Site icon Vistara News

Jayashree Gurannavar: ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ ಅನಾರೋಗ್ಯದಿಂದ ನಿಧನ

Jayashree Gurannavar

ಬೆಳಗಾವಿ: ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್(40) ಅವರು ಅನಾರೋಗ್ಯದಿಂದ ಬುಧವಾರ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಹೋರಾಟಗಾರ್ತಿ(Jayashree Gurannavar), ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಉತ್ತರ ಕರ್ನಾಟಕ ಭಾಗದಲ್ಲಿ ರೈತ ಪರ ಹೋರಾಟ ಮಾಡುತ್ತಾ ಗುರುತಿಸಿಕೊಂಡಿದ್ದ ಜಯಶ್ರೀ ಅವರು, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟದ ಮೂಲಕ ಗಮನ ಸೆಳೆದಿದ್ದರು. ಇವರಿಗೆ ಒಬ್ಬ ಮಗ ಇದ್ದಾನೆ.

ಇದನ್ನೂ ಓದಿ | Gas Leak deaths: ಮುಚ್ಚಿದ ಮನೆಯಲ್ಲಿ ಗ್ಯಾಸ್‌ ಸೋರಿಕೆ, ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ 4 ಮಂದಿ

ಕಬ್ಬಿನ ಬಾಕಿ ಬಿಲ್‌ಗಾಗಿ ಸುವರ್ಣ ಸೌಧಕ್ಕೆ ಕಬ್ಬು ತುಂಬಿದ ಲಾರಿ ತೆಗೆದುಕೊಂಡು ಹೋಗುವ ಮೂಲಕ ಸರ್ಕಾರದ ಗಮನ ಸೆಳೆಯಲು ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಈ ವೇಳೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಜಯಶ್ರೀ ಕುರಿತು ಹಗುರವಾಗಿ ಮಾತನಾಡಿ ಟೀಕೆಗೆ ಒಳಗಾಗಿದ್ದರು. ಬಳಿಕ ಜಯಶ್ರೀ ಅವರು ರಾಜ್ಯಾದ್ಯಂತ ಸಂಚಾರ ಮಾಡಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಯಲ್ಲಿ ರೈತ ಸಂಘಟನೆಯಲ್ಲಿ ಸೇರ್ಪಡೆ ಮಾಡಲು ಶ್ರಮಿಸಿದ್ದರು.

ಕಲಬುರಗಿ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಇನ್ನಿಲ್ಲ

ಕಲಬುರಗಿ: ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ (81) (EX MP Iqbal Ahmed Saradgi) ಮಂಗಳವಾರ ತಡರಾತ್ರಿ ನಿಧನ ಹೊಂದಿದ್ದಾರೆ. ಇವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಹಾಗೂ ಮಾಜಿ ಸಿಎಂ ದಿ. ಧರ್ಮ ಸಿಂಗ್ (Dharm Singh) ಪರಮಾಪ್ತರಲ್ಲಿ ಒಬ್ಬರಾಗಿದ್ದರು.

ಕಲಬುರಗಿ (kalaburagi) ನಗರದಲ್ಲಿ 1944 ಜೂನ್ 5ರಂದು ಜನಿಸಿದ ಸರಡಗಿ, ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿಎಎಲ್ಎಲ್‌ಬಿ ಪದವಿ ಪಡೆದು, ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ನಂತರ ಗುಲ್ಬರ್ಗ ಸಾಮಾನ್ಯ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಪಡೆದು ಸ್ಪರ್ಧಿಸಿ ಎರಡು ಬಾರಿ ಆಯ್ಕೆಯಾಗಿದ್ದರು. ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಕೇಂದ್ರ ಹಜ್‌ ಸಮಿತಿ, ವಕ್ಫ್‌ ಮಂಡಳಿಗಳ ಸದಸ್ಯರೂ ಆಗಿದ್ದರು, ಕಳೆದ ಎರಡು ವರ್ಷದಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು.

ಇದನ್ನೂ ಓದಿ | Murder Case: ಯುವತಿ ಪ್ರಬುದ್ಧ ಸಾವು ಆತ್ಮಹತ್ಯೆಯಲ್ಲ, ಕೊಲೆ: ತಾಯಿ ದೂರು

ಕಳೆದ ಹಲವು ತಿಂಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದಷ್ಟೆ ಕಲಬುರಗಿಗೆ ಮರಳಿ ತಂದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಪುತ್ರ ಇರ್ಫಾನ್ ಅಹ್ಮದ್ ಸರಡಗಿ, ಪುತ್ರಿ ಡಾ.ಜಹೇರಾ ಸರಡಗಿ ಅವರನ್ನು ಅಗಲಿದ್ದಾರೆ.

Exit mobile version