Site icon Vistara News

Love Trust Aur Dhokha: ಪ್ರೀತಿ ಅರಸಿ ಕೆನಡಾದಿಂದ ಹರಿಯಾಣಕ್ಕೆ ಬಂದ ಪ್ರಿಯತಮೆಯನ್ನೇ ಕೊಂದ ದುರುಳ

Love Trust Aur Dhokha

Love Trust Aur Dhokha

ಚಂಡೀಗಢ: ಆಧುನಿಕ ಕಾಲದಲ್ಲಿ ಹೆಚ್ಚಿನ ಪ್ರೇಮ ಪ್ರಕರಣಗಳು ಬ್ರೇಕ್‌ಅಪ್‌ನಲ್ಲಿ ಅಂತ್ಯವಾಗುತ್ತವೆ. ಆದರೆ, ತೀರಾ ಇತ್ತೀಚೆಗೆ ಹೆಚ್ಚಿನ ಪ್ರೇಮ ಪ್ರಕರಣಗಳು ದುರದೃಷ್ಟಕರ. ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ವಾಳ್ಕರ್‌ ಎಂಬ ಯುವತಿಯನ್ನು ತುಂಡು ತುಂಡಾಗಿ ಕತ್ತರಿಸಿ, ದೆಹಲಿಯ ಹಲವೆಡೆ ಎಸೆದಿದ್ದು ಸೇರಿ ಪ್ರಿಯತಮೆಯನ್ನೇ ಕೊಂದ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ದೂರದ ಕೆನಡಾದಿಂದ ನೋಡಲು ಹರಿಯಾಣಕ್ಕೆ ಬಂದ ಪ್ರಿಯತಮೆಯನ್ನೇ ದುರುಳನು ಕೊಂದು (Love Trust Aur Dhokha) ಹಾಕಿದ್ದಾನೆ. ಪ್ರಕರಣವನ್ನು ಪೊಲೀಸರು ಒಂದು ವರ್ಷದ ಬಳಿಕ ಭೇದಿಸಿದ್ದು ವಿಶೇಷವಾಗಿದೆ.

ಹರಿಯಾಣದ ರೋಹ್ಟಕ್‌ ನಿವಾಸಿಯಾದ ಮೋನಿಕಾ, ಉನ್ನತ ವಿದ್ಯಾಭ್ಯಾಸಕ್ಕಾಗಿ ಕಳೆದ ವರ್ಷ ಕೆನಡಾಗೆ ತೆರಳಿದ್ದರು. ಆದರೆ, ಸುನೀಲ್‌ ಎಂಬ ಪ್ರಿಯತಮನನ್ನು ಭೇಟಿಯಾಗಲು ಕೆನಡಾಗೆ ತೆರಳಿದ ಕೆಲವೇ ತಿಂಗಳಲ್ಲಿ ವಾಪಸಾಗಿದ್ದರು. ಆದರೆ, ಪ್ರಿಯತಮನನ್ನು ನೋಡುವ ಖುಷಿಯಲ್ಲಿ ತಂದೆ-ತಾಯಿಗೂ ಹೇಳದೆ ಹರಿಯಾಣಕ್ಕೆ ಬಂದ ಯುವತಿಯನ್ನು ಸುನೀಲನು 2022ರ ಜೂನ್‌ನಲ್ಲಿ ಕೊಲೆ ಮಾಡಿದ್ದಾನೆ. ಇದುವರೆಗೆ ಯುವತಿಯು ನಾಪತ್ತೆಯಾಗಿದ್ದಾಳೆ ಎಂದೇ ಭಾವಿಸಲಾಗಿತ್ತು. ಈಗ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ಇಬ್ಬರೂ ಮದುವೆ ಆಗಿದ್ದರು

ಸೋನಿಪತ್‌ನ ಗುಮಾಡ್‌ ಗ್ರಾಮದಲ್ಲಿ ಸುನೀಲ್‌ ಹಾಗೂ ಮೋನಿಕಾ ಅಕ್ಕಪಕ್ಕದ ಮನೆಯವರು. ಮೋನಿಕಾ ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿದ್ದಳು. ಇದೇ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಸುನೀಲ್‌ಗೆ ಈಗಾಗಲೇ ಮದುವೆಯಾಗಿದ್ದನ್ನು ಗೊತ್ತಿದ್ದರೂ ಆತನನ್ನು ಮೋನಿಕಾ ಒಪ್ಪಿದ್ದರು. ಕೆನಡಾದಿಂದ ಬಂದ ಮೋನಿಕಾ ಹಾಗೂ ಸುನೀಲ್‌ ಘಾಜಿಯಾಬಾದ್‌ನ ದೇವಾಲಯವೊಂದರಲ್ಲಿ ಮದುವೆಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಆಕೆಯನ್ನು ಗುಂಡಿಕ್ಕಿ ಕೊಂದ ಸುನೀಲ್‌, ಫಾರ್ಮ್‌ಹೌಸ್‌ನಲ್ಲಿ ಹೂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಾಪತ್ತೆ ಎಂದು ದೂರು ನೀಡಿದ ಪೋಷಕರು

ಮೋನಿಕಾ ಭಾರತಕ್ಕೆ ಬಂದಿರುವುದು ಆಕೆಯ ಪೋಷಕರಿಗಾಗಲಿ, ಸಂಬಂಧಿಕರಿಗಾಗಲಿ ಗೊತ್ತಿರಲಿಲ್ಲ. ಕೆಲವು ದಿನಗಳ ಬಳಿಕ ಮೋನಿಕಾ ಫೋನ್‌ಗೆ ಕಾಲ್‌ ರೀಚ್‌ ಆಗದ ಕಾರಣ ಗಾಬರಿಗೊಂಡಿದ್ದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಆಕೆಯು ಕಳೆದ ವರ್ಷದ ಮೇ ಹಾಗೂ ಜೂನ್‌ ತಿಂಗಳಲ್ಲಿ ಎರಡು ಬಾರಿ ಭಾರತಕ್ಕೆ ಬಂದಿರುವುದು ಗೊತ್ತಾಗಿದೆ. ಇದೇ ತಿರುಳನ್ನು ಇಟ್ಟುಕೊಂಡು ಪೊಲೀಸರು ತನಿಖೆ ನಡೆಸಿದಾಗ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.

ಮೋನಿಕಾ ಭಾರತಕ್ಕೆ ಬಂದಿರುವುದು, ಆಕೆಯ ದೂರವಾಣಿ ಕರೆಗಳನ್ನು ಆಧರಿಸಿ ಪೊಲೀಸರು ಸುನೀಲ್‌ನನ್ನು ಬಂಧಿಸಿದ್ದಾರೆ. ಆತನಿಗೆ ಈಗಾಗಲೇ ಮದುವೆಯಾಗಿ, ಇಬ್ಬರು ಮಕ್ಕಳಿರುವುದು ಕೂಡ ಬಹಿರಂಗವಾಗಿದೆ. ಪೊಲೀಸರು ತನಿಖೆ ನಡೆಸುವ ವೇಳೆ ಸುನೀಲನು ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಎರಡು ಬಾರಿ ಗುಂಡು ಹಾರಿಸಿ ಮೋನಿಕಾಳನ್ನು ಹತ್ಯೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Valentine’s Day: ಪ್ರೇಮಿಗಳ ದಿನಕ್ಕೂ ಮೊದಲೇ ಪ್ರೇಯಸಿ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ರಾಡ್‌ ತುರುಕಿ ಹತ್ಯೆಗೈದ ಕೀಚಕ

Exit mobile version