Site icon Vistara News

ಮನೆಯಿಂದಲೇ 4 ಲಕ್ಷ ಕದ್ದು ಮೋಜು ಮಾಡಿ ನಕಲಿ ನೋಟು ತಂದಿಟ್ಟ ಮಕ್ಕಳು!

4 ಲಕ್ಷ ಕದ್ದು ಮೋಜು

ಹೈದರಾಬಾದ್‌: ಅವರಿಬ್ಬರೂ ಅಣ್ಣ-ತಮ್ಮ. ದೊಡ್ಡವನಿಗೆ ಒಂಬತ್ತು ವರ್ಷ, ಸಣ್ಣವನಿಗೆ ಏಳು ದಾಟಿ ಎಂಟು. ಅವರಿಬ್ಬರು ಎಂಥಾ ಖತರ್ನಾಕ್‌ ಎಂದರೆ ತಮ್ಮ ಮನೆಯ ಕಪಾಟಿನಿಂದಲೇ ನಾಲ್ಕು ಲಕ್ಷ ರೂ. ಕದ್ದು ಕೇವಲ 20 ದಿನದಲ್ಲಿ ಅದನ್ನು ಚಿಂದಿ ಚಿತ್ರಾನ್ನ ಮಾಡಿದ್ದಾರೆ!

ಮನೆಯಲ್ಲಿ ಯಾವ ಸುಳಿವೂ ಸಿಗದಂತೆ ಹಣ ಕದ್ದಿರುವ ಅವರು ಸ್ಮಾರ್ಟ್‌ ವಾಚ್‌, ಮೊಬೈಲ್‌ಗಳನ್ನು ಖರೀದಿ ಮಾಡಿದ್ದಾರೆ. ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿಗೆ ಹೋಗಿ ಸಖತ್‌ ಆಗಿ ತಿಂದಿದ್ದಾರೆ. ಗೇಮಿಂಗ್‌ ಸೆಂಟರ್‌ಗಳಲ್ಲಿ ಮಸ್ತ್‌ ಮಜಾ ಮಾಡಿದ್ದಾರೆ. ಗೆಳೆಯರನ್ನೆಲ್ಲ ಕರೆದು ʻಏಯ್‌ ಬನ್ರೊ ಮಜಾ ಮಾಡೋಣʼ ಎಂದಿದ್ದಾರೆ. ಕೇವಲ 20 ದಿನದಲ್ಲಿ ಅಷ್ಟೂ ಹಣವನ್ನು ಹುರಿದು ಮುಕ್ಕಿದ್ದಾರೆ!

ಈ ಘಟನೆ ನಡೆದಿರುವುದು ತೆಲಂಗಾಣದ ಜೇಡಿಮೇಟ್ಲದ ಎಸ್‌ಆರ್‌ ನಾಯ್ಕ್‌ ನಗರದ ಒಂದು ಮನೆಯಲ್ಲಿ. ಆದರೆ, ಈ ವಿಷಯ ಮನೆ ಮಂದಿಗೆ ತುಂಬ ದಿನಗಳ ವರೆಗೂ ಗೊತ್ತೇ ಇರಲಿಲ್ಲ. ಯಾಕೆಂದರೆ, ಅಲ್ಲಿದ್ದ ಹಣ ಅಲ್ಲೇ ಇತ್ತು. ಕಾಣೆಯಾಗಿರಲೇ ಇಲ್ಲ!

ಇದನ್ನೂ ಓದಿ| ದಿನಕ್ಕೆ ಒಂದು ಡಜನ್‌ ಟಾರ್ಗೆಟ್‌ ಹೊಂದಿದ್ದ ಮೊಬೈಲ್‌ ಕಳ್ಳರು !

ಹಾಗಿದ್ರೆ ನಿಜಕ್ಕೂ ಆಗಿದ್ದೇನು?
ಆವತ್ತೊಂದು ದಿನ ಹುಡುಗರ ಅಪ್ಪನೋ ಅಮ್ಮನೋ ಕಪಾಟಿನಲ್ಲಿದ್ದ ಹಣದಲ್ಲಿ ಸ್ವಲ್ಪ ಹಣ ತೆಗೆದು ಶಾಪಿಂಗ್‌ಗೆ ಹೋಗಿದ್ದರು. ಆದರೆ, ಅಲ್ಲಿ ಇದೆಲ್ಲ ನಕಲಿ ನೋಟು ಅಂದುಬಿಟ್ಟರು. ಅಯ್ಯೋ ದೇವ್ರೇ ಏನಾಯ್ತು ಇದು ಅಂತ ತಲೆ ಬಿಸಿ ಮಾಡಿಕೊಂಡು ಉಳಿದ ಎಲ್ಲ ಹಣವನ್ನು ಚೆಕ್‌ ಮಾಡಿದಾಗ ಬಹುತೇಕ ಎಲ್ಲವೂ ನಕಲಿ ನೋಟುಗಳಾಗಿದ್ದವು.

