Site icon Vistara News

ಅಬ್ಬಾ! ಹೈದರಾಬಾದ್‌ ಬಾಲಕಿ ಗ್ಯಾಂಗ್‌ ರೇಪ್‌ ನಡೆದಿದ್ದು ಸರಕಾರಿ ಕಾರಿನಲ್ಲಿ!

hydarabad gang rape

ಹೈದರಾಬಾದ್‌: ದೇಶಾದ್ಯಂತ ಸುದ್ದಿಯಾಗಿರುವ ಹೈದರಾಬಾದ್‌ನ ಅಪ್ರಾಪ್ತೆ ಗ್ಯಾಂಗ್‌ರೇಪ್‌ (Hyderabad gang rape) ಪ್ರಕರಣಕ್ಕೆ ಸಂಬಂಧಿಸಿ ಆತಂಕ ಹುಟ್ಟಿಸುವ ಮತ್ತೊಂದು ಸಂಗತಿ ಬಯಲಾಗಿದೆ. ಅದೇನೆಂದರೆ, ಈ ಅತ್ಯಾಚಾರ ನಡೆದಿರುವುದು ಸರಕಾರದ ಅಧಿಕೃತ ಮೊಹರು ಹೊಂದಿರುವ ಕಾರಿನಲ್ಲೇ! ಇದುವರೆಗೆ ಶ್ರೀಮಂತ ಹುಡುಗರ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ ವಿಕೃತಿ ನಡೆದಿತ್ತು ಎನ್ನಲಾಗಿತ್ತು. ಆದರೆ, ಬಂಧಿತರ ಪೈಕಿ ಒಬ್ಬ ನೀಡಿರುವ ಹೇಳಿಕೆ ಪ್ರಕಾರ, ಕೃತ್ಯಕ್ಕೆ ಟೊಯೊಟಾ ಇನ್ನೊವಾ ಕ್ರಿಸ್ಟಾವನ್ನೂ ಬಳಸಲಾಗಿದೆ. ಇದನ್ನು ಫಾರ್ಮ್‌ ಹೌಸ್‌ ಒಂದರಿಂದ ಈಗ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ ಕಾರು ಯಾರ ಕೈಯಲ್ಲಿತ್ತು, ಆ ಮಹಿಳೆ ಯಾರು ಎನ್ನುವುದು ಇನ್ನೊಂದು ಇಂಟ್ರೆಸ್ಟಿಂಗ್‌ ಸಂಗತಿ.

ಆವತ್ತು ನಡೆದ ಘಟನೆಯೇ ನಿಜಕ್ಕೂ ಭಯಾನಕವಾಗಿದೆ. ಮೇ 28ರಂದು 17 ವರ್ಷದ ಹುಡುಗಿಯೊಬ್ಬಳು ತನ್ನ ಗೆಳೆಯನ ಜತೆ ಪಬ್‌ಗೆ ಹೋಗಿದ್ದಳು. ಆದರೆ ಗೆಳೆಯ ಮಧ್ಯ ಭಾಗದಲ್ಲೇ ಹೊರಟು ಹೋಗಿದ್ದ. ಈ ನಡುವೆ ಯುವತಿಗೆ ಇನ್ನೊಬ್ಬ ಹುಡುಗ ಪರಿಚಯವಾಗಿದ್ದ. ಆಕೆ ಅವನಲ್ಲಿ ಮನೆವರೆಗೆ ಡ್ರಾಪ್‌ ಕೊಡುವಂತೆ ಕೇಳಿಕೊಂಡಿದ್ದಳು. ಆದರೆ, ಆ ಹುಡುಗನ ಜತೆಗೆ ಇನ್ನೂ ಕೆಲವು ಹುಡುಗರಿದ್ದರು. ಅವರೆಲ್ಲರೂ ಆಕೆಯನ್ನು ಡ್ರಾಪ್‌ ಮಾಡುವ ಉದ್ದೇಶದೊಂದಿಗೆ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ ಹೊರಟಿದ್ದರು. ದಾರಿ ಮಧ್ಯೆ ಒಂದು ಕೆಫೆಯಲ್ಲಿ ಆಹಾರ ಸೇವಿಸಿದ ಅವರೆಲ್ಲರೂ ಬಳಿಕ ಇನ್ನೋವಾಕ್ಕೆ ಶಿಫ್ಟ್‌ ಆಗಿದ್ದರು. ಆಗ ಸಂಜೆ 6.30 ಆಗಿತ್ತು. ಬಳಿಕ ಕಾರು ಹೋಗಿ ನಿಂತಿದ್ದು ರೋಡ್‌ ನಂ. 44ರ ನಿರ್ಜನ ಪ್ರದೇಶಕ್ಕೆ.. ಇದು ಹೈದರಾಬಾದ್‌ನ ಅತ್ಯಂತ ಪ್ರತಿಷ್ಠಿತರು, ರಾಜಕಾರಣಿಗಳು, ವಿಐಪಿಗಳು, ಸಿನಿಮಾ ತಾರೆಯರು ವಾಸಿಸುವ ಬಂಜಾರಾ ಹಿಲ್ಸ್‌ ಪ್ರದೇಶ. ಅಲ್ಲಿ ಆಕೆಯ ಮೇಲೆ ಸರದಿ ಪ್ರಕಾರ ಅತ್ಯಾಚಾರ ನಡೆಸಿ ರಾತ್ರಿ 7.30ರ ಹೊತ್ತಿಗೆ ಅದೇ ಪಬ್‌ಗೆ ತಂದು ಬಿಡಲಾಗಿತ್ತು. ಬಳಿಕ ಆಕೆ ಹೇಗೋ ಮನೆ ತಲುಪಿದ್ದಳು.

