Site icon Vistara News

ಡೇಟಿಂಗ್‌ ಆ್ಯಪ್‌ನಲ್ಲಿ ಪ್ರಿಯತಮೆಯ ಹುಡುಕಿದ ‘ದುಷ್ಯಂತ’; ಸಿಗಲಿಲ್ಲ ಶಕುಂತಲೆ, ಆಗಿದ್ದು ಆತನ ಕೊಲೆ!

Priya Seth

How A Tinder Date Got 28-Year-Old Man Killed In Jaipur

ನವದೆಹಲಿ: ಯುವಕರು ಚೆಂದದ ಹುಡುಗಿಯನ್ನು ಪಟಾಯಿಸಲು, ಯುವಕರು ಕುರುಚಲು ಗಡ್ಡದ ಹುಡುಗನ ಮನಸ್ಸು ಕದಿಯಲು, ಆತನ ಜತೆ ಗಂಟೆಗಟ್ಟಲೆ ಮೆಸೇಜ್‌ ಮಾಡಲು, ಊರು ಸುತ್ತಲು ಈಗ ಟಿಂಡರ್‌ನಂತಹ ಆನ್‌ಲೈನ್‌ ಡೇಟಿಂಗ್‌ ಆ್ಯಪ್‌ಗಳು (Dating Apps) ಏಣಿಯಾಗಿವೆ. ಆದರೆ, ದೆಹಲಿಯಲ್ಲಿ (Delhi) ದುಷ್ಯಂತ ಎಂಬ ವ್ಯಕ್ತಿಯೊಬ್ಬ ಟಿಂಡರ್ ಆ್ಯಪ್‌ನಲ್ಲಿ‌ (Tinder App) ಪರಿಚಯವಾದ ಯುವತಿಯನ್ನು ಭೇಟಿಯಾಗಲು ಜೈಪುರಕ್ಕೆ ಹೋಗಿ ಕೊಲೆಯಾಗಿದ್ದಾನೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಚೆಲುವೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಹೌದು, 2018ರಲ್ಲಿ ಟಿಂಡರ್ ಆ್ಯಪ್‌ನಲ್ಲಿ‌ ದೆಹಲಿಯ ದುಷ್ಯಂತ್ ಶರ್ಮಾ (ಟೆಂಡರ್‌ ಪ್ರೊಫೈಲ್‌ ಹೆಸರು) ಹಾಗೂ ಜೈಪುರದ ಪ್ರಿಯಾ ಸೇಠ್‌ ಪರಿಚಯ ಆಗಿದೆ. ಇಬ್ಬರೂ ಚಾಟ್‌ ಮಾಡಿದಾಗ ಪರಸ್ಪರರ ಅಭಿವೃದ್ಧಿಗಳಿಗೆ ಸಾಮ್ಯತೆ ಇದೆ ಎಂಬುದು ಗೊತ್ತಾಗಿದೆ. ಮೂರು ತಿಂಗಳ ಬಳಿಕ ಇಬ್ಬರೂ ಭೇಟಿ ಆಗುವುದೆಂದು ನಿರ್ಧರಿಸಲಾಗಿದೆ. ಜೈಪುರಕ್ಕೆ ಬಾ ಎಂದು ಪ್ರಿಯಾ ಸೇಠ್‌ ಕರೆದಿದ್ದಾಳೆ. ನಾನು ಬಾಡಿಗೆ ಮನೆಯಲ್ಲಿ ಇದ್ದೇನೆ, ಇಲ್ಲಿಗೇ ಬಾ ಎಂದು ಆಹ್ವಾನಿಸಿದ್ದಾಳೆ. ನೆಚ್ಚಿನ ಪ್ರಿಯತಮೆಯ ಭೇಟಿಗೆ ಕಾದಿದ್ದ ದುಷ್ಯಂತ್‌ ಶರ್ಮಾ ಜೈಪುರಕ್ಕೆ ಹೋಗಿದ್ದಾರೆ.

ಜೈಪುರದಲ್ಲಿ ನಡೆದಿದ್ದು ಏನು?

