ಲಖನೌ: ಮಕ್ಕಳ ನಗುವಿನಷ್ಟೇ ಅವುಗಳ ಅಳು, ಚೀರಾಟ, ರಚ್ಚೆ ಹಿಡಿದು ಕೂರುವುದು ಕೂಡ ಮಕ್ಕಳಿರುವ ಮನೆಗೆ ಭೂಷಣ. ಅದರಲ್ಲೂ, ಶಿಶುಗಳಿಂದ ಎರಡು ವರ್ಷದವರೆಗೆ ಮಕ್ಕಳು ಮಾತನಾಡಲು ಆಗದೆ, ಸಣ್ಣ ಪೆಟ್ಟಾದರೆ, ಹಸಿವಾದರೆ, ಅಮ್ಮ ಒಂದೆರಡು ನಿಮಿಷ ಕಾಣದಾದರೆ ಜೋರಾಗಿ ಅಳುತ್ತವೆ. ಹೀಗೆ, ಉತ್ತರ ಪ್ರದೇಶದಲ್ಲಿ ಹಸಿವಿನಿಂದ ಅಳುತ್ತಿದ್ದ ಒಂದೂವರೆ ತಿಂಗಳ ಮಗನನ್ನು ತಂದೆಯೊಬ್ಬ ಕೊಲೆಗೈದು, ಪಿತೃಕುಲಕ್ಕೇ ಕಳಂಕ ತಂದಿದ್ದಾನೆ.
ಹೌದು, ಉತ್ತರ ಪ್ರದೇಶದ ಕೌಸಂಬಿ ಜಿಲ್ಲೆ ಕೇಸರಿಯಾ ಗ್ರಾಮದಲ್ಲಿ ರವಿ ಮೌರ್ಯ (25) ಎಂಬ ಕಟುಕನು ಕುಡಿದ ಮತ್ತಿನಲ್ಲಿ ಮಗುವನ್ನೇ ಸಾಯಿಸಿದ್ದಾನೆ. ಜೂನ್ 15ರ ರಾತ್ರಿ ಕಂಠಮಟ್ಟ ಕುಡಿದು ಬಂದ ರವಿ ಮೌರ್ಯನಿಗೆ ತನ್ನ ವಂಶೋದ್ಧಾರಕ ಅಳುತ್ತಿರುವುದನ್ನು ಕಂಡಿದ್ದಾನೆ. ಕುಡಿದ ಮತ್ತಿನಲ್ಲಿ ಮಗುವಿಗೆ ಗದರಿದ್ದಾನೆ. ಆ ಕಡೆ ಅಮ್ಮನೂ ಇಲ್ಲದೆ, ಹಸಿವಿನಿಂದ ಕಂಗೆಟ್ಟಿದ್ದ ಮಗುವಿಗೆ ಅಪ್ಪ ಗದರಿದ್ದರಿಂದ ಇನ್ನಷ್ಟು ಹೆದರಿಕೆಯಾಗಿ ಅಳು ಜೋರು ಮಾಡಿದೆ. ಇದರಿಂದ ಕಿರಿಕಿರಿ ಎನಿಸಿ ಮಗುವನ್ನು ನೆಲಕ್ಕೆ ಜೋರಾಗಿ ಎಸೆದಿದ್ದಾನೆ. ಹಾಗಾಗಿ ಮಗು ಮೃತಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವರ್ಷದಲ್ಲೇ ಸಾಕಾಯಿತು ದಾಂಪತ್ಯ
ಒಂದು ವರ್ಷದ ಹಿಂದಷ್ಟೇ ರವಿ ಮೌರ್ಯ ಮದುವೆಯಾಗಿದ್ದು, ಇಷ್ಟು ಸಣ್ಣ ಅವಧಿಯಲ್ಲೇ ಹೆಂಡತಿ ಜತೆ ಜಗಳವಾಡಿದ್ದಾನೆ. ನಿತ್ಯವೂ ಕುಡಿದು ಬಂದು, ಈತನ ಹುಚ್ಚಾಟ ಸಹಿಸದ ಹೆಂಡತಿಯು ಹಸುಗೂಸನ್ನು ಕರೆದುಕೊಂಡು ಚಿಕ್ಕಮ್ಮನ ಮನೆಗೆ ಹೋಗಿದ್ದಾಳೆ. ಇಷ್ಟಾದರೂ ಸುಮ್ಮನಿರದ ರವಿ ಮೌರ್ಯ, ಹೆಂಡತಿ ಬಳಿ ಹೋಗಿ, ಬಲವಂತವಾಗಿ ಮಗನನ್ನು ಕರೆದುಕೊಂಡು ಬಂದಿದ್ದಾನೆ.
ಹೀಗೆ, ಹಸುಗೂಸನ್ನು ಮನೆಗೆ ಕರೆದುಕೊಂಡು, ಅದನ್ನು ಸರಿಯಾಗಿ ನೋಡಿಕೊಳ್ಳದ ರವಿ ಮೌರ್ಯ ಈಗ ಕೊಂದೇ ಬಿಟ್ಟಿದ್ದಾನೆ. ಹೆಂಡತಿ ಮುನಿಸಿಕೊಂಡು ಹೋದಳು ಎಂದು ಕುಡಿತಕ್ಕೆ ಮತ್ತಷ್ಟು ದಾಸನಾದ ಆತ, ಕುಡಿದ ಅಮಲಿನಲ್ಲಿಯೇ ಮಗುವನ್ನು ಎಸೆದು ಕೊಂದುಹಾಕಿದ್ದಾನೆ. ಮಗು ಮೃತಪಟ್ಟಿದ್ದನ್ನು ದೃಢಪಡಿಸಿದ ರವಿ ಮೌರ್ಯ, ಕೂಡಲೇ ಮನೆಯಿಂದ ಕಾಲ್ಕಿತ್ತಿದ್ದಾನೆ.
ಇದನ್ನೂ ಓದಿ: kidnapping case: ಬಾಲಕಿಗೆ ‘ಕಿಡ್ನ್ಯಾಪ್’ ಆಟ; ಡೆಲಿವರಿ ಬಾಯ್‌ಗೆ ಪ್ರಾಣ ಸಂಕಟ
ರವಿ ಮೌರ್ಯ ನಾಪತ್ತೆಯಾದ ಬಳಿಕ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಗಿದೆ. ಅದರಲ್ಲೂ, ಒಂದೂವರೆ ತಿಂಗಳ ಮಗು ಶವವಾಗಿ ಬಿದ್ದಿದ್ದನ್ನು ನೋಡಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ರವಿ ಮೌರ್ಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