ನವ ದೆಹಲಿ: ೧೯೯೩ರಲ್ಲಿ ನಡೆದ ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲಾಗಿರುವ ಅಬು ಸಲೇಂನನ್ನು ಜೀವನಪೂರ್ತಿ ಜೈಲಿನಲ್ಲಿ ಇಟ್ಟುಕೊಳ್ಳುವಂತಿಲ್ಲ. ೨೫ ವರ್ಷದ ಜೈಲು ಶಿಕ್ಷೆ ಅವಧಿ ಪೂರ್ತಿಯಾದ ಕೂಡಲೇ ಆತನನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.
೨೦೦೫ರಲ್ಲಿ ಅಬು ಸಲೇಂನನ್ನು ಪೋರ್ಚುಗಲ್‌ನಿಂದ ಗಡಿಪಾರು ಮಾಡಿಕೊಳ್ಳುವಾಗ ಆತನ ಶಿಕ್ಷೆ ಅವಧಿ ೨೫ ವರ್ಷಕ್ಕಿಂತ ಹೆಚ್ಚು ಇರುವುದಿಲ್ಲ ಎಂಬ ವಾಗ್ದಾನವನ್ನು ಕೇಂದ್ರ ಸರಕಾರ ಅಲ್ಲಿನ ಸರಕಾರಕ್ಕೆ ನೀಡಿತ್ತು. ಈ ಮಾತನ್ನು ಉಳಿಸಿಕೊಳ್ಳುವುದು ಸರಕಾರದ ಹೊಣೆಗಾರಿಕೆ ಆಗಿರುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ?
ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿದ್ದ ಗ್ಯಾಂಗ್‌ಸ್ಟರ್ ಅಬು ಸಲೇಂ ಪೋರ್ಚುಗಲ್‌ನಲ್ಲಿ ಆಶ್ರಯ ಪಡೆದಿದ್ದ. ಆತನನ್ನು ಅಲ್ಲಿಂದ ಗಡಿಪಾರು ಮಾಡಿ ತರಲು ಕೇಂದ್ರ ಸರಕಾರ ಹರಸಾಹಸವನ್ನೇ ನಡೆಸಿತ್ತು. ಕೊನೆಗೆ ಪೋರ್ಚುಗಲ್ ಸರಕಾರದೊಂದಿಗಿನ ಸಂಧಾನದಲ್ಲಿ ಆರೋಪಿಗೆ ೨೫ ವರ್ಷಕ್ಕಿಂತ ಹೆಚ್ಚು ಅವಧಿಯ ಶಿಕ್ಷೆ ವಿಧಿಸುವುದಿಲ್ಲ, ೨೫ ವರ್ಷದ ಶಿಕ್ಷೆಯ ಬಳಿಕ ಬಂಧಮುಕ್ತಗೊಳಿಸಲಾಗುವುದು ಎಂದು ವಾಗ್ದಾನ ಮಾಡಲಾಗಿತ್ತು. ಜತೆಗೆ ಆತನಿಗೆ ಮರಣದಂಡನೆ ಶಿಕ್ಷೆ ನೀಡುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ೨೦೦೫ರ ನವೆಂಬರ್ ೫ರಂದು ಅಬು ಸಲೇಂನನ್ನು ಭಾರತಕ್ಕೆ ಕರೆ ತರಲಾಗಿತ್ತು. ಈ ವಾಗ್ದಾನದ ಅವಧಿ ೨೦೩೦ರವರೆಗೆ ಜಾರಿಯಲ್ಲಿರುತ್ತದೆ.
ಈ ನಡುವೆ, ೧೯೯೫ರಲ್ಲಿ ನಡೆದ ಮುಂಬಯಿ ಮೂಲದ ಬಿಲ್ಡರ್ ಪ್ರದೀಪ್ ಜೈನ್ ಅವರ ಕೊಲೆಗೆ ಸಂಬಂಧಿಸಿ ಟಾಡಾ ಕೋರ್ಟ್ ೨೦೧೫ರ ಫೆಬ್ರವರಿ ೨೫ರಂದು ತೀರ್ಪು ನೀಡಿದೆ. ಇದರಲ್ಲಿ ಸಲೇಂ ಮತ್ತು ಆತನ ಚಾಲಕ ಮೆಹದಿ ಹಸನ್‌ಗೆ ಜೀವನಪೂರ್ತಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಇದನ್ನು ಪ್ರಶ್ನಿಸಿ ಅಬುಸಲೇಂ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದ. ಇದನ್ನು ಪರಿಗಣಿಸಿದ ಕೋರ್ಟ್ ಅಬು ಸಲೇಂ ಮತ್ತು ಸರಕಾರದ ಪರ ವಕೀಲರ ವಾದವನ್ನು ಪರಿಗಣಿಸಿ ಮಹತ್ವದ ತೀರ್ಪನ್ನು ನೀಡಿದೆ.
ಕೇಂದ್ರ ಸರಕಾರವು ಪೋರ್ಚುಗಲ್ ಸರಕಾರಕ್ಕೆ ನೀಡಿರುವ ವಾಗ್ದಾನವನ್ನು ಮುರಿಯುವಂತಿಲ್ಲ. ಶಿಕ್ಷೆಯ ಅವಧಿ ಪೂರ್ಣಗೊಳ್ಳುತ್ತಿದ್ದಂತೆಯೇ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಚನ ಬದ್ಧತೆ ಮತ್ತು ಸಂವಿಧಾನದ ೭೨ನೇ ವಿಧಿಯ ಅಡಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸರಕಾರ ರಾಷ್ಟ್ರಪತಿಗಳ ಸಲಹೆಯನ್ನು ಕೋರಬಹುದು ಎಂದು ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಎಂಎಂ ಸುಂದರೇಶ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ.
೨೫ ವರ್ಷಗಳ ಶಿಕ್ಷೆಯ ಅವಧಿ ಪೂರ್ಣಗೊಂಡು ಒಂದು ತಿಂಗಳ ಒಳಗೆ ಸರಕಾರ ಸಿಆರ್‌ಪಿಸಿ ಸೆಕ್ಷನ್‌ಗಳ ಅಡಿಯಲ್ಲಿರುವ ಬರುವ ಶಿಕ್ಷೆಗಳನ್ನು ಕಡಿತಗೊಳಿಸಿ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.