Site icon Vistara News

Great robbery: ಅಂಗಡಿಯ ಗೋಡೆಗೆ ರಂಧ್ರ ಕೊರೆದು 25 ಕೋಟಿ ರೂ. ಮೌಲ್ಯದ ಆಭರಣ ದೋಚಿದ ಖತರ್ನಾಕ್ ಕಳ್ಳರು!

Crime image

ನವ ದೆಹಲಿ: ಚಿನ್ನಾಭರಣಗಳಂತಹ ಬೆಲೆಬಾಳುವ ವಸ್ತುಗಳ ರಕ್ಷಣೆಗೆ ಆಧುನಿಕ ತಂತ್ರಜ್ಞಾನಗಳ ಮೊರೆ ಹೋದರೂ ಕಳ್ಳರು ಅದೆಲ್ಲವನ್ನೂ ಬೇಧಿಸಿ ಸೊತ್ತುಗಳನ್ನು ಕಳವು ಮಾಡೇ ಮಾಡುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಸಿಸಿ ಟಿವಿ ಕ್ಯಾಮರಾ(cc tv camera) ಅಳವಡಿಸಿದ ಜ್ಯುವೆಲ್ಲರಿ ಶಾಪ್‌ ಒಂದರಿಂದ ಕಳ್ಳರು ಬರೋಬ್ಬರಿ 25 ಕೋಟಿ ರೂ.(25 crore) ಮೌಲ್ಯದ ವಜ್ರ ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ.

ದಕ್ಷಿಣ ದೆಹಲಿಯ ಜುಂಗ್‌ಪುರದ ಭೋಗಲ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸೆಪ್ಟಂಬರ್‌ 25 ಮತ್ತು 26ರ ಮಧ್ಯೆ ಅಂಗಡಿಯ ಗೋಡೆಗೆ ಕನ್ನ ಕೊರೆದು ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ಅಂಗಡಿ ಮಾಲಕ ಬಾಗಿಲು ತೆರೆಯಲು ಬಂದಾಗ ಕಳವಿನ ವಿಚಾರ ಬೆಳಕಿಗೆ ಬಂದಿದೆ.

ಉಮ್ರಾವ್‌ ಸಿಂಗ್‌ ಜ್ಯುವೆಲ್ಲರಿಯಿಂದ ಈ ಕಳವು ನಡೆದಿದೆ. 1948ರಲ್ಲಿ ಆರಂಭವಾದ ಈ ಜ್ಯುವೆಲ್ಲರಿ ಈ ಪ್ರದೇಶದಲ್ಲಿ ಜನಪ್ರಿಯವಾಗಿದೆ. ಸೋಮವಾರ ಮಧ್ಯರಾತ್ರಿ ಈ ಕಳವು ನಡೆದಿರುವ ಶಂಕೆ ವ್ಯಕ್ತವಾಗಿದೆ. ಆಭರಣ ಅಂಗಡಿಯ ‌ಗೋಡೆಗೆ ರಂಧ್ರವನ್ನು ಕೊರೆದು ಕಳ್ಳರು ಲಾಕರ್ ಹೊಂದಿರುವ ಸ್ಟ್ರಾಂಗ್ ರೂಮ್ ಗೆ ತಲುಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶೇಷ ಎಂದರೆ ಬೆಳ್ಳಿಯ ಆಭರಣಗಳನ್ನು ಅಲ್ಲೇ ಬಿಟ್ಟಿರುವ ಖದೀಮರು ಚಿನ್ನ ಮತ್ತು ವಜ್ರದ ಆಭರಣಗಳನ್ನು ದೋಚಿದ್ದಾರೆ.

ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಪ್ರಯೋಜಕ್ಕೆ ಬರಲಿಲ್ಲ

ಈ ಜ್ಯುವೆಲ್ಲರಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದರೂ ಪ್ರಯೋಜನವಾಗಲಿಲ್ಲ. ಕಳ್ಳರು ಕ್ಯಾಮರಾದ ಸಂಪರ್ಕ ಕತ್ತರಿಸಿ ಕೃತ್ಯ ಎಸಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಬೆಳಿಗ್ಗೆ ಅಂಗಡಿಯ ನಾಮಫಲಕ ಮುರಿದಿರುವುದನ್ನು ನೋಡಿದ ಅಂಗಡಿ ಮಾಲಕರಿಗೆ ಅನುಮಾನ ಮೂಡಿತ್ತು. ಬಳಿಕ ಅವರು ಅಂಗಡಿಯ ಬಾಗಿಲು ತೆರೆದಾಗ ಎಲ್ಲಾ ವಜ್ರ ಮತ್ತು ಚಿನ್ನದ ಆಭರಣಗಳು ಕಾಣೆಯಾಗಿರುವುದು ಕಂಡುಬಂತು. ಅಲರಾಂ ಸಂಪರ್ಕವನ್ನೂ ಕಳ್ಳರು ಕಡಿತಗೊಳಿಸಿದ್ದರು.

ʼʼನಾಲ್ಕು ಮಹಡಿಯ ಕಟ್ಟಡದ ಟೆರೇಸ್‌ ಮೇಲಿನಿಂದ ಕೆಳ ಅಂತಸ್ತಿಗೆ ಬಂದ ಕಳ್ಳರು ಗೋಡೆಯನ್ನು ಡ್ರಿಲ್‌ನಿಂದ ಕೊರೆದು ಸ್ಟ್ರಾಂಗ್‌ ರೂಮ್‌ ಪ್ರವೇಶಿಸಿರುವ ಸಾಧ್ಯತೆ ಇದೆ. 10ರಿಂದ 15 ಲಕ್ಷ ರೂಪಾಯಿ ನಗದು ಕೂಡ ಕಳವಾಗಿದೆ. ಕಳ್ಳರ ಪೈಕಿ ