ಬೆಂಗಳೂರು: ಇವರು ಪೊಲೀಸ್ ಇನ್ಸ್‌ಪೆಕ್ಟರ್ (Police Inspector). ನೋಡುವುದಕ್ಕೆ ಕಟ್ಟುಮಸ್ತಾಗಿ, ಅಟ್ರಾಕ್ಟಿವ್ ಆಗಿ ಇದಾರೆ. ಇದನ್ನೇ ಬಂಡವಾಳ ಮಾಡ್ಕೊಂಡು ಮನೆಯ ಹೊರಗೆ ಒಂದೆರಡು ಸಂಬಂಧ ಮೆಂಟೇನ್ ಮಾಡ್ಕೊಂಡು ಆರಾಮಾಗಿ ಇದ್ರು. ಆರಂಭದಲ್ಲಿ ಹೆಂಡತಿ ಇದಕ್ಕೆ ಆಕ್ಷೇಪ ಮಾಡ್ತಾ ಇದ್ರು. ಈಗ ಅಕ್ರಮ ಸಂಬಂಧಿಗಳ ನಡುವೆಯೇ ಫೈಟಿಂಗ್ ಶುರುವಾಗಿ ಅದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ.
ʻನನ್ನ ಗಂಡ ಬಟ್ಟೆ ಬದಲಿಸುವಂತೆ ಮಹಿಳೆಯರನ್ನು ಬದಲಿಸ್ತಾನೆ. ಎಲ್ಲರನ್ನೂ ಯಾಮಾರಿಸ್ತಾ ಇದ್ದಾನೆʼʼ ಎಂದು ಖುದ್ದು ಪತ್ನಿಯೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕಥೆಯ ಸಾರಾಂಶ ಏನೆಂದರೆ, ಈ ಇನ್ಸ್‌ಪೆಕ್ಟರ್ ಪತ್ನಿಗೆ ಯಾಮಾರಿಸಿ ಒಂದು ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಬಳಿಕ ಆಕೆಗೂ ಯಾಮಾರಿಸಿ ಇನ್ನೊಬ್ಬಳ ಜತೆಗೆ ಚಕ್ಕಂದ ಶುರು ಮಾಡಿದ್ದ. ಅದು ಎಲ್ಲಿಯವರೆಗೆ ಹೋಗಿದೆ ಎಂದರೆ ನಾನು ಮೂರನೆಯವಳನ್ನೇ ಮದುವೆ ಆಗಿದ್ದೀನಿ ಏನೀಗ ಎಂದು ಕೇಳಿದ್ದೇ ಹೆಂಡತಿ ಮತ್ತು ಮತ್ತೊಬ್ಬರು ಸಿಟ್ಟಿಗೆದಿದ್ದಾರೆ. ನಿಜವಾದ ಪತ್ನಿ ಈಗ ದೂರು ನೀಡಿದ್ದಾರೆ.
ಇದು ಸಿಐಡಿ ಇನ್ಸ್‌ಪೆಕ್ಟರ್ ಮೇಲೆ ದಾಖಲಾಗಿರುವ ದೂರಿನಲ್ಲಿರುವ ಅಂಶಗಳನ್ನು ಆಧರಿಸಿದ ರಿಪೋರ್ಟ್. ಇನ್ಸ್‌ಪೆಕ್ಟರ್ ಶಿವಾರ್ಜುನ್ (ಹೆಸರು ಬದಲಿಸಲಾಗಿದೆ) ವಿರುದ್ಧ ಪತ್ನಿ ಶಿವಾನಿ (ಹೆಸರು ಬದಲಿಸಲಾಗಿದೆ) ಅವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಭವಾನಿ ಮೂಲತಃ ದಾವಣಗೆರೆಯವರಯ. ಬಿಇ ಭವಾನಿ ಅವರ ತಂದೆ ಸರ್ಕಾರಿ ಅಧಿಕಾರಿಯಾಗಿದ್ದು ಬೆಂಗಳೂರಿನ ಮತ್ತೀಕೆರೆಯಲ್ಲಿದ್ದರು. ಆಗ ಪಕ್ಕದ ಮನೆಯಲ್ಲಿ ಬಿಬಿಎಂಪಿ ಅಧಿಕಾರಿಯಾಗಿದ್ದ ಶಿವಪ್ಪ (ಹೆಸರು ಬದಲಿಸಿದೆ), ಅವರ ಹೆಂಡತಿ ಮತ್ತು ತಾಯಿ ಅವರಿದ್ದರು. ಶಿವಾನಿ ಅವರ ತಂದೆ ನಿವೃತ್ತಿ ಬಳಿಕ ದಾವಣಗೆರೆಗೆ ನಂತರ ಆಯುಕ್ತ ಅವರು ತಮ್ಮ ತಮ್ಮನಾದ ಸಬ್ ಇನ್ಸ್ ಪೆಕ್ಟರ್ ಶಿವಾರ್ಜುನನಿಗೆ ಶಿವಾನಿಯನ್ನು ಕೊಟ್ಟು ಮದುವೆ ಮಾಡಿಸಬಹುದೇ ಎಂದು ಕೇಳಿ ಸಂಬಂಧ ಕುದುರಿಸಿದ್ದರು.
