ಭೋಪಾಲ್: ನಮ್ಮ ದೇಶದಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಇಲ್ಲದವರು ಯಾರು ಹೇಳಿ? ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಅದರ ಹುಚ್ಚಿದೆ. ಅದರಲ್ಲೂ ಐಪಿಎಲ್ ಬಂದ ಮೇಲೆ ದಿನವೂ ಹಬ್ಬವೆ. ಈ ನಡುವೆ ಹಲವಾರು ಮಂದಿ ಬೆಟ್ಟಿಂಗ್ ಮೂಲಕ ತಾವೇ ಅದೃಷ್ಟ ಪರೀಕ್ಷೆಗಳಿಗೆ ಇಳಿಯುತ್ತಾರೆ. ಹೀಗೆ ಕ್ರಿಕೆಟ್ ಬೆಟ್ಟಿಂಗ್ (IPL Betting) ಎನ್ನುವುದು ಪಕ್ಕಾ ಗ್ಯಾಂಬ್ಲಿಂಗ್. ಇಲ್ಲಿ ಪಡೆದುಕೊಂಡವರಿಗಿಂತ ಕಳೆದುಕೊಂಡವರೇ ಹೆಚ್ಚು. ಇಂಥಹುದೇ ಬೆಟ್ಟಿಂಗ್‌ಗೆ ಸಿಲುಕಿದ ಪೋಸ್ಟ್ ಮಾಸ್ಟರ್ ಒಬ್ಬರು ಒಂದು ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ. ನಿಜವೆಂದರೆ, ಅವರು ಹಣ ಕಳೆದುಕೊಂಡಿದ್ದಾರೆ ಎನ್ನುವುದಕ್ಕಿಂತಲೂ ಅವರು ಅದರಲ್ಲಿ ವಿನಿಯೋಗಿಸಿದ ಹಣ ಯಾರದು ಎನ್ನುವುದು ಇನ್ನೂ ಇಂಟರೆಸ್ಟಿಂಗ್.
ಮಧ್ಯ ಪ್ರದೇಶದ ಸಾಗರ ಜಿಲ್ಲೆಯ ಬಿನಾ ಉಪ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ವಿಶಾಲ್ ಅಹಿರ್ವಾರ್ ಎಂಬವರೇ ಒಂದು ಕೋಟಿ ಕಳೆದುಕೊಂಡ ಗ್ಯಾಂಬ್ಲರ್. ಅವರು ಕಳೆದ ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ʻಹಣ ಹೂಡಿಕೆʼ ಮಾಡುತ್ತಿದ್ದಾರಂತೆ. ಒಬ್ಬ ಸಾಮಾನ್ಯ ಉಪ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಒಂದು ಕೋಟಿ ರೂ. ಹೂಡಿಕೆ ಮಾಡಲು ಹೇಗೆ ಸಾಧ್ಯವಾಯಿತು ಅಂತ ಆಶ್ಚರ್ಯ ಆಗ್ತಾ ಇದೆಯಾ? ಮುಂದೆ ಇದೆ ಕುತೂಹಲಕಾರಿ ಕಥೆ.
ಪೋಸ್ಟ್ ಮಾಸ್ಟರ್ ಅರೆಸ್ಟ್!
ಇತ್ತೀಚೆಗೆ ಬಿನಾದ ರೈಲ್ವೆ ಪೊಲೀಸರು ವಿಶಾಲ್ ಅಹಿರ್ವಾರ್ ಅವರನ್ನು ಬಂಧಿಸಿದ್ದರು. ಅಂಚೆ ಕಚೇರಿಯಲ್ಲಿ ಏನೋ ಅಪರಾ ತಪರಾ ಆಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಆಗ ಹೊರಗೆ ಬಂದಿದ್ದೇ ಕೋಟಿ ಬೆಟ್ಟಿಂಗ್ (IPL Betting) ಕಥೆ.
ಇದನ್ನೂ ಓದಿ| IPL 2022 | ಕಿಲ್ಲರ್ ಮಿಲ್ಲರ್! ಫೈನಲ್ ತಲುಪಿದ ಗುಜರಾತ್
24 ಕುಟುಂಬಗಳಿಗೆ ದೋಖಾ!
