Site icon Vistara News

HD Kumaraswamy : ಮಂಚದ ಕೆಳಗೆ 42 ಕೋಟಿ!; ಇದು ಕಮಿಷನ್‌ ಕಲೆಕ್ಷನ್‌ ಹಣವೇ ಎಂದು ಕೇಳಿದ HDK

HD Kumaraswamy IT Raid

ಬೆಂಗಳೂರು: ರಾಜಧಾನಿಯ ಹಲವೆಡೆ ನಡೆದ ಐಟಿ ದಾಳಿ (IT Raid) ಮತ್ತು ಗುತ್ತಿಗೆದಾರ ಅಂಬಿಕಾಪತಿ ಮನೆಯ ಮಂಚದಡಿ ಸಿಕ್ಕಿದ 42 ಕೋಟಿ ರೂ. ಹಣಕ್ಕೂ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಆರೋಪಿಸಲಾದ ಕಲೆಕ್ಷನ್‌ಗೂ ಸಂಬಂಧ ಬೆಸೆದಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy)

ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು? ಇದು ಕಲೆಕ್ಷನ್‌ ಹಣ, ಪರ್ಸೆಂಟೇಜ್‌ ಹಣ ಎಂದು ಆಪಾದನೆ ಮಾಡಿರುವ ಎಚ್‌.ಡಿ ಕುಮಾರಸ್ವಾಮಿ ಅವರು ಇದು ಡಿ.ಕೆ. ಶಿವಕುಮಾರ್‌ ಅವರ ಕಲೆಕ್ಷನಾ ಎಂದು ಪ್ರಶ್ನೆ ಮಾಡಿದ್ದಾರೆ. ಜತೆಗೆ ಇದರ ಬಗ್ಗೆ ಯಾವ ರೀತಿಯ ತನಿಖೆ ನಡೆಸುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿದ್ದಾರೆ. ಕರ್ನಾಟಕಕ್ಕೆ ಕಾಂಗ್ರೆಸ್ ಕನ್ನ ಎಂಬ ಹ್ಯಾಷ್‌ ಟ್ಯಾಗ್‌ನಡಿ ಅವರು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: HD Kumaraswamy : ಕತ್ತಲೆ ಭಾಗ್ಯ 6ನೇ ಗ್ಯಾರಂಟಿ; ನವರಾತ್ರಿಗೆ ಮೊದಲೇ ಕರಾಳ ರಾತ್ರಿ ಎಂದ HDK