ದುಷ್ಯಂತ್‌ ಶರ್ಮಾ ಅವರು ಜೈಪುರದಲ್ಲಿರುವ ಪ್ರಿಯಾ ಸೇಠ್‌ ಅವರ ಬಾಡಿಗೆ ಮನೆ ಪ್ರವೇಶಿಸಿದ ನಂತರ ಆಗಿದ್ದೇ ಬೇರೆ. ಪ್ರಿಯಾ ಸೇಠ್‌, ದೀಕ್ಷಂತ್‌ ಕಮ್ರಾ ಹಾಗೂ ಲಕ್ಷ್ಯಾ ವಾಲಿಯಾ ಎಂಬುವರು ದುಷ್ಯಂತ್‌ ಶರ್ಮಾ ಅವರನ್ನು ಅಪಹರಣ ಮಾಡಿದ್ದಾರೆ. ದುಷ್ಯಂತ್‌ ಶರ್ಮಾ ಅವರ ತಂದೆಗೆ ಕರೆ ಮಾಡಿ, ‘ನಿಮ್ಮ ಮಗ ಜೀವಂತವಾಗಿ ಮನೆ ಸೇರಬೇಕು ಎಂದರೆ 10 ಲಕ್ಷ ರೂ. ಕೊಡಬೇಕು’ ಎಂದಿದ್ದಾರೆ. ಆದರೆ, ದುಷ್ಯಂತ್‌ ತಂದೆಯು ನನ್ನ ಬಳಿ ಅಷ್ಟು ದುಡ್ಡು ಇಲ್ಲ, 3 ಲಕ್ಷ ಮಾತ್ರ ಕೊಡಲು ಸಾಧ್ಯ ಎಂದಿದ್ದಾರೆ. ಇದೇ ವೇಳೆ ತಂದೆ ಜತೆ ಮಾತನಾಡಿದ ದುಷ್ಯಂತ್‌ ಶರ್ಮಾ, “ಅಪ್ಪಾ ಇವರು ತುಂಬ ಟಾರ್ಚರ್‌ ಮಾಡುತ್ತಿದ್ದಾರೆ. ನೀವು ಹಣ ಕೊಡದಿದ್ದರೆ ಕೊಂದೇ ಬಿಡುತ್ತಾರೆ” ಎಂದು ಅಂಗಲಾಚಿದ್ದಾರೆ. ಆದರೆ, ದುಷ್ಯಂತ್‌ ಶರ್ಮಾ ಅವರ ತಂದೆಗೆ ಹಣ ಹೊಂದಿಸಲು ಆಗದ ಕಾರಣ, ಮೂವರೂ ದುಷ್ಕರ್ಮಿಗಳು ದುಷ್ಯಂತ್‌ ಶರ್ಮಾ ಅವರನ್ನು ಕ್ರೂರವಾಗಿ ಕೊಂದಿದ್ದಾರೆ.

ದುಷ್ಯಂತ್‌ ಹೇಳಿದ ಆ ಒಂದು ಸುಳ್ಳೇ ಕೊಲೆಗೆ ಕಾರಣ

ದುಷ್ಯಂತ್‌ ಶರ್ಮಾ ಅವರ ಹೆಸರು ನಕಲಿ ಆಗಿದೆ. ಅವರ ನಿಜವಾದ ಹೆಸರು ವಿವಾನ್‌ ಕೊಹ್ಲಿ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ನಾನು ದೊಡ್ಡ ಉದ್ಯಮಿ ಎಂಬುದಾಗಿ ಪ್ರಿಯಾ ಸೇಠ್‌ಗೆ ಸುಳ್ಳು ಹೇಳಿದ್ದಾರೆ. ಅಷ್ಟೇ ಅಲ್ಲ, ಮದುವೆಯಾಗಿರುವುದನ್ನೂ ಮುಚ್ಚಿಟ್ಟು, ಪ್ರಿಯಾ ಸೇಠ್‌ಳನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಯಾವಾಗ ದುಷ್ಯಂತ್‌ ಶರ್ಮಾ ದೊಡ್ಡ ಉದ್ಯಮಿ ಎಂಬುದನ್ನು ಕೇಳಿದಳೋ, ಪ್ರಿಯಾ ಸೇಠ್‌ಗೆ ಹಣದ ಆಸೆ ಹುಟ್ಟಿದೆ. ಹಾಗಾಗಿಯೇ, ಜೈಪುರಕ್ಕೆ ಕರೆಸಿ, ಅಪಹರಣ ಮಾಡಿದ್ದಾಳೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಆದರೆ, ದುಷ್ಯಂತ್‌ ಶರ್ಮಾ ಬಡವ ಎಂದು, ಆತನ ತಂದೆ ಹಣ ಕೊಡಲು ಆಗುವುದಿಲ್ಲ ಎಂದು ಗೊತ್ತಾದ ಕೂಡಲೇ ಸಹಚರರ ಜತೆಗೂಡಿ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಕೊನೆಗೆ ಮೂವರೂ ಅಪರಾಧಿಗಳು ಎಂದು ತೀರ್ಪಿತ್ತ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version