ದಿಸ್ಪುರ: ವ್ಯವಸ್ಥೆಯೊಂದು ಹಳ್ಳ ಹಿಡಿದರೆ ಎಂತಹ ಪ್ರಕರಣ ಬೇಕಾದರೂ ಮುಚ್ಚಿ ಹೋಗುತ್ತವೆ ಎಂಬುದು ಅಸ್ಸಾಂನಲ್ಲಿ ತಡವಾಗಿ ತಿರುವು ಪಡೆದ ಪ್ರಕರಣವೇ ಸಾಕ್ಷಿಯಾಗಿದೆ. ಅಸ್ಸಾಂನ ಡರಾಂಗ್ ಜಿಲ್ಲೆಯಲ್ಲಿ ಸ್ಥಳೀಯ ಪತ್ರಕರ್ತರೊಬ್ಬರು ಕಳುಹಿಸಿದ ವಾಟ್ಸ್‌ಆ್ಯಪ್ ಮೆಸೇಜ್ ಈಗ 13 ವರ್ಷದ ಬುಡಕಟ್ಟು ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಯ ಪ್ರಕರಣವೊಂದನ್ನು ಭೇದಿಸಲು (Murder Mystery) ಸಹಾಯವಾಗಿದೆ.
ಕಳೆದ ಜೂನ್‌ನಲ್ಲಿ ಡುರಾಂಗ್‌ನಲ್ಲಿ ಸಶಸ್ತ್ರ ಸೀಮಾ ದಳ (SSB Jawan)ದ ಯೋಧ ಕೃಷ್ಣ ಕಮಲ್ ಬರೌಹ್ ಮನೆಯಲ್ಲಿ 13 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಬಾಲಕಿಯು ಯೋಧನ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ, ಡುರಾಂಗ್ ಜಿಲ್ಲೆಯ ಎಸ್‌ಪಿ, ಪ್ರಕರಣ ದಾಖಲಾದ ಧುಲಾ ಪೊಲೀಸ್ ಠಾಣೆಯ ಅಧಿಕಾರಿ, ಮೂವರು ವೈದ್ಯರು ಸೇರಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯದ್ದು ಆತ್ಮಹತ್ಯೆ ಎಂದು ಉಲ್ಲೇಖಿಸಿದ್ದು, ಇದರಿಂದ ಪ್ರಕರಣವು ಮುಚ್ಚಿಹಾಕಲು ಸಾಧ್ಯವಾಗಿತ್ತು.
ತನಿಖೆಗೆ ಒಂದೇ ಒಂದು ಮೆಸೇಜ್ ಕಾರಣ
ಆಗಸ್ಟ್ 12ರಂದು ಡುರಾಂಗ್‌ನ ಸ್ಥಳೀಯ ಪತ್ರಕರ್ತರೊಬ್ಬರು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಕಳುಹಿಸಿದ ವಾಟ್ಸ್‌ಆ್ಯಪ್ ಮೆಸೇಜ್ ತನಿಖೆಗೆ ಆದೇಶಿಸಲು ಕಾರಣವಾಗಿದೆ. ಈ ಕುರಿತು ಅಸ್ಸಾಂ ಮುಖ್ಯಮಂತ್ರಿಯವರೇ ಮಾಹಿತಿ ನೀಡಿದ್ದಾರೆ. “ಆಗಸ್ಟ್ 12ರಂದು ಬೆಳಗಿನ ಜಾವ 2.30ಕ್ಕೆ ಪತ್ರಕರ್ತರೊಬ್ಬರಿಂದ ವಾಟ್ಸ್‌ಆ್ಯಪ್ ಮೆಸೇಜ್ ಬಂತು. ಪ್ರಕರಣದ ಗಂಭೀರತೆ ಅರಿತು ಕೂಡಲೇ ತನಿಖೆಗೆ ಆದೇಶಿಸಿದೆ” ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಆದೇಶದ ಮೇರೆಗೆ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್‌ಮೆಂಟ್ (ಸಿಐಡಿ) ತನಿಖೆ ನಡೆಸಿದಾಗ ಪ್ರಕರಣವು ಬಯಲಾಗಿದೆ. ಪ್ರಕರಣವನ್ನು ಮುಚ್ಚಿಹಾಕಲು ಎಸ್‌ಪಿ ಸೇರಿ ಪೊಲೀಸ್ ಅಧಿಕಾರಿಗಳು ಎರಡು ಲಕ್ಷ ರೂ. ಪಡೆದಿದ್ದಾರೆ ಎಂಬುದು ಬಹಿರಂಗವಾಗಿದೆ. ಆರೋಪಿ ಕೃಷ್ಣ ಕಮಲ್ ಬರೌಹ್ ಅವರ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿದೆ. ಹಾಗೆಯೇ, ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಒಟ್ಟಿನಲ್ಲಿ, ಪತ್ರಕರ್ತರೊಬ್ಬರು ಪ್ರಕರಣದಲ್ಲಿ ತೋರಿದ ಆಸ್ಥೆಯಿಂದಾಗಿ ಸಿನಿಮೀಯ ರೀತಿಯಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಭೇದಿಸಿದಂತಾಗಿದೆ.
ಇದನ್ನೂ ಓದಿ | ಅಪರಿಚಿತ ಮಹಿಳೆ ಶವ ಅರೆನಗ್ನವಾಗಿ ಪತ್ತೆ, ಅತ್ಯಾಚಾರ- ಕೊಲೆ ಶಂಕೆ