Site icon Vistara News

Murder Case : ತಾಯಿ-ಮಗನ ಹಂತಕ ಅರೆಸ್ಟ್;‌ ಅವನೂ ಬೇಕಾ ನಿಂಗೆ ಎಂದು ಅಬ್ಬರಿಸಿ ಇರಿದಿದ್ದ ಅಕ್ರಮ ಪ್ರಿಯಕರ!

Mother and son murder

ಬೆಂಗಳೂರು: ರಾಜಧಾನಿ ಬೆಚ್ಚಿಬೀಳುವಂತೆ ಬಾಗಲಗುಂಟೆಯಲ್ಲಿ ಇತ್ತೀಚೆಗೆ ನಡೆದಿದ್ದ ತಾಯಿ ಮತ್ತು ಮಗನ (Mother and son Murder) ಭೀಕರ ಹತ್ಯೆಯ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೊಂದು ಅಕ್ರಮ ಸಂಬಂಧದಿಂದ (Illicit relationship) ಹುಟ್ಟಿದ ಪ್ರೇಮದ ಅಂತಿಮ ಫಲ. ಗಂಡನಿಂದ ದೂರಾದ ಹೆಣ್ಮಗಳ ಸಹಾಯಕ್ಕೆ ನಿಂತ ಅವನು ಕೊನೆಗೆ ಕೊಲೆಗಾರನಾಗಿ (Murder case) ಹೋದ. ಅವನು ಕೊಂದಿದ್ದು ಅವಳನ್ನು ಮಾತ್ರವಲ್ಲ, ಅವಳ ಮಗನನ್ನೂ!

ಬಾಗಲಗುಂಟೆಯ ರವೀಂದ್ರ ನಗರದಲ್ಲಿ ವಾಸವಾಗಿರುವ ನವನೀತ (35) ಎಂಬ ಮಹಿಳೆ ಹಾಗೂ ಅವರ ಎಂಟು ವರ್ಷದ ಮಗ ಸುಜನ್‌ನನ್ನು ಕೊಲೆ ಕಳೆದ ಸೆಪ್ಟೆಂಬರ್‌ ಆರರಂದು ಕೊಲೆ ಮಾಡಲಾಗಿತ್ತು. ತಾಯಿ ನವನೀತ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದರೆ, ಎಂಟು ವರ್ಷದ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಇಬ್ಬರ ಶವ ಕೂಡಾ ಬೆಡ್‌ ಮೇಲೆ ಬಿದ್ದಿತ್ತು. ಆಂಧ್ರ ಪ್ರದೇಶ ಮೂಲದ ನವನೀತ ಎರಡು ವರ್ಷಗಳಿಂದ ಗಂಡ ಚಂದ್ರುವಿನಿಂದ ಬೇರಾಗಿ ಸಿಂಗಲ್‌ ಮದರ್‌ ಆಗಿ ಮಗನನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಹೊರಗಿನ ವ್ಯಕ್ತಿಗಳ ಜತೆಗೆ ಅಷ್ಟೇನೂ ಬೆರೆಯದ ನವನೀತಳ ಕೊಲೆಯ ಕಾರಣ ಏನು ಎನ್ನುವುದು ಆ ಕ್ಷಣಕ್ಕೆ ಗೊತ್ತಾಗಿರಲಿಲ್ಲ. ಇದೀಗ ಪೊಲೀಸರು ಹಂತಕನನ್ನು ಅರೆಸ್ಟ್‌ ಮಾಡಿದ್ದಾರೆ.

ಪ್ರಿಯಕರ ಶೇಖರನೇ ಕೊಲೆಗಾರ!

ನವನೀತ ಅವರು ಕಳೆದ ಎರಡು ವರ್ಷಗಳಿಂದ ಗಂಡ ಚಂದ್ರುವಿನಿಂದ ದೂರವಾಗಿ ಜೀವನ ಸಾಗಿಸುತ್ತಿದ್ದಾರೆ. ಹೀಗಿದ್ದ ಒಂಟಿ ಹೆಣ್ಣಿನ ಬಾಳಿಗೆ ಬಂದ ಶೇಖರ ಎಂಬ ಪ್ರಿಯಕರ ಈಗ ಕೊಲೆಗಾರನಾಗಿದ್ದಾನೆ! ಬಾಗಲಗುಂಟೆ ಪೊಲೀಸರು ಕೊಲೆ‌ ಆರೋಪಿ ಶೇಖರ್‌ನನ್ನು ಬಂಧಿಸಿದ್ದಾರೆ.

ಆರಂಭದಲ್ಲಿ ಪೊಲೀಸರು ನವನೀತಳ ಗಂಡ ಚಂದ್ರು ಮತ್ತು ಅವನ ಕುಟುಂಬದವರನ್ನು ವಿಚಾರಿಸಿದ್ದರು. ಆದರೆ, ಅವರು ತಾವು ಕೊಲೆ ಮಾಡುವ ಮಟ್ಟಕ್ಕೆ ಹೋಗಲಿಲ್ಲ ಎಂದಿದ್ದಾರೆ. ಈ ನಡುವೆ ನವನೀತನಿಗೆ ಶೇಖರ ಎಂಬಾತನ ಜತೆ ಸಂಪರ್ಕವಿರುವ ವಿಚಾರ ಬಯಲಾಗಿತ್ತು.

