Site icon Vistara News

Hijab Row: ಚಿಕ್ಕಮಗಳೂರು ಕಾಲೇಜಿನಲ್ಲಿ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರ ವಿಡಿಯೊ ವೈರಲ್;‌ ಭುಗಿಲೆದ್ದ ಆಕ್ರೋಶ

Chikkamagaluru College

ಚಿಕ್ಕಮಗಳೂರು: ರಾಜ್ಯದಲ್ಲಿ ಕೆಲವು ತಿಂಗಳ ಹಿಂದೆ ಭಾರಿ ಸದ್ದು ಮಾಡಿದ್ದ ಹಿಜಾಬ್‌ ವಿವಾದ (Hijab Row) ಮತ್ತೆ ಮುನ್ನೆಲೆಗೆ ಬಂದಿದೆ. ಚಿಕ್ಕಮಗಳೂರಿನ ಕಾಲೇಜೊಂದರಲ್ಲಿ (College in Chikkamagaluru) ಹಿಜಾಬ್‌ ಧರಿಸಿ ಕಾಲೇಜಿನ ತರಗತಿಯಲ್ಲಿ ಕುಳಿತಿರುವ ವಿಡಿಯೊ, (Hijab wearing students in Class Room) ಬುರ್ಖಾ ಧರಿಸಿ ಕಾರಿಡಾರಿನಲ್ಲಿ ಓಡಾಡುವ ದೃಶ್ಯಗಳು ವೈರಲ್‌ (Video viral) ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಇದರ ಬಗ್ಗೆ ವಿವಾದ ಸೃಷ್ಟಿಯಾಗುತ್ತಿದ್ದಂತೆಯೇ ಕಾಲೇಜಿಗೆ ಬಿಗಿ ಪೊಲೀಸ್‌ ಭದ್ರತೆಯನ್ನು (Security at College) ಒದಗಿಸಲಾಗಿದೆ.

ಚಿಕ್ಕಮಗಳೂರು ನಗರದಲ್ಲಿರುವ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಬೆಳಗ್ಗೆ 10.21ರ ಹೊತ್ತಿಗೆ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಈ ವಿಡಿಯೊಗಳಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿನ ತರಗತಿಯಲ್ಲಿ ಕುಳಿತಿರುವ, ಓಡಾಡುತ್ತಿರುವ ದೃಶ್ಯಗಳು ಹಾದು ಹೋಗುತ್ತವೆ. ಇದರ ಜತೆಗೆ ಕೆಲವು ವಿದ್ಯಾರ್ಥಿನಿಯರು ಬುರ್ಕಾ ಧರಿಸಿ ಕಾಲೇಜಿನ ಅಂಗಳಲ್ಲಿ, ಕಾರಿಡಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆಯೇ ವಿವಾದ ಎದ್ದಿತು. ಈ ದೃಶ್ಯಗಳು ವಾಟ್ಸ್‌ ಆಪ್‌ ಮತ್ತಿತರ ಸಾಮಾಜಿಕ ತಾಣಗಳಲ್ಲಿ ಹರಡುತ್ತಿದ್ದಂತೆಯೇ ಚರ್ಚೆಗಳು ಶುರುವಾದವು. ಕೆಲವರು ಕಾಲೇಜಿನ ಕಡೆಗೆ ಹೋಗಲು ಆರಂಭ ಮಾಡುತ್ತಿದ್ದಂತೆಯೇ ಕಾಲೇಜಿಗೆ ಬಿಗಿ ಪೊಲೀಸ್‌ ಭದ್ರತೆಯನ್ನು ಒದಗಿಸಲಾಯಿತು.

ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಇದು ಇದೇ ಕಾಲೇಜಿನ ವಿಡಿಯೊ ಹೌದೇ ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ, ಹರಿದಾಡುತ್ತಿರುವ ವಿಡಿಯೊದಲ್ಲಿರುವ ಸಮಯ ಮತ್ತು ದಿನಾಂಕವನ್ನು ಗಮನಿಸಿದಾಗ ಇದು ಇದೇ ಕಾಲೇಜಿನಲ್ಲಿ ನಡೆದಿರುವ ವಿದ್ಯಮಾನದಂತೆ ಕಾಣಿಸುತ್ತಿದೆ.

ಹಾಗಿದ್ದರೆ ಈ ಕಾಲೇಜಿನಲ್ಲಿ ಈಗಲೂ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿಯೇ ಬರುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ಗುರುವಾರ ನಡೆದ ವಿದ್ಯಮಾನ ಎಂದು ಸೂಚಿಸುವ ಸಮಯ, ದಿನಾಂಕ ಗಮನಿಸಿ.

2022ರಲ್ಲಿ ಉಡುಪಿಯ ಕಾಲೇಜೊಂದರಲ್ಲಿ ಹಿಜಾಬ್‌ ಧರಿಸಿಯೇ ಪಾಠ ಕೇಳಲು ಅವಕಾಶ ನೀಡಬೇಕು ಎಂದು ಕೋರಿದ ಮತ್ತು ಅದಕ್ಕೆ ಎದುರಾದ ವಿರೋಧಗಳ ಹಿನ್ನೆಲೆಯಲ್ಲಿ ಪ್ರಕರಣ ಸುಪ್ರೀಂಕೋರ್ಟ್‌ವರೆಗೂ ಹೋಗಿ ಅಂತಿಮವಾಗಿ ಹಿಜಾಬ್‌ ನಿಷೇಧ ಇರುವ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಿ ತರಗತಿಗಳಿಗೆ ಹೋಗುವಂತಿಲ್ಲ ಎಂದು ತೀರ್ಪು ನೀಡಲಾಗಿತ್ತು. ಹೀಗಾಗಿ ರಾಜ್ಯದಲ್ಲಿ ಹಿಜಾಬ್‌ ಧಾರಣೆಯ ಬಗ್ಗೆ ಒಂದು ಸ್ಪಷ್ಟತೆ ಬಂದಿತ್ತು.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿ ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು ಎಂದು ಸರ್ಕಾರ ಆದೇಶಿಸಿತ್ತು.

ಆದರೆ, ಈಗ ಕೆಲವು ಕಾಲೇಜುಗಳಲ್ಲಿ ಹಿಜಾಬ್‌ಗೆ ಮತ್ತೆ ಅವಕಾಶ ನೀಡಲಾಗುತ್ತಿದೆಯೇ ಎನ್ನುವ ಚರ್ಚೆ ಆರಂಭಿಸಿರುವ ಸಂಘಟನೆಗಳು ಶುಕ್ರವಾರ ಇದರ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Tripura Hijab Row: ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರು ಶಾಲೆ ಪ್ರವೇಶಿಸಲು ನಕಾರ; ಭುಗಿಲೆದ್ದ ವಿವಾದ

Exit mobile version