ನವದೆಹಲಿ: ಪ್ರೀತಿಗಾಗಿ ತಂದೆ-ತಾಯಿಯ ವಿರೋಧ ಕಟ್ಟಿಕೊಂಡವರು, ಮನೆ ಬಿಟ್ಟು ಓಡಿಹೋದವರು, ಎಲ್ಲರ ವಿರೋಧದ ಮಧ್ಯೆಯೂ ಒಂದಾಗಿ ಇದ್ದವರ ನಿದರ್ಶನಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ದೆಹಲಿಯಲ್ಲಿ (Delhi) ಇನ್‌ಸ್ಟಾಗ್ರಾಂನಲ್ಲಿ (Instagram) ಪರಿಚಯವಾದ ಚೆಲುವೆಯೊಬ್ಬಳಿಗಾಗಿ 18 ವರ್ಷದ ಯುವಕನೊಬ್ಬ 20 ವರ್ಷದ ಯುವಕನನ್ನು ಕೊಲೆ ಮಾಡಿದ್ದಾನೆ. ಸುಮಾರು 50 ಬಾರಿ ಚಾಕು ಇರಿದು ಯುವಕನನ್ನು ಕೊಲೆ ಮಾಡಲಾಗಿದ್ದು, ಇಡೀ ಪ್ರಕರಣವೀಗ ದೆಹಲಿ ಜನರನ್ನು ಆತಂಕಕ್ಕೀಡು ಮಾಡಿದೆ.
ದೆಹಲಿಯ ಭಗೀರಥಿ ವಿಹಾರದಲ್ಲಿ ಬುಧವಾರ (ಡಿಸೆಂಬರ್ 27) ರಾತ್ರಿ ಮಹೀರ್ (ಇಮ್ರಾನ್) ಎಂಬ ಯುವಕನು ಹತ್ಯೆಗೀಡಾಗಿದ್ದಾನೆ. ಪ್ರೀತಿಗಾಗಿ ಅರ್ಮಾನ್ ಎಂಬಾತನೇ ಮಹೀರ್‌ನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೈಸಲ್ ಹಾಗೂ ಸಮೀರ್ ಎಂಬ ಗೆಳೆಯರ ಜತೆ ಭಗೀರಥಿ ವಿಹಾರಕ್ಕೆ ಬಂದ ಅರ್ಮಾನ್, ಮಹೀರ್‌ಗೆ ಸುಮಾರು 50 ಬಾರಿ ಚಾಕು ಇರಿದಿದ್ದಾನೆ. ಮೂವರು ಕೂಡಿ ಸತತವಾಗಿ ಚಾಕು ಇರಿದ ಪರಿಣಾಮ ಮಹೀರ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಇತ್ತೀಚೆಗೆ ಮಹೀರ್‌ಗೆ ಇನ್‌ಸ್ಟಾಗ್ರಾಂನಲ್ಲಿ 21 ವರ್ಷದ ಯುವತಿಯ ಪರಿಚಯವಾಗಿದೆ. ಬಳಿಕ ಇಬ್ಬರೂ ಮೊಬೈಲ್ ನಂಬರ್ ಹಂಚಿಕೊಂಡಿದ್ದು, ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ವಿಡಿಯೊ ಕಾಲ್ ಕೂಡ ಮಾಡುತ್ತಿದ್ದರು. ಯುವತಿ ಜತೆ ಈಗಾಗಲೇ ಪ್ರೇಮ ಸಲ್ಲಾಪದಲ್ಲಿ ತೊಡಗಿರುವ ಅರ್ಮಾನ್‌ಗೆ ಇದು ಸಹ್ಯ ಎನಿಸಿಲ್ಲ. ನನ್ನ ಗರ್ಲ್‌ಫ್ರೆಂಡ್‌ಳಿಂದ ದೂರವಿರು ಎಂದು ಮಹೀರ್‌ಗೆ ಆಗಾಗ ಅರ್ಮಾನ್ ಎಚ್ಚರಿಕೆ ನೀಡಿದ್ದಾನೆ. ಆದರೂ, ಯುವತಿ ಹಾಗೂ ಮಹೀರ್ ಮಧ್ಯೆ ಮೊಬೈಲ್‌ನಲ್ಲಿ ಚಾಟಿಂಗ್, ಗಂಟೆಗಟ್ಟಲೆ ಮಾತುಕತೆ ಮುಂದುವರಿದಿದೆ.
ಕೆಲ ದಿನಗಳ ಹಿಂದಷ್ಟೇ ಯುವತಿ ಹಾಗೂ ಮಹೀರ್ ಫೋನ್‌ನಲ್ಲಿ ವಿಡಿಯೊ ಕಾಲ್ ಮೂಲಕ ಮಾತನಾಡುವಾಗಲೇ ಅರ್ಮಾನ್ ಪ್ರವೇಶವಾಗಿದೆ. ಯುವತಿಯಿಂದ ಮೊಬೈಲ್ ಕಸಿದುಕೊಂಡ ಅರ್ಮಾನ್, ಮಹೀರ್‌ಗೆ ಫೋನ್‌ನಲ್ಲಿಯೇ ಎಚ್ಚರಿಕೆ ನೀಡಿದ್ದಾನೆ. ಇಷ್ಟಾದರೂ ಇಬ್ಬರ ಮಧ್ಯೆ ಮಾತುಕತೆ ಮುಂದುವರಿದ ಕಾರಣ ಮಹೀರ್ ಇರುವ ಜಾಗಕ್ಕೆ ತೆರಳಿ ಚಾಕು ಇರಿಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅರ್ಮಾನ್ ಹಾಗೂ ಆತನ ಇಬ್ಬರು ಗೆಳೆಯರು ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಇನ್‌ಸ್ಟಾಂಗ್ರಾಂ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗುವ ಪ್ರೇಮ ಪ್ರಕರಣಗಳು ದುರಂತ ಅಂತ್ಯ ಕಾಣುತ್ತಿರುವುದು ಇತ್ತೀಚೆಗೆ ಜಾಸ್ತಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