ಆರಂಭದಲ್ಲಿ ನೀವು ಏನೂ ಕೊಡುವುದು ಬೇಡ, ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟರೆ ಸಾಕು ಎಂದು ಹೇಳಿದ್ದ ಶಿವಾರ್ಜುನ್ ಮನೆಯವರು ಬಳಿಕ ಒಂದೊಂದೇ ಬೇಡಿಕೆಗಳನ್ನು ಇಡಲು ತೊಡಗಿದ್ದರು. 10 ಲಕ್ಷ ರೂಪಾಯಿ ನಗದು, 250 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ ಕೊಡಬೇಕು ಎಂದು ಹೇಳಿದ್ದರು. ಕೊನೆಗೆ 8 ಲಕ್ಷ ರೂ. ನಗದು, 250 ಗ್ರಾಂ ಚಿನ್ನ, ಐದು ಕೆಜಿ ಬೆಳ್ಳಿಗೆ ಫಿಕ್ಸ್ ಆಯಿತು. ಮದುವೆ ಫಿಕ್ಸ್ ಆದ ದಿನವೇ ವರನ ಬಟ್ಟೆಗೆಂದು 50000 ರೂ. ನೀಡಲಾಗಿತ್ತಂತೆ. ಆವತ್ತೇ ಶಿವಾರ್ಜುನ್ ಅವರ ತಾಯಿ ಒಂದು ಹಾಫ್ ಸೈಟಾದರೂ ಕೊಡಿಸಿ ಎಂದು ಹೇಳಿದ್ದರಂತೆ! ಇದೆಲ್ಲ ಕಥೆ ಮುಗಿದು 2012ರ ಜೂನ್ 22ರಂದು ಮದುವೆ ಆಗಿದೆ.
ಮದುವೆಯ ಬಳಿಕ ಮತ್ತೆ ಹಣಕ್ಕಾಗಿ ಒತ್ತಡ ಹಾಕಲು ಆರಂಭಿಸಿದರು. ಮೊದಲ ಬೇಡಿಕೆ 8 ಲಕ್ಷ ರೂ. ಆಗಿತ್ತು. ಆವತ್ತು ಗಣೇಶನ ಹಬ್ಬಕ್ಕೆ ಮಗಳನ್ನು ಕರೆದುಕೊಂಡು ಹೋಗಲು ಬಂದ ತಂದೆ ಜತೆ ಜಗಳ ತೆಗೆದು ಹಲ್ಲೆ ಕೂಡಾ ಮಾಡಲಾಗಿತ್ತಂತೆ. ಆವತ್ತು ಶಿವಾರ್ಜುನ್ ಅವರ ಅಣ್ಣ ಶಿವಪ್ಪ ಅವರು ʻಹಣ ಕೊಡಬೇಕು ಇಲ್ಲವಾದರೆ ಮನೆಯಿಂದ ಹೊರಹೋಗಬೇಕುʼ ಎಂದಿದ್ದರಂತೆ. ಆಗ ಶಿವಾರ್ಜುನ ಹೆಂಡತಿಯನ್ನು ತವರು ಮನೆಗೆ ಕಳುಹಿಸಿ ಮನೆ ಮಾಡಿದ ಮೇಲೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದರಂತೆ.
2012ರ ನವೆಂಬರ್‌ನಲ್ಲಿ ಶಿವಾರ್ಜುನ ಮನೆ ಮಾಡುವ ಹೊತ್ತಿಗೆ ಶಿವಾನಿ ಗರ್ಭಿಣಿ. ರಾಜಾಜಿನಗರದಲ್ಲಿರುವ ಮನೆಗೆ ಕರೆದುಕೊಂಡು ಹೋದ ಬಳಿಕ ಮನೆಯವರನ್ನು ಬರಲು ಬಿಟ್ಟಿರಲಿಲ್ಲವಂತೆ. ಜತೆಗೆ ಮಕ್ಕಳು ಬೇಡ ಎಂದು ಹಠ ಮಾಡುತ್ತಿದ್ದರಂತೆ, ಅಬಾರ್ಷನ್‌ಗೆ ಒತ್ತಡ ಹಾಕುತ್ತಿದ್ದರಂತೆ. ಗರ್ಭಿಣಿಯಾಗಿರುವಾಗಲೇ ಹಣಕ್ಕಾಗಿ ಪೀಡನೆ ಶುರುವಾಗಿತ್ತು. ಆಗ ಮೊತ್ತ 20 ಲಕ್ಷ ರೂ.ಗಳಿಗೆ ಏರಿತ್ತಂತೆ. ಶಿವಾನಿ ತುಂಬು ಗರ್ಭಿಣಿಯಾಗಿರುವ ಮನೆ ಕಡೆಗೆ ಬರುತ್ತಲೇ ಇರಲಿಲ್ಲವಂತೆ. ಕೊನೆಗೆ ಮಗು ಹುಟ್ಟಿದಾಗಲೂ ದೂರದಿಂದಲೇ ನೋಡಿ ನಾಪತ್ತೆಯಾಗಿದ್ದರು ಎನ್ನುವುದು ಶಿವಾನಿ ಹೇಳುವ ಕಥೆ.
