ಬೋಟಡ್ (ಗುಜರಾತ್): ಗುಜರಾತ್ ಬೋಟರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ವಿಷ ಮದ್ಯ ದುರಂತದಲ್ಲಿ 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾನುವಾರ ರಾತ್ರಿ ಕಳ್ಳಭಟ್ಟಿ ದಂಧೆಕೋರರು ರೋಜಿಡ್ ಗ್ರಾಮದಲ್ಲಿ ಅಕ್ರಮವಾಗಿ ತಯಾರಿಸಿದ ಮದ್ಯವನ್ನು ಮಾರಾಟ ಮಾಡಿದ್ದರು. ಇದನ್ನು ಕುಡಿದವರಲ್ಲಿ ಹತ್ತಾರು ಮಂದಿ ಅಸ್ವಸ್ಥರಾಗಿದ್ದರು. ಅವರಲ್ಲಿ ಹತ್ತು ಮಂದಿ ಸೋಮವಾರ ಮುಂಜಾನೆ ಹೊತ್ತಿಗೆ ಪ್ರಾಣ ಕಳೆದುಕೊಂದಿದ್ದರೆ, ಈ ಸಂಖ್ಯೆ ಮಂಗಳವಾರ ಮುಂಜಾನೆ ವೇಳೆಗೆ ೧೯ಕ್ಕೇರಿದೆ. ಇನ್ನೂ ೪೦ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ.
ಕಳ್ಳಭಟ್ಟಿ ದಂಧೆಕೋರರು ಸಾರಾಯಿ ಮಾರಾಟ ಮಾಡುವ ಬದಲು ವಿಷಪೂರಿತ ರಾಸಾಯನಿಕವನ್ನೇ ಜನರಿಗೆ ನೀಡಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯ ವೇಳೆ ಬಯಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಪ್ರಕಾರ, ಎಸ್ಮೋಸ್ ಎಂಬ ಕಂಪನಿಯು ಈ ಸಾರಾಯಿಯನ್ನು ಪೂರೈಕೆ ಮಾಡಿತ್ತು. ಆದರೆ, ಸಾರಾಯಿಯ ಬದಲು ವಿಷಕಾರಿ ಮಿಥೈಲ್ ಪ್ರಮಾಣವೇ ಜಾಸ್ತಿ ಇತ್ತು ಎನ್ನಲಾಗಿದೆ. ಗೋದಾಮಿನ ಮ್ಯಾನೇಜರ್ ಆಗಿರುವ ಜಯೇಶ್ ಅಲಿಯಾಸ್ ರಾಜು ಎಂಬಾತ ಸುಮಾರು ೨೦೦ ಲೀಟರ್ ಮಿಥೈಲನ್ನು ತನ್ನ ಸಂಬಂಧಿಯಾಗಿರುವ ಸಂಜಯ್‌ಗೆ ೬೦೦೦೦ ರೂ.ಗಳಿಗೆ ಮಾರಾಟ ಮಾಡಿದ್ದ ಎಂದು ಹೇಳಲಾಗಿದೆ.
ಸಂಜಯ್ ಮತ್ತು ಆತನ ಸಹವರ್ತಿಯಾಗಿರುವ ಪಿಂಟು ಸೇರಿ ಸಾರಾಯಿ ಪೌಚ್‌ಗಳಲ್ಲಿ ಮಿಥೈಲ್ ಮತ್ತು ಇತರ ರಾಸಾಯನಿಕಗಳನ್ನು ಬೆರೆಸಿ ಪ್ಯಾಕ್ ಮಾಡಿ ಗ್ರಾಮಕ್ಕೆ ಕಳುಹಿಸಿದ್ದರು. ಎಸ್ಮೋಸ್ ಕಂಪನಿಯಿಂದ ಒಟ್ಟು ೬೦೦ ಲೀಟರ್ ಮಿಥೈಲ್ ಸರಬರಾಜಾಗಿದೆ ಎಂದು ಹೇಳಲಾಗಿದೆ. ಅವುಗಳ ಪೈಕಿ ೪೫೦ ಲೀಟರ್‌ನ್ನು ಮರಳಿ ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ಫೊರೆನ್ಸಿಕ್ ವರದಿಯ ಆಧಾರದಲ್ಲಿ ಎಫ್‌ಐಆರ್ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದ್ದು, ಆರೋಪಿಗಳ ಮೇಲೆ ಕೊಲೆ ಆರೋಪ ದಾಖಲಿಸುವ ಸಾಧ್ಯತೆ ಇದೆ.
೪೦ ಮಂದಿ ಇನ್ನೂ ಆಸ್ಪತ್ರೆಯಲ್ಲಿ
ಬರ್ವಾಲಾ ತಾಲೂಕಿನ ರೋಜಿಡ್ ಗ್ರಾಮದಲ್ಲಿ ಈ ದುರಂತ ನಡೆದಿದ್ದು, ಸುಮಾರು ೪೦ ಮಂದಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಅವರಲ್ಲಿ ಹೆಚ್ಚಿನವರು ಭಾವನಗರದ ತಖ್ತ್ ಸಿಂಹಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಗ್ರಾಮದಲ್ಲಿ ಕಳ್ಳಭಟ್ಟಿ ವ್ಯಾಪಾರ ಜೋರಾಗಿದ್ದು, ಜನರನ್ನು ನಿತ್ಯ ನಶೆಯಲ್ಲಿಡಲಾಗಿದೆ. ಹಾಲಿ ಘಟನೆಗೆ ಸಂಬಂಧಿಸಿ ೧೦ ಮಂದಿಯನ್ನು ಬಂಧಿಸಲಾಗಿದೆ.
ಮಹಾತ್ಮಾ ಗಾಂಧಿ ಊರಲ್ಲಿ!
ಗುಜರಾತ್‌ನಲ್ಲಿ ಮದ್ಯ ನಿಷೇಧ ಜಾರಿಯಲ್ಲಿದ್ದರೂ ದೊಡ್ಡ ಪ್ರಮಾಣದಲ್ಲಿ ಮದ್ಯದ ಹೊಳೆ ಹರಿಯುತ್ತಿರುವುದು ಆತಂಕಕಾರಿ ಎಂದು ಸದ್ಯ ಗುಜರಾತ್ ಪ್ರವಾಸದಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ. ಮಹಾತ್ಮಾ ಗಾಂಧಿ ಅವರು ಮದ್ಯ ನಿಷೇಧದ ಪ್ರಬಲ ಪ್ರತಿಪಾದಕರಾಗಿದ್ದರು. ಅವರ ಊರಿನಲ್ಲೇ ಇಂಥ ದುಷ್ಕೃತ್ಯ ನಡೆದಿರುವುದು ಖೇದಕರ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮದ್ಯದ ಹೊಳೆ ಹರಿಯಲು ಯಾರು ಕಾರಣ? ಜನರಿಗೆ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಯಾರು? ಅವರಿಗೆ ರಾಜಕೀಯ ರಕ್ಷಣೆ ನೀಡುತ್ತಿರುವವರು ಯಾರು? ಅದರಿಂದ ಬರುವ ದುಡ್ಡು ಎಲ್ಲಿಗೆ ಹೋಗುತ್ತಿದೆ? ಈ ಎಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಯಬೇಕಾಗಿದೆ ಎಂದು ಅವರು ಪೋರಬಂದರಿನಲ್ಲಿ ಹೇಳಿದರು.
ಇದನ್ನೂ ಓದಿ| ಕಾರವಾರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ ವಶ