ಹೈದರಾಬಾದ್: ಬ್ರೇಕಪ್ ಆದ ಬಳಿಕ ಯುವಕ-ಯುವತಿ ಜಗಳವಾಡುವುದು, ಪ್ರೀತಿ ಮುರಿದು ಬೀಳಲು ನೀನೇ ಕಾರಣ, ನೀನು ಅನುಭವಿಸುತ್ತೀಯಾ ಎಂದೆಲ್ಲ ಹತಾಶೆಯಲ್ಲಿ ವಾಗ್ವಾದ ನಡೆಸುವುದು ಸಾಮಾನ್ಯ. ಅದರಲ್ಲೂ, ಇತ್ತೀಚಿನ ದಿನಗಳಲ್ಲಿ ಬ್ರೇಕಪ್‌ಗಳು (Love Breakup) ಸಾಮಾನ್ಯ ಎಂಬಂತಾಗಿದೆ. ಬ್ರೇಕಪ್ ಬಳಿಕ ಒಂದೆರಡು ತಿಂಗಳು ಕಳೆದು, ಮತ್ತೊಬ್ಬರನ್ನು ಪ್ರೀತಿಸಿ, ಮೂವ್ ಆನ್ (Move On) ಆಗುವುದು ಸಹಜವಾಗಿದೆ. ಆದರೆ, ಹೈದರಾಬಾದ್‌ನಲ್ಲೊಬ್ಬ ಯುವತಿಯು ಮಾಜಿ ಪ್ರಿಯಕರನ (Ex Boyfriend) ಮೇಲೆ ಸೇಡು ತೀರಿಸಿಕೊಳ್ಳಲು, ಜೈಲಿಗೆ ಕಳುಹಿಸಲು ಆತನ ಕಾರಿನಲ್ಲಿ ಗಾಂಜಾ ಬಚ್ಚಿಟ್ಟಿರುವ ಪ್ರಕರಣ ಬಯಲಾಗಿದೆ.
ಹೌದು, ಕಳೆದ ಸೋಮವಾರ (ಡಿಸೆಂಬರ್ 25) ಮಾಜಿ ಪ್ರಿಯಕರ ಶ್ರವಣ್‌ಗೆ ಕರೆ ಮಾಡಿದ ಅಧೋಕ್ಷಜಾ ಎಂಬ ಯುವತಿಯು, “ಒಮ್ಮೆ ಭೇಟಿಯಾಗೋಣ. ನಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಸರಿಮಾಡಿಕೊಂಡು, ಇಬ್ಬರೂ ನಮ್ಮ ಪಾಡಿಗೆ ನಾವಿರೋಣ” ಎಂದಿದ್ದಾಳೆ. ಇದನ್ನು ನಂಬಿದ ಶ್ರವಣ್, ಮಾಜಿ ಪ್ರಿಯತಮೆ, ಆತನ ಹಾಲಿ ಬಾಯ್‌ಫ್ರೆಂಡ್ ಹಾಗೂ ನಾಲ್ವರು ಗೆಳೆಯರನ್ನು ತನ್ನ ಕಾರಿನಲ್ಲಿಯೇ ಭೇಟಿಯಾಗಿದ್ದಾನೆ. ಇದೇ ವೇಳೆ ಅಧೋಕ್ಷಜಾಳ ಗೆಳೆಯರು ಕಾರಿನಲ್ಲಿ ಗಾಂಜಾ ಬಚ್ಚಿಟ್ಟಿದ್ದಾರೆ. ಇದಾದ ಬಳಿಕ ಅಧೋಕ್ಷಜಾ ಜುಬಿಲಿ ಹಿಲ್ ಪೊಲೀಸರಿಗೆ ಕರೆ ಮಾಡಿ, ಗಾಂಜಾ ಸಾಗಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾಳೆ. ಆದರೆ, ಶ್ರವಣ್ ಅದೃಷ್ಟ ಚೆನ್ನಾಗಿದ್ದ ಕಾರಣ ಈಕೆಯ ವಂಚನೆ ಬಯಲಾಗಿದ್ದು, ಅಧೋಕ್ಷಜಾ, ಆಕೆಯ ಹಾಲಿ ಪ್ರಿಯತಮ ದೀಪಕ್ ಹಾಗೂ ನಾಲ್ವರು ಗೆಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಕಾರಿನಲ್ಲಿ ಡ್ರಗ್ಸ್ ಇಟ್ಟಿದ್ದು ಹೇಗೆ?