ಹುಡುಗ್ರನ್ನು ವಿಚಾರಿಸಿದರು
ಮನೆಯೊಳಗೆ ಯಾರೂ ಬಂದಿಲ್ಲ. ಹಾಗಿರುವಾಗ ಈ ಹಣ ನಕಲಿಯಾಗಿದ್ದು ಹೇಗೆ ಎನ್ನುವ ಬಗ್ಗೆ ಗಂಡ-ಹೆಂಡತಿ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡರು. ಈ ನಡುವೆ ಮಕ್ಕಳು ವಿಪರೀತ ಖರೀದಿ ಮಾಡುತ್ತಿರುವುದು, ಮನೆಗೆ ಏನೇನೋ ಐಟಂಗಳು ಬರುತ್ತಿರುವುದು ಈಗ ತಲೆಗೆ ಹೊಳೆಯಿತು. ಅವರನ್ನು ವಿಚಾರಿಸಿದರು. ಆದರೆ, ನಾವೇನೂ ಮಾಡಿಲ್ಲ ಅಂತ ವಾದಿಸಿದರು. ಬಳಿಕ ಸರಿಯಾಗಿ ಕೂರಿಸಿ ಕೇಳಿದಾಗ ಸತ್ಯ ಬಯಲಾಯಿತು.

ಏನು ಮಾಡಿದ್ದರೆಂದರೆ..
ಮನೆಯಲ್ಲಿ ಹಣ ಕದ್ದು ಮಜಾ ಉಡಾಯಿಸಿದ ಮಕ್ಕಳು ಇನ್ನೊಂದು ಖತರ್‌ನಾಕ್‌ ಬುದ್ಧಿ ಪ್ರಯೋಗಿಸಿದ್ದಾರೆ. ಈ ನಡುವೆ ತಂಡದಲ್ಲಿದ್ದ ಕೆಲವು ಹುಡುಗರು ಹಣ ಕದ್ದಿದ್ದು ಮನೆಯವರಿಗೆ ಗೊತ್ತಾಗಬಾರದು ಎಂದಿದ್ದರೆ, ನಕಲಿ ನೋಟು ತಂದಿಡಬೇಕು ಎಂಬ ಐಡಿಯಾ ಕೊಟ್ಟಿದ್ದಾರೆ. ಹಾಗೆ ಯಾರನ್ನೋ ಸಂಪರ್ಕ ಮಾಡಿ ನಕಲಿ ನೋಟು ತಂದಿಡಲಾಗಿದೆ. ಹೀಗಾಗಿ ಮನೆಯಲ್ಲಿ ದುಡ್ಡು ಕಳ್ಳತನವಾಗಿದ್ದರೂ ಹೆತ್ತವರಿಗೆ ಅದರ ಬಗ್ಗೆ ಅರಿವೇ ಇರಲಿಲ್ಲ.

ಪೊಲೀಸ್‌ ಠಾಣೆಗೆ ದೂರು
ಈ ನಡುವೆ ಮಕ್ಕಳಾಟದ ಬಗ್ಗೆ ಹೆತ್ತವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರು ಕೊಟ್ಟಿರುವುದು ಮಕ್ಕಳ ಮೇಲಲ್ಲ. ಮಕ್ಕಳ ಜತೆಗೆ ಈ ಕೃತ್ಯದಲ್ಲಿ ಪಾಲ್ಗೊಂಡ 12ರಿಂದ 14 ವರ್ಷದೊಳಗಿನ ಬೇರೆ ಒಂದಿಬ್ಬರು ಮಕ್ಕಳ ಮೇಲೆ. ಇವರು ತಮ್ಮ ಮಕ್ಕಳ ತಲೆ ಹಾಳು ಮಾಡಿ ಈ ರೀತಿ ಹಣ ಕಳವು ಮಾಡಿಸಿ, ನಕಲಿ ನೋಟು ಇಡಿಸಿದ್ದಾರೆ ಎನ್ನುವುದು ಅವರ ದೂರು. ಪೊಲೀಸರು ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಇದರ ಹಿಂದೆ ನಕಲಿ ನೋಟಿನ ಜಾಲದ ಶಾಮೀಲಾತಿ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಇದು ಕೇವಲ ಮಕ್ಕಳಾಟದ ಕರೆನ್ಸಿಯೂ ಆಗಿರಬಹುದು ಎಂಬ ಗುಮಾನಿಯೂ ಇದ್ದು ಅದರ ಬಗ್ಗೆಯೂ ವಿಮರ್ಶೆ ನಡೆದಿದೆ.

ಪೋಷಕರೇ ಹುಷಾರು
ಮಕ್ಕಳಿಗೆ ವಿಪರೀತ ಪಾಕೆಟ್‌ ಮನಿ ನೀಡುವುದು, ಹಣವನ್ನು ಮಕ್ಕಳಿಗೆ ಸಿಗುವ ಹಾಗೆ ಮನೆಯಲ್ಲಿ ಇಡುವುದು ಇವೆಲ್ಲವೂ ಮಕ್ಕಳನ್ನು ಬೇರೆ ಬೇರೆ ಗೀಳಿಗೆ ತಳ್ಳುವ ಅಪಾಯವಿರುತ್ತದೆ. ಮಕ್ಕಳಿಗೆ ಕೊಡುವ ಹಣದ ಲೆಕ್ಕ ಇಡುವುದು, ಅವರು ಖರೀದಿಸುವ ವಸ್ತು, ಚಲನವಲನಗಳ ಮೇಲೆ ಕಣ್ಣಿಡುವುದು ತುಂಬ ಅಗತ್ಯ. ಇಲ್ಲವಾದರೆ ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಇದನ್ನೂ ಓದಿ | ಮದುವೆ ಮಂಟಪದಲ್ಲಿ ಕಳಚಿ ಬಿದ್ದ ವಿಗ್‌, ವರನಿಂದ ಖರ್ಚು ವಸೂಲಿ ಮಾಡಿದ ವಧು!

Exit mobile version