ಕೊಲೆ ಮಾಡಿದ ಶೇಖರ

ಆತನನ್ನು ವಿಚಾರಣೆ ಮಾಡಿದಾಗ ಅವರು ಕೊಲೆ ಮಾಡಿದ್ದು ಹೌದು ಎಂದು ಒಪ್ಪಿಕೊಂಡಿದ್ದಾನೆ. ಕೊಲೆಯ ಕಾರಣವನ್ನೂ ಹೇಳಿದ್ದಾನೆ. ಶೇಖರ್‌ ಜತೆ ಕಳೆದ ಎರಡು ವರ್ಷಗಳಿಂದ ಚೆನ್ನಾಗಿದ್ದ ನವನೀತ ಇತ್ತೀಚೆಗೆ ಇನ್ನೊಬ್ಬನ್ನ ಜತೆ ಲವ್ವಿಡವ್ವಿ ಶುರು ಮಾಡಿದ್ದಾಳೆ ಎಂಬ ಸಂಶಯ ಅವನಿಗಿತ್ತು. ಅದು ಕೆಲವೊಂದು ಮಾಹಿತಿಗಳ ಆಧಾರದಲ್ಲಿ ಸಾಬೀತು ಕೂಡಾ ಆಗಿದ್ದರಿಂದ ಆತ ಸಿಟ್ಟಾಗಿದ್ದ ಎನ್ನಲಾಗಿದೆ. ಹೀಗಾಗಿ ಕಳೆದ ಕೆಲವು ಸಮಯದಿಂದ ಅವರ ನಡುವೆ ಪ್ರೇಮ-ಕಾಮಕ್ಕಿಂತ ಜಗಳವೇ ಮುಂಚೂಣಿಯಲ್ಲಿತ್ತು.

ಕಳೆದ ಮಂಗಳವಾರ ಸ್ವಲ್ಪ ಮಾತನಾಡಲಿಕ್ಕಿದೆ ಎಂದು ಶೇಖರ್‌ ನವನೀತಳ ಮನೆಗೆ ಬಂದಿದ್ದ. ಮನೆಯಲ್ಲಿದ್ದ ಮಗ ಸುಜನ್‌ನನ್ನು ಜ್ಯೂಸ್‌ ತರಲೆಂದು ಹೊರಗೆ ಕಳುಹಿಸಿದ್ದ ಶೇಖರ ನವನೀತಳ ಜತೆ ಜಗಳವಾಡಿದ್ದಾನೆ. ಗಂಡನನ್ನು ಬಿಟ್ಟಿದ್ದಿ. ಈಗ ನಾನೊಬ್ಬ ಸಾಕಾಗಲ್ವಾ ನಿಂಗೆ, ಇನ್ನೊಬ್ಬ ಬೇಕಾ ಎಂದು ನಿಂದಿಸಿದ್ದಾನೆ. ಕೊನೆಗೆ ಆಕೆಯ ಕತ್ತನ್ನೇ ಸೀಳಿ ಹಾಕಿದ್ದಾನೆ.

ಇದನ್ನೂ ಓದಿ: Murder Case : ರಾಜಧಾನಿಯಲ್ಲಿ ಭಯಾನಕ ಘಟನೆ; ತಾಯಿ, 8 ವರ್ಷದ ಮಗನ ಬರ್ಬರ ಹತ್ಯೆ

ಈ ನಡುವೆ ಜ್ಯೂಸ್‌ ಹಿಡಿದುಕೊಂಡು ಸುಜನ್‌ ಒಳಗೆ ಬಂದಿದ್ದ. ನವನೀತಗಳ ಸಾವನ್ನು ಮುಚ್ಚಿಟ್ಟ ಶೇಖರ ಸುಜನ್‌ಗೆ ನಿನಗೊಂದು ಮ್ಯಾಜಿಕ್‌ ತೋರಿಸ್ತೇನೆ ಎಂದು ಮರುಳು ಮಾಡಿದ್ದ. ಸುಜನ್‌ನನ್ನು ಚೇರ್ ಮೇಲೆ ಕುರಿಸಿ ವೇಲ್‌ನಿಂದ ಕೈ ಕಟ್ಟಿ ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಸುಜನ್‌ನನ್ನು ಕೊಂದ ಬಳಿಕ ಆತನ ಶವವನ್ನು ಹಾಸಿಗೆಯಲ್ಲಿ ತಾಯಿಯ ಪಕ್ಕವೇ ಮಲಗಿಸಿದ್ದಾನೆ. ಕೊನೆಗೆ ಚಾಕುವನ್ನು ನವನೀತಳ ಕೈಯಲ್ಲಿ ಇಟ್ಟಿದ್ದಾನೆ. ಆಕೆಯೇ ಮಗನನ್ನು ಕೊಂದು ತಾನೂ ಕುತ್ತಿಗೆ ಚೂರಿ ಹಾಕಿಕೊಂಡು ಪ್ರಾಣ ಬಿಟ್ಟಿದ್ದಾಳೆ ಎಂದು ಬಿಂಬಿಸಲು ಮುಂದಾಗಿದ್ದಾನೆ. ಆದರೆ, ಮನೆ ಮಾಲೀಕರು, ನವನೀತಳ ಸಂಬಂಧಿಕರು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಶೇಖರ್‌ ಈಗ ಸಿಕ್ಕಿಬಿದ್ದಿದ್ದಾನೆ.

Exit mobile version