ಶ್ರವಣ್‌ನನ್ನು ಭೇಟಿಯಾಗಲು ಆರು ಜನ ಬಂದಿದ್ದಾರೆ. ಮುಂದಿನ ಸೀಟಿನಲ್ಲಿ ಕುಳಿತ ಅಧೋಕ್ಷಜಾ, ಶ್ರವಣ್ ಜತೆ ಮಾತುಕತೆ ಆರಂಭಿಸಿದ್ದಾಳೆ. ಇದೇ ವೇಳೆ ಹಿಂದೆ ಕುಳಿತ ಅಧೋಕ್ಷಜಾ ಗೆಳೆಯರು ಕಾರಿನ ಸೀಟಿನ ಕೆಳಗಡೆ ಗಾಂಜಾ ಬಚ್ಚಿಟ್ಟಿದ್ದಾರೆ. ಶ್ರವಣ್ ಜತೆ ಹಲವು ನಿಮಿಷಗಳವರೆಗೆ ಮಾತನಾಡಿದ ಅಧೋಕ್ಷಜಾ, ಗಾಂಜಾ ಬಚ್ಚಿಟ್ಟ ಬಳಿಕ ಅಲ್ಲಿಂದ ಎಲ್ಲರ ಜತೆ ತೆರಳಿದ್ದಾಳೆ. ಅಧೋಕ್ಷಜಾ ಹಾಗೂ ಆಕೆಯ ಗೆಳೆಯರ ವರ್ತನೆಯಿಂದ ಅನುಮಾನಗೊಂಡ ಶ್ರವಣ್, ಕಾರು ತಪಾಸಣೆ ಮಾಡಿದ್ದಾನೆ. ಆಗ ಸೀಟಿನ ಕೆಳಗಡೆ ಗಾಂಜಾ ಪತ್ತೆಯಾಗಿದೆ.
ಇದನ್ನೂ ಓದಿ: Domestic Violence: ಮಾಜಿ ಪ್ರಿಯಕರನ ಕಾಟ, ನೆರವು ಕೋರಿದ್ದ ಮಹಿಳೆಯೇ ಪೊಲೀಸರ ಗುಂಡಿಗೆ ಬಲಿ!
ಅಧೋಕ್ಷಜಾ ಸಂಚನ್ನು ಅರಿಯುತ್ತಲೇ ಚಾಣಾಕ್ಷತನ ಮೆರೆದ ಶ್ರವಣ್, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪ್ರಕರಣದ ಕುರಿತು ಸಂಪೂರ್ಣವಾಗಿ ತನಿಖೆ ನಡೆಸಿದ ಪೊಲೀಸರು, ಅಧೋಕ್ಷಜಾ ಹಾಗೂ ಆತನ ಪ್ರಿಯತಮ ಸೇರಿ ಆರು ಜನರನ್ನು ಬಂಧಿಸಿದ್ದಾರೆ. “ನನ್ನ ಕ್ಯಾರೆಕ್ಟರ್ ಬಗ್ಗೆ ಶ್ರವಣ್ ಕೆಟ್ಟದಾಗಿ ಮಾತನಾಡುತ್ತಿದ್ದ. ಅದಕ್ಕಾಗಿ ಸೇಡು ತೀರಿಸಿಕೊಳ್ಳಲು ಪಿತೂರಿ ನಡೆಸಿದೆವು” ಎಂದು ಪೊಲೀಸರ ವಿಚಾರಣೆ ವೇಳೆ ಯುವತಿ ಬಾಯಿಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.