ಹೈದರಾಬಾದ್: ರಕ್ಷಕರೇ ಭಕ್ಷಕರಾದರೆ ಜನರು ಏನು ಮಾಡಬೇಕು ಹೇಳಿ? ನಮ್ಮನ್ನು ಕಾಯುವ ಪೊಲೀಸರೇ ತಪ್ಪು ಮಾರ್ಗ ತುಳಿದರೆ ಜನಸಾಮಾನ್ಯರು ಯಾರನ್ನು ನಂಬುವುದು? ಇಲ್ಲಿ ನಡೆದಿರುವುದು ಅಂತಹುದೇ ಒಂದು ವಿದ್ಯಮಾನ. ತೆಲಂಗಾಣದ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬ ಗನ್ ತೋರಿಸಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಹೈದರಾಬಾದ್‌ನಲ್ಲಿ ತನ್ನ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಪತ್ನಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ. ನಾಗೇಶ್ವರ ರಾವ್‌ನನ್ನು ಶನಿವಾರ ಅಮಾನತುಗೊಳಿಸಲಾಗಿದೆ. ಅತ್ಯಾಚಾರ, ಕ್ರಿಮಿನಲ್ ಅತಿಕ್ರಮಣ, ಕೊಲೆ ಯತ್ನ, ಅಪಹರಣ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ರಾವ್ ಅವರನ್ನು ಪೊಲೀಸ್ ಕಮಿಷನರ್ ಸಿವಿ ಆನಂದ್ ಅಮಾನತುಗೊಳಿಸಿದ್ದಾರೆ.
ಗುರುವಾರ ಮಹಿಳೆಯ ಪತಿ ತನ್ನ ಸ್ವಗ್ರಾಮದಲ್ಲಿ ಇಲ್ಲದಿದ್ದಾಗ ಪೊಲೀಸ್ ಇನ್‌ಸ್ಪೆಕ್ಟರ್ ರಾವ್ ಗನ್ ತೋರಿಸಿ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ. ವಿಷಯ ತಿಳಿದ ಆಕೆಯ ಪತಿ ಇನ್ಸ್‌ಪೆಕ್ಟರ್ ಮನೆಗೆ ಹೋಗಿ ಪ್ರಶ್ನೆ ಮಾಡುತ್ತಿದ್ದಂತೆಯೇ ಮತ್ತೆ ಬಂದೂಕು ತೆಗೆದುಕೊಂಡು ಇಬ್ಬರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ, ಕೂಡಲೇ ಹೈದರಾಬಾದ್ ತೊರೆಯದಿದ್ದರೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸುವುದಾಗಿಯೂ ಇನ್ಸ್‌ಪೆಕ್ಟರ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದಾದ ನಂತರ ದಂಪತಿಯನ್ನು ಬಲವಂತವಾಗಿ ಆಂಧ್ರ ಪ್ರದೇಶದ ಇಬ್ರಾಹಿಂ ಪಟ್ಟಣಂ ಕಡೆಗೆ ಕಾರಿನಲ್ಲಿ ಕರೆದೊಯ್ಯಲಾಗಿದೆ. ಅಲ್ಲಿ ಕಾರನ್ನು ಅಪಘಾತಕ್ಕೆ ಒಳಪಡಿಸಿ ಕೊಲೆ ಮಾಡುವ ಪ್ರಯತ್ನವೂ ನಡೆದಿದೆ. ಆದರೆ, ಹೇಗೋ ಬಚಾವಾದ ದಂಪತಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಈ ಹಿಂದೆಯೂ ಈ ಇನ್‌ಸ್ಪೆಕ್ಟರ್ ಮಹಿಳೆಯನ್ನು ಬಲವಂತವಾಗಿ ಫಾರ್ಮ್‌ಹೌಸ್‌ಗೆ ಕರೆದೊಯ್ದಿದ್ದ. ಆಗಲೂ ಆಕೆಗೆ ಬೆದರಿಕೆ ಹಾಕಿದ್ದ ಎಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸ್ ತಂಡವು ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ತಲೆ ಮರೆಸಿಕೊಂಡಿರುವ ಇನ್‌ಸ್ಪೆಕ್ಟರ್‌ನನ್ನು ಬಂಧಿಸಲು ರಾಚಕೊಂಡ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಇದನ್ನೂ ಓದಿ: ರಾಕ್ಷಸೀ ಕೃತ್ಯ; ಚಲಿಸುತ್ತಿದ್ದ ಕಾರಿನಲ್ಲಿ ತಾಯಿ-ಪುಟ್ಟ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