ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖಾ ಸಂಸ್ಥೆಗಳಾದ ಸಿಐಡಿ ಮತ್ತು ಎಸಿಬಿ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಎಸಿಬಿ ಮತ್ತು ಸಿಐಡಿ ಎರಡೂ ಸಂಸ್ಥೆಗಳು ದಿಢೀರ್ ಎಚ್ಚೆತ್ತಿವೆ. ಮುಖ್ಯವಾಗಿ ಮೊಟ್ಟ ಮೊದಲ ಬಾರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ, ಕಚೇರಿಗೆ ಭಾರಿ ದಾಳಿ ನಡೆಸಿರುವುದು ಗಮನಾರ್ಹ.
ಸಂಚಲನ ಸೃಷ್ಟಿಸಿರುವ ಪಿಎಸ್‌ಐ ನೇಮಕಾತಿಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು, ಈ ಹಿಂದೆ ನೇಮಕಾತಿ ವಿಭಾಗದ ನೇತೃತ್ವ ವಹಿಸಿದ್ದ ಎಡಿಜಿಪಿ ಅಮೃತ್ ಪಾಲ್ ಅವರನ್ನು ಬಂಧಿಸಿದೆ. ಮತ್ತೊಂದು ಪ್ರಕರಣದಲ್ಲಿ ಜಮೀನು ವಿವಾದ ಇತ್ಯರ್ಥಕ್ಕೆ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿ ಬೆಂಗಳೂರು ನಗರ ಜಲ್ಲೆಯ ಈ ಹಿಂದಿನ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರನ್ನು ಎಸಿಬಿ ಬಂಧಿಸಿದೆ. ಇಬ್ಬರು ಉನ್ನತ ಮಟ್ಟದ ಅಧಿಕಾರಿಗಳು ಒಂದೇ ದಿನ ಅರೆಸ್ಟ್ ಆಗಿರುವುದು ರಾಜ್ಯದಲ್ಲಿ ಇದೇ ಮೊದಲು. ಎಸಿಬಿಯಂತೂ ಇದೇ ಮೊದಲ ಬಾರಿಗೆ ಹಾಲಿ ಶಾಸಕರ ವಿರುದ್ಧ ಕ್ರಮ ಕೈಗೊಂಡಿದೆ.
ಇದನ್ನೂ ಓದಿ:ACB raid| ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ
ಹೈಕೋರ್ಟ್ ತರಾಟೆ
ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಕಲೆಕ್ಷನ್ ಸೆಂಟರ್ (ವಸೂಲಿ ಕೇಂದ್ರ) ಆಗಿದೆ ಎಂದು ಕಟುವಾಗಿ ಟೀಕಿಸಿದ್ದ ಹೈಕೋರ್ಟ್, ಸೋಮವಾರ ಮತ್ತೆ ಎಸಿಬಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
” ನಮ್ಮಲ್ಲಿ ಭ್ರಷ್ಟಾಚಾರ ಎಂಬ ಕ್ಯಾನ್ಸರ್ ಎರಡನೇ ಹಂತ ತಲುಪಿದೆ. ಮೂರು ಮತ್ತು ನಾಲ್ಕನೇ ಹಂತ ಮುಟ್ಟುವುದರೊಳಗೆ ಗುಣಪಡಿಸಬೇಕಾಗಿದೆ. ಎಸಿಬಿ ಸಾರ್ವಜನಿಕರನ್ನು ರಕ್ಷಿಸುತ್ತಿದೆಯೇ ಅಥವಾ ಕಳಂಕಿತರನ್ನು ರಕ್ಷಿಸುತ್ತಿದೆಯೇ, ನೀವು (ಎಸಿಬಿ) ದೊಡ್ಡ ಐಪಿಎಸ್, ಐಎಎಸ್ ಅಧಿಕಾರಿಗಳನ್ನು ಬಿಟ್ಟು ಸಣ್ಣ ಪುಟ್ಟ ಅಧಿಕಾರಿಗಳನ್ನು ಹಿಡಿಯುತ್ತಿದ್ದೀರಿ. ಮೇಲ್ಮಟ್ಟದಲ್ಲಿರುವ ಅಧಿಕಾರಿಗಳನ್ನು ಹಿಡಿಯುವುದು ಯಾವಾಗ? ʼʼ ಎಂದು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಎಸಿಬಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ: ACB raid| ಮೊದಲ ಬಾರಿಗೆ ಹಾಲಿ ಶಾಸಕ ಜಮೀರ್ ಮನೆಗೆ ಎಸಿಬಿ ಭರ್ಜರಿ ದಾಳಿ, ಬೆಂಬಲಿಗರ ಪ್ರತಿಭಟನೆ