ಕಾರು ಸಿಕ್ಕಿದ ಫಾರ್ಮ್‌ ಹೌಸ್‌ ಯಾರದು?
ಹುಡುಗಿಯ ತಂದೆ ನೀಡಿದ ದೂರು ಮತ್ತು ಸಾರ್ವಜನಿಕವಾಗಿ ಕೇಳಿಬಂದ ಒತ್ತಡದ ಬಳಿಕ ನಾಲ್ವರು ಅಪ್ರಾಪ್ತರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರತಿಷ್ಠಿತ ರಾಜಕಾರಣಿಗಳ ಮಕ್ಕಳೇ ಭಾಗಿಯಾಗಿರುವುದರಿಂದ ಹೈ ಪ್ರೊಫೈಲ್‌ ಪ್ರಕರಣವಾಗಿ ಗಮನ ಸೆಳೆದಿದೆ.
ಈ ನಡುವೆ, ಬಂಧಿತರಲ್ಲಿ ಒಬ್ಬನಾಗಿರುವ ಸಾದುದ್ದೀನ್‌ ಅತ್ಯಾಚಾರ ನಡೆದಿದ್ದು ಟೊಯೊಟಾ ಇನ್ನೊವಾ ಕ್ರಿಸ್ಟಾ ಕಾರಿನಲ್ಲಿ ಎಂದು ಬಾಯಿ ಬಿಟ್ಟಿದ್ದ. ಆ ಕಾರು ಎಲ್ಲಿದೆ ಎಂದು ಹುಡುಕಾಡಿದಾಗ ಅದು ಸಿಕ್ಕಿದ್ದು ಒಂದು ಫಾರ್ಮ್‌ ಹೌಸ್‌ನಲ್ಲಿ ಅದು ಒಬ್ಬ ಮಹಿಳೆಗೆ ಸೇರಿದ್ದು. ಆಕೆಗೆ ಒಂದು ರಾಜಕೀಯ ಕುಟುಂಬದೊಂದಿಗೆ ಸಂಬಂಧವಿರುವುದು ಪತ್ತೆಯಾಗಿದೆ.
ಪತ್ತೆಯಾದ ಕಾರಿನಲ್ಲಿ ಸರಕಾರದ ವಾಹನ ಎಂಬ ಮುದ್ರೆ ಇದೆ. ಇದನ್ನು ವಕ್ಫ್‌ ಬೋರ್ಡ್‌ನ ದೊಡ್ಡ ಮಟ್ಟದ ಪದಾಧಿಕಾರಿಯೊಬ್ಬರು ಬಳಸುತ್ತಿದ್ದರು. ಘಟನೆಯಲ್ಲಿ ಬಳಕೆಯಾದ ಇನ್ನೊಂದು ವಾಹನ ಮರ್ಸಿಡಿಸ್‌ ಬೆಂಜ್‌ ತೆಲಂಗಾಣದ ಶಾಸಕನಿಗೆ ಸೇರಿದ್ದು. ಆದರೆ, ಆ ಶಾಸಕ ಮಾತ್ರ ತನ್ನ ಮಗ ಘಟನೆ ನಡೆದಾಗ ಆ ಕಾರಿನಲ್ಲಿ ಇರಲಿಲ್ಲ ಎಂದಿದ್ದಾನೆ.

ಆರೋಪಿಗಳು ಇವರು
ಒಮರ್‌ ಖಾನ್‌: ರಾಜಕೀಯ ಲಿಂಕ್‌ ಹೊಂದಿರುವ ಪ್ರಭಾವಿ ಕುಟುಂಬವೊಂದಕ್ಕೆ ಸೇರಿದ ಹುಡುಗ.
ಸಾದುದ್ದೀನ್‌ ಮಲಿಕ್‌: ಟಿಆರ್‌ಎಸ್‌ನ ಸ್ಥಳೀಯ ಮುಖಂಡನ ಪುತ್ರ
ಟಿಆರ್‌ಎಸ್‌ ನಾಯಕರೊಬ್ಬರ ಪುತ್ರ, ಕಾರ್ಪೊರೇಟರ್‌ ಪುತ್ರ, ಟಿಆರ್‌ ಎಸ್‌ ಕಾರ್ಪೋರೇಟರ್‌ ಪುತ್ರ, ಎಂಐಎಂ ಶಾಸಕರೊಬ್ಬರ ಪುತ್ರ(ಇವರೆಲ್ಲರೂ 18 ವರ್ಷಕ್ಕಿಂತ ಕೆಳಗಿನವರು. ಹಾಗಾಗಿ ಹೆಸರು ಬರೆಯುವಂತಿಲ್ಲ)

ಇದನ್ನೂ ಓದಿ| ಹೈದರಾಬಾದ್‌ ಗ್ಯಾಂಗ್‌ ರೇಪ್:‌ AIMIM ಶಾಸಕರ ಪುತ್ರ ಬಂಧನ

Exit mobile version