ಈ ಪೋಸ್ಟ್ ಮಾಸ್ಟರ್ ಕಳೆದ ಎರಡು ವರ್ಷಗಳಿಂದ ಬೆಟ್ಟಿಂಗ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾನಂತೆ. ಅವನಿಗೆ ಅಷ್ಟೆಲ್ಲ ದುಡ್ಡು ಬಂದಿದ್ದು ಎಲ್ಲಿಂದ ಅಂದರೆ ಪೋಸ್ಟ್ ಆಫೀಸಿನಲ್ಲಿ ಸಾಮಾನ್ಯ ಜನರು ಮಾಡುವ ಭದ್ರತಾ ಠೇವಣಿಯಿಂದ! ಅಂಚೆ ಕಚೇರಿಗೆ ಭದ್ರತಾ ಠೇವಣಿ ಇಡಲು ಬಂದ ಸುಮಾರು 24 ಕುಟುಂಬಗಳ ಹಣವನ್ನು ಆತ ಬೆಟ್ಟಿಂಗ್‌ನಲ್ಲಿ ತೊಡಗಿಸಿದ್ದಂತೆ. ಹಾಗಂತ ಈ ಕುಟುಂಬಗಳಿಗೆ ಯಾವ ರೀತಿಯಲ್ಲೂ ಸಂಶಯ ಬರದಂತೆ ಆತ ಒಳ್ಳೆಯ ಪ್ಲ್ಯಾನ್ ಮಾಡಿದ್ದ!
ನಕಲಿ ಖಾತೆಗೆ ಅಸಲಿ ಪಾಸ್‌ಬುಕ್!
ಸುಮಾರು 24 ಕುಟುಂಬಗಳು ಕಟ್ಟಿದ ಹಣವನ್ನು ಅಂಚೆ ಇಲಾಖೆಗೆ ಪಾವತಿ ಮಾಡದೆ ಸ್ವಂತಕ್ಕೆ ಬಳಸಿದ್ದರೂ ಎರಡು ವರ್ಷಗಳಿಂದಲೂ ಸಂಶಯ ಬಾರದೆ ಇರುವುದಕ್ಕೆ ಕಾರಣ ಆತ ದಾಖಲೆಗಳನ್ನು ಚೆನ್ನಾಗಿ ಮೆಂಟೇನ್ ಮಾಡಿರುವುದು. ಆತ ಎಫ್‌ಡಿ ಖಾತೆಯನ್ನೇ ತೆರೆಯದೆ ಅಂಚೆ ಕಚೇರಿಯ ಅಸಲಿ ಪಾಸ್‌ಬುಕ್‌ನಲ್ಲೇ ಎಲ್ಲ ದಾಖಲೆಗಳನ್ನು ಬರೆದು ಖಾತೆದಾರರಿಗೆ ನೀಡುತ್ತಿದ್ದ. ಕಾಲಕಾಲಕ್ಕೆ ಬಡ್ಡಿ ಲೆಕ್ಕಾಚಾರವನ್ನೂ ಚೆನ್ನಾಗಿ ಮೆಂಟೇನ್ ಮಾಡಿದ್ದ.
ಇತ್ತೀಚೆಗೆ ಈತನ ಕೆಲವು ಚಲನವಲನಗಳನ್ನು ಗಮನಿಸಿದ ಸ್ಥಳೀಯರಿಗೆ ಆತನ ಮೇಲೆ ಸಂಶಯ ಬಂದಿತ್ತು. ಸೂಕ್ಷ್ಮವಾಗಿ ಪರಿಶೀಲಿಸಿ ಬಳಿಕ ಅಂಚೆ ಇಲಾಖೆಗೆ ದೂರು ನೀಡಿದರು. ಅಂಚೆ ಅಧಿಕಾರಿಗಳು ಬಂದು ತಪಾಸಣೆ ನಡೆಸಿದಾಗ ಎಲ್ಲ ಅವ್ಯವಹಾರಗಳು ಬೆಳಕಿಗೆ ಬಂದವು. ಇದೀಗ ಆತನ ಮೇಲೆ ವಂಚನೆ ಪ್ರಕರಣ (ಐಪಿಸಿ ಸೆಕ್ಷನ್ 420) ಮತ್ತು ವಿಶ್ವಾಸ ದ್ರೋಹ (ಐಪಿಸಿ ಸೆಕ್ಷನ್ 408) ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಬಿನಾ ಪೊಲೀಸ್ ಠಾಣೆಯ ಉಸ್ತುವಾರಿ ಅಜಯ್ ಧೂರ್ವೆ ತಿಳಿಸಿದ್ದಾರೆ.
ಈ ನಡುವೆ ಸಣ್ಣ ಊರಿನ ಅಂಚೆ ಕಚೇರಿಯಲ್ಲಿದ್ದುಕೊಂಡು ಗ್ರಾಮೀಣ ಜನರಿಗೆ ವಂಚನೆ ಮಾಡಿದ್ದರ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರೆ, ಕೆಲವರು ಆತನ ಚಾಣಾಕ್ಷತನವನ್ನೂ ಮೆಚ್ಚಿ ಭಲೇ ಖತರ್‌ನಾಕ್ ಖಿಲಾಡಿ ಎಂದಿದ್ದಾರೆ. ಇದನ್ನೂ ಓದಿ | ಬಿಸ್ಕೆಟ್ ಬಿಜಿನೆಸ್ ಮಾಡ್ತೇನೆ ಅಂತ ಅಕ್ಕಪಕ್ಕದವರಿಗೇ ಬಿಸ್ಕೆಟ್ ತಿನ್ನಿಸಿದ!