ಎಚ್.ಡಿ ಕುಮಾರಸ್ವಾಮಿ ಮಾಡಿರುವ ಖಡಕ್‌ ಟ್ವೀಟ್‌ಗಳು ಇಲ್ಲಿವೆ

  1. ಪಂಚರಾಜ್ಯ ಚುನಾವಣೆ ಘೋಷಣೆ ಆಗಿದ್ದೇ ತಡ, ರಾಜ್ಯದಲ್ಲಿ ಕುರುಡು ಕಾಂಚಾಣ ಕಂತೆ ಕಂತೆಯಾಗಿ ಕಾಟನ್ ಬಾಕ್ಸ್ ಗಳಲ್ಲಿ ಕುಣಿಯುತ್ತಿದೆ! ಅದೂ ಮಂಚದ ಕೆಳಗೆ!!
  2. ಐಟಿದಾಳಿ ವೇಳೆ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು? ಯಾರ ಹೆಣದ ಮೇಲೆ ಸಂಗ್ರಹಿಸಿದ ಪಾಪದ ಹಣವಿದು? ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ.
  3. ಆಯ್ದ ಗುತ್ತಿಗೆದಾರರಿಗೆ ಬಿಬಿಎಂಪಿಯಿಂದ 650 ಕೋಟಿ ರೂ. ಬಿಡುಗಡೆಯಾದ ಬೆನ್ನಲ್ಲೇ ಈ 42 ಕೋಟಿ ರೂ. ಐಟಿ ಅಧಿಕಾರಿಗಳಿಗೆ ಸಿಕ್ಕಿಬೀಳುತ್ತದೆ. ಅಲ್ಲಿಗೆ ಕಲೆಕ್ಷನ್ ನಿಜ ಎಂದಾಯಿತು. ಅದು ಎಷ್ಟು ಪರ್ಸಂಟೇಜ್? ಅದರ ಹಿಂದೆ ಅಡಗಿ ಕೂತಿರುವ ಆದಿಪುರುಷರು ಯಾರು?
  4. 23 ಬಾಕ್ಸ್ ಗಳಲ್ಲಿ ತುಂಬಿಡಲಾಗಿದ್ದ ಈ ಇಡಗಂಟು ಪಕ್ಕದ ತೆಲಂಗಾಣಕ್ಕೆ ಹೊರಟು ನಿಂತಿತ್ತು ಎನ್ನುವುದು ಮಾಹಿತಿ. ಅಲ್ಲಿಗೆ ಚುನಾವಣೆಗಾಗಿ ಈ ಹಣವನ್ನು ಸಂಗ್ರಹ ಮಾಡಲಾಗಿತ್ತು ಎನ್ನುವುದು ಸತ್ಯ. ಈ ಕನಕ ಮಹಾಲಕ್ಷ್ಮಿಯ ಕಲೆಕ್ಷನ್ ಗೆ ‘ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ’ಯ ಕೈ ಕರಾಮತ್ತು ಅಂತ ಇನ್ನೊಂದು ಮಾಹಿತಿ. ಅಷ್ಟರಲ್ಲಿ ಐಟಿ ಇಲಾಖೆ ಮುಗಿಬಿದ್ದ ಪರಿಣಾಮ, ಗುಟ್ಟು ರಟ್ಟಾಗಿದೆ. ಅಲ್ಲಿಗೆ ಕರ್ನಾಟಕದ ಕಾಂಗ್ರೆಸ್‌ ಸರಕಾರದಲ್ಲಿ ಪರ್ಸಂಟೇಜ್ ಪಾರಮ್ಯ ಅವ್ಯಾಹತ ಎಂದಾಯಿತು?
  5. ಈಗ ಹೇಳಿ ಸನ್ಮಾನ್ಯ ಸಿದ್ದರಾಮಯ್ಯನವರೇ.. 42 ಕೋಟಿ ರೂ. ಬಗ್ಗೆ ಯಾವ ತನಿಖೆ ಮಾಡಿಸುತ್ತೀರಿ? ಸಿಬಿಐ, ಈಡಿ, ಹಾಲಿ ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು..? ದಯಮಾಡಿ ಹೇಳಿ.
  6. ರೈತರು ಬರ, ವಿದ್ಯುತ್ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದಾರೆ. ಗುತ್ತಿಗೆದಾರರು ಅಯೋಮಯ ಸ್ಥಿತಿಯಲ್ಲಿದ್ದಾರೆ. ಆದರೂ ಕಲೆಕ್ಷನ್ ‘ ಕೈ ‘ ಚಳಕ ಜೋರಾಗಿದೆ. ಪಂಚರಾಜ್ಯಗಳ ಪಾಲಿಕೆ ಕರ್ನಾಟಕ ಸಮೃದ್ಧ ಎಟಿಎಮ್!! ಕಾವೇರಿ ನೀರು  ತಮಿಳುನಾಡಿಗೆ ನಿರಂತರ ಹರಿಯುತ್ತಿದ್ದರೆ, ಕನ್ನಡಿಗರ ತೆರಿಗೆಲಕ್ಷ್ಮೀ ಎಲೆಕ್ಷನ್ ರಾಜ್ಯಗಳ ಪಾಲಾಗುತ್ತಿದ್ದಾಳೆ!!
  7. ಆದಿಯಿಂದಲೂ ಇದೇ ಕಥೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೈಕಮಾಂಡ್ ಗೆ ಹಬ್ಬ. ಈಗಲೂ ಅದೇ ಆಗುತ್ತಿದೆ. ಪಂಚರಾಜ್ಯಗಳ ಚುನಾವಣೆಗಾಗಿ ಕರ್ನಾಟಕಕ್ಕೆ ಕನ್ನ ಹೊಡೆಯಲಾಗಿದೆ. ವೋಟು ಕೊಟ್ಟ ತಪ್ಪಿಗೆ ಕಾಂಗ್ರೆಸ್ ಉಂಡು ಹೋಗುತ್ತಿದೆ, ಕೊಂಡು ಹೋಗುತ್ತಿದೆ. ಇದು ಕನ್ನಡಿಗರ ಕರ್ಮ.
Exit mobile version