಡಿದ ಟಿಕೆಟ್‌ ಮಾತ್ರ ಪಕ್ಕಾ ಆಗಿ ಸಿಸಿಬಿ ಪೊಲೀಸರ ಕೈಗೆ ಸಿಗುತ್ತದೆ.

ಅದರಲ್ಲಿ ಕಟಕ್‌ ನಿಲ್ದಾಣದಿಂದ ಸ್ವಾಮೀಜಿ ಎಷ್ಟು ಹೊತ್ತಿಗೆ ಹೊರಡುತ್ತಾರೆ, ಯಾವ ಬೋಗಿ, ಯಾವ ಸೀಟು ಎನ್ನುವ ಸರ್ವ ಮಾಹಿತಿಗಳು ಸಿಗುತ್ತವೆ. ಅದು ಭಾನುವಾರ (ಸೆ. 18) ರಾತ್ರಿ 9 ಗಂಟೆಯ ಹೊತ್ತಿಗೆ ಕಟಕ್‌ ನಿಲ್ದಾಣದ ಮೂಲಕ ಸಾಗುವ ಟ್ರೇನು. ಈ ಟೈಮಲ್ಲಿ ರೈಲಿನಲ್ಲಿ ಚೆಕ್‌ ಮಾಡಿ ಸ್ವಾಮೀಜಿಯನ್ನು ಬಂಧಿಸುವುದಕ್ಕಾಗಿ ಕಟಕ್‌ ಪೊಲೀಸರಿಗೆ ಎಲ್ಲ ರೀತಿಯ ಮಾಹಿತಿಯನ್ನು ನೀಡಲಾಗಿರುತ್ತದೆ. ಹಾಗೆಯೇ ಅವರು ಅದೇ ಹೊತ್ತಿಗೆ, ಅದೇ ರೈಲು, ಅದೇ ಬೋಗಿ, ಅದೇ ಸೀಟಿನ ಪಕ್ಕ ಹೋಗಿ ನಿಂತರೆ ಅಲ್ಲಿ ಯಾರೂ ಇರುವುದಿಲ್ಲ.

ಇದನ್ನೂ ಓದಿ: Halashri Swameeji: ಹಾಲ ಮಠದ ಚರಿತ್ರೆಯಲ್ಲಿ ಕಪ್ಪು ಚುಕ್ಕೆ; ಕರ್ನಾಟಕದ ಯೋಗಿಯಾಗುವ ಕನಸು ಹೊತ್ತಿದ್ದ ಹಾಲಶ್ರೀ!

ಕೊನೆಯ ಕ್ಷಣದಲ್ಲೂ ಚಮಕ್‌ ಕೊಟ್ಟ ಸ್ವಾಮೀಜಿ!

ಕಟಕ್‌ ಪೊಲೀಸರು ತಾವು ಯಾಮಾರಿದೆವು ಎಂಬ ತಿಳಿದುಕೊಳ್ಳುತ್ತಾರೆ. ಆದರೂ ಪ್ರಯತ್ನ ಬಿಡುವುದಿಲ್ಲ. ಟ್ರೇನು ಆ ನಿಲ್ದಾಣ ಬಿಟ್ಟು ಮುಂದಿನ ನಿಲ್ದಾಣದತ್ತ ಹೊರಡುತ್ತದೆ. ಮುಂದಿನ ನಿಲ್ದಾಣದಲ್ಲಿ ಆ ಬೋಗಿಯ ಆ ಸೀಟಿಗೆ ಒಬ್ಬ ವ್ಯಕ್ತಿ ಬಂದು ಕುಳಿತುಕೊಳ್ಳುತ್ತಾರೆ. ಕಟಕ್‌ನ ಆ ಪೊಲೀಸರು ಈಗಲೂ ಯಾಮಾರಿದೆವು ಅಂದುಕೊಳ್ಳುತ್ತಾರೆ. ಯಾಕೆಂದರೆ, ಅಲ್ಲಿ ಬಂದು ಕುಳಿತ ಆ ವ್ಯಕ್ತಿ ಸ್ವಾಮೀಜಿ ಆಗಿರಲಿಲ್ಲ. ಒಬ್ಬ ಟೀಶರ್ಟ್‌, ಬರ್ಮುಡಾ ಹಾಕಿಕೊಂಡ ಯಾವನೋ ಆಗಿರುತ್ತಾನೆ. ಆಗ ಮತ್ತೆ ಬೆಂಗಳೂರು ಪೊಲೀಸರನ್ನು ಸಂಪರ್ಕಿಸುತ್ತಾರೆ. ಆಗ ಸಿಸಿಬಿ ಪೊಲೀಸರು ವ್ಯಕ್ತಿ ಯಾರೇ ಆಗಿರಲಿ ಇಳಿಸಿ ವಿಚಾರಣೆ ನಡೆಸಿ ಎನ್ನುತ್ತಾರೆ. ಹಾಗೆ ಅಲ್ಲಿ ಇಳಿಸುವಾಗ ರಾತ್ರಿ 9.25. ಇಳಿಸಿದ ವ್ಯಕ್ತಿಯನ್ನು ಸಣ್ಣಗೆ ವಿಚಾರಣೆ ನಡೆಸಿದಾಗಲೇ ಇದು ಹಾಲಶ್ರೀ ಸ್ವಾಮೀಜಿ ಎನ್ನುವುದು ಗೊತ್ತಾಗುತ್ತದೆ. ಭಯದಿಂದ ನಡುಗುತ್ತಿದ್ದ ಸ್ವಾಮೀಜಿ ಅಲ್ಲೇ ಕುಸಿದುಕುಳಿತುಕೊಳ್ಳುತ್ತಾರೆ. ಹಣದ ಆಸೆಯಿಂದಾಗಿ ಮಾಡಿಕೊಂಡ ಎಡವಟ್ಟು ಕಟ್ಟಿಕೊಂಡ ಭ್ರಮಾಗೋಪುರಗಳೆಲ್ಲವನ್ನೂ ಧರಾಶಾಯಿಯಾಗಿಸಿದ್ದು ಆ ಕ್ಷಣ ಅವರ ಅರಿವಿಗೆ ಬಂದೇ ಬಂದಿರುತ್ತದೆ. ಮುಂದೆ ಉಳಿದದ್ದು ಬೆಂಗಳೂರಿಗೆ ಪಯಣ, ವಿಚಾರಣೆ ಮತ್ತು ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ. ಇದರ ನಡುವೆ ಮತ್ತೆ ಹಿರೇಹಡಗಲಿಯ ಆ ಮಹಾ ಮಠಕ್ಕೆ ಇದೇ ಸ್ವಾಮೀಜಿ ಹೋಗಲಿದ್ದಾರೆ. ಆದರೆ, ಸ್ವಾಮೀಜಿ ಆಗಿ ಅಲ್ಲ, ಒಬ್ಬ ಆರೋಪಿಯಾಗಿ. ಇದು ಸ್ವಾಮೀಜಿಯ ರೋಚಕ ಟ್ರಾವೆಲ್‌ ಹಿಸ್ಟರಿ. ಹೇಗಿದ್ದ ಸ್ವಾಮೀಜಿ ಹೇಗಾಗಿ ಹೋದರು ಅಲ್ವಾ?

Exit mobile version