ಮತ್ತೊಬ್ಬಳೊಂದಿಗೆ ಅನೈತಿಕ ಸಂಬಂಧ!
ಹೆಂಡತಿಯನ್ನು ಅರ್ಧ ದಾರಿಯಲ್ಲಿ ಏಕಾಂಗಿಯಾಗಿ ಮಾಡಿದ್ದ ಶಿವಾರ್ಜುನ್ ಈ ನಡುವೆ 18 ವರ್ಷದ ಮಗನಿರುವ ಒಬ್ಬ ಮಹಿಳೆಯ ಜತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರಂತೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದಾಗ ಅವರು ವಿಚಾರಿಸಲು ಮುಂದಾದಾಗ ಶಿವಾರ್ಜುನ್ ನಾಪತ್ತೆಯೇ ಆಗಿಬಿಟ್ಟರಂತೆ. ಕೊನೆಗೆ ಅವರ ಅಮಾನತು ಕೂಡಾ ಆಗಿದೆಯಂತೆ. ಎರಡು ವರ್ಷ ಅಮಾನತಾಗಿದ್ದ ಸಮಯದಲ್ಲಿ ಶಿವಾರ್ಜುನ್ ಇದ್ದಿದ್ದು ಶೀಲಾ (ಹೆಸರು ಬದಲಿಸಿದೆ) ಪೂಜಾರಿ ಎಂಬವರ ಮನೆಯಲ್ಲಿ ಅನ್ನುತ್ತಾರೆ ಶಿವಾನಿ.
ಈ ನಡುವೆ ಶಿವಾರ್ಜುನ್ ಬಸವೇಶ್ವರ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಮಾಡುತ್ತಿದ್ದು ಆಗ ಅಲ್ಲಿಗೆ ದೂರು ಕೊಡಲು ಬಂದ ಬಿಜಲಿ ಠಾಕೂರ್ (ಹೆಸರು ಬದಲಿಸಲಾಗಿದೆ) ಎಂಬಾಕೆಯ ಜತೆ ಸಂಬಂಧ ಕುದುರಿಸಿಕೊಂಡಿದ್ದರು ಎನ್ನಲಾಗಿದೆ. ಇದನ್ನು ತಿಳಿದ ಶೀಲಾ ಪೂಜಾರಿ ಠಾಣೆಗೇ ಬಂದು ಎಳೆದಾಡಿ ಜಗಳ ಮಾಡಿದ್ದರಂತೆ.
ಇದೆಲ್ಲವನ್ನೂ ನೋಡುತ್ತಿದ್ದ ಶಿವಾನಿ ಅದೊಂದು ಸಾರಿ ಬಸವೇಶ್ವರ ನಗರ ಠಾಣೆಗೇ ಹೋಗಿ ಜಗಳ ಮಾಡಿದ್ದರಂತೆ. ಆಗ ಶಿವಾರ್ಜುನ್ ನಾನು ಬಿಜಲಿ ಠಾಕೂರ್‌ಳನ್ನು ಮದುವೆಯಾಗಿದ್ದೇನೆ, ಎರಡು ಮಕ್ಕಳಿವೆ. ನೀನು ಏನು ಬೇಕಾದರೂ ಮಾಡಿಕೋ ಎಂದು ಸವಾಲು ಹಾಕಿದ್ದರಂತೆ. ಶಿವಾರ್ಜುನ್ ಬಿಜಲಿ ಠಾಕೂರ್ ಮನೆಯಲ್ಲೇ ಇರುವುದನ್ನು ಶಿವಾನಿಯ ಮನೆಯವರು ಕೂಡಾ ನೋಡಿದ್ದಾರಂತೆ.
ಇದನ್ನೂ ಓದಿ: Illicit relationship: ಪತ್ನಿಯನ್ನು ಕೊಲೆ ಮಾಡಿ ಅತ್ತೆಗೆ ಫೋನ್ ಮಾಡಿ ಹೇಳಿದ ಅಳಿಯ!
ಇದೆಲ್ಲ ವಿಚಾರಗಳನ್ನು ಸೇರಿಸಿ ಸುದೀರ್ಘ ದೂರು ದಾಖಲಿಸಿರುವ ಶಿವಾನಿ ಅವರು ಇದೀಗ ಶಿವಾರ್ಜುನ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ದೂರು ಕೊಟ್ಟು 15 ದಿನವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಶಿವಾನಿ ಅವರನ್ನು ಕೆರಳಿಸಿದೆ.
ಶಿವಾನಿ ಅವರು ಶಿವಾರ್ಜುನ್, ಅವರ ಅಣ್ಣ ಕೆಎಎಸ್ ಮುನ್ಸಿಪಲ್ ಆಯುಕ್ತ ಶಿವಪ್ಪ, ಅವರ ಪತ್ನಿ, ತಾಯಿ ವಿರುದ್ಧ ದೂರು ನೀಡಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.