Site icon Vistara News

Jail Blast threat : ಹಿಂಡಲಗಾ ಜೈಲು, ಪರಪ್ಪನ ಅಗ್ರಹಾರ ಸ್ಫೋಟ ಬೆದರಿಕೆ

hindalaga jail in Belagavi

ಬೆಳಗಾವಿ: ಬೆಂಗಳೂರಿನ ಪರಪ್ಪನ ಅಗ್ರಹಾರ (Parappana Agrahara) ಮತ್ತು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹವನ್ನು (Hindalaga Jail) ಸ್ಫೋಟಿಸುವುದಾಗಿ (Jail Blast threat) ಬೆದರಿಕೆ ಕರೆ ಬಂದಿದೆ. ಸ್ವತಃ ಬಂದಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿ.ಪಿ ಶೇಷ ಅವರು ವಾಸಿಸುವ ಕ್ವಾರ್ಟರ್ಸ್‌ನ್ನು ಸುಟ್ಟು ಹಾಕುವುದಾಗಿ ಎಚ್ಚರಿಸಲಾಗಿದೆ.

ಸ್ವತಃ ಟಿ.ಪಿ. ಶೇಷ ಅವರಿಗೇ ಮೂರು ಫೋನ್‌ ನಂಬರ್‌ಗಳಿಂದ ಕರೆ ಬಂದಿದ್ದು, ಬೆಂಗಳೂರು ಮತ್ತು ಬೆಳಗಾವಿ ಜೈಲಿಗೆ ಬಾಂಬು ಹಾಕುವುದಾಗಿ ಬೆದರಿಕೆ ಹಾಕಲಾಗಿದೆ. ಶೇಷ ಅವರು ಸರ್ಕಾರಿ ವಸತಿಗೃಹದಲ್ಲಿ ವಾಸಿಸುತ್ತಿದ್ದು, ಅದನ್ನೂ ಸ್ಫೋಟಿಸುವ ಬೆದರಿಕೆ ಒಡ್ಡಲಾಗಿದೆ. ಇಷ್ಟೆ ಅಲ್ಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಗಲಭೆ ಸೃಷ್ಟಿಸುವುದಾಗಿಯೂ ಎಚ್ಚರಿಸಿದ್ದಾರೆ.

ಹಿಂಡಲಗಾ ಜೈಲಿನ ಸಿಬ್ಬಂದಿಯ ಪರಿಚಯಸ್ಥನೆಂದು ಹೇಳಿ ಅನಾಮಧೇಯ ವ್ಯಕ್ತಿ ಮೂರು ಪ್ರತ್ಯೇಕ ನಂಬರ್‌ಗಳಿಂದ ಕರೆ ಮಾಡಿದ್ದಾನೆ. ʻʻನಾನು ಹಿಂಡಲಗಾ ಜೈಲಿನ ಹೆಡ್ ವಾರ್ಡರ್‌ಗಳಾದ ಜಗದೀಶ್ ಗಸ್ತಿ, ಎಸ್.ಎಂ ಗೋಟೆಯ ಪರಿಚಯಸ್ಥ. ಹಿಂಡಲಗಾ ಜೈಲಿನಲ್ಲಿದ್ದಾಗ ಭೂಗತ ಪಾತಕಿ ಬನ್ನಂಜೆ ರಾಜಾನಿಗೆ ಸಹಾಯ ಮಾಡಿದ್ದೇನೆʼʼ ಎಂದು ಹೇಳಿದ್ದಾನೆ. ಅನಾಮಧೇಯ ವ್ಯಕ್ತಿಯಿಂದ ಕಾರಾಗೃಹ ಆಡಳಿತಕ್ಕೆ ಧಕ್ಕೆ ಅಗುವ, ಅಪಾಯ ಆಗುವ ಸಾಧ್ಯತೆ ಇದೆ. ಹೀಗಾಗಿ ಅನಾಮಧೇಯ ವ್ಯಕ್ತಿಯನ್ನು ಹುಡುಕಿ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಡಿಐಜಿಪಿ ಶೇಷ ಅವರು ದೂರು ನೀಡಿದ್ದಾರೆ.

parappana Agrahara Jail in Bangalore

ಫೋನ್‌ ಮಾಡಿದ್ದು ಬೆಂಗಳೂರಿನ ವ್ಯಕ್ತಿ

ರಾಜ್ಯದ ಎರಡು ಜೈಲುಗಳನ್ನು ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣವನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಫೋನ್‌ ಮಾಡಿ ಬೆದರಿಕೆ ಹಾಕಿದ ಅನಾಮಧೇಯ ವ್ಯಕ್ತಿ ಬೆಂಗಳೂರು ಮೂಲದವ ಎಂಬ ಮಾಹಿತಿ ಫೋನ್ ಕಾಲ್ ಟ್ರ್ಯಾಕ್ ವೇಳೆ ಗೊತ್ತಾಗಿದೆ. ಇದೀಗ ಆತನನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ.

ಈ ಜೈಲಿನಲ್ಲಿ ಕೈದಿಯಾಗಿದ್ದು, ಬಳಿಕ ಬಿಡುಗಡೆ ಹೊಂದಿದವನು ಇಲ್ಲವೇ ಸದ್ಯ ಜಾಮೀನಿನಲ್ಲಿರುವ ವ್ಯಕ್ತಿ ಈ ಬೆದರಿಕೆ ಕರೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಳಗಾವಿ ಜೈಲಿನಲ್ಲಿ ಸಾಕಷ್ಟು ಅವ್ಯವಸ್ಥೆ

ಬೆಳಗಾವಿ ಜೈಲನ್ನು ಸ್ಫೋಟಿಸುವ ಬೆದರಿಕೆ ಒಂದು ಕಡೆಯಾದರೆ ಬೆಳಗಾವಿ ಜೈಲಿನಲ್ಲಿ ಇದ್ದುಕೊಂಡೇ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಸೇರಿದಂತೆ ಹಲವರಿಗೆ ಜೀವ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ. ಇದು ಇಲ್ಲಿನ ಆಡಳಿತ ದೋಷವನ್ನು ಎತ್ತಿ ತೋರಿಸಿದೆ. ಈ ಹಿಂದೆ ನಿತಿನ್‌ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ರಾಜ್ಯ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ಅವರು ಕೂಡಾ ಬೆದರಿಕೆಗೆ ಗುರಿಯಾಗಿದ್ದರು.

ಇಲ್ಲಿ ಮೊಬೈಲ್‌ ಫೋನ್‌ಗಳ ಲಭ್ಯತೆ, ಹೊರಗಿನ ಸಂಪರ್ಕ, ಫೋನ್‌ ಬಳಕೆಗೆ ಇರುವ ಅವಕಾಶಗಳು ಅವರಿಗೆ ಇಂಥ ಅವಕಾಶಗಳನ್ನು ಒದಗಿಸಿದೆ. ಅದರೆ, ಇದು ಕೆಲವೇ ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಸಿಗುವ ಸವಲತ್ತುಗಳಾಗಿವೆ. ಹೀಗಾಗಿ ಇತರ ಕೆಲವು ಕೈದಿಗಳು ಇದರಿಂದ ಸಿಟ್ಟಿಗೇಳುತ್ತಾರೆ. ಅಂಥವರು ಯಾರೋ ಜೈಲನ್ನೇ ಸ್ಫೋಟಿಸುವ ಬೆದರಿಕೆ ಹಾಕಿರುವ ಸಾಧ್ಯತೆಯೂ ಇದೆ. ಒಟ್ಟಾರೆಯಾಗಿ ನಿಜವಾಗಿ ಸ್ಪೋಟ ಬೆದರಿಕೆ ಹಾಕಿದ್ಯಾರು ಎನ್ನುವುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.

Exit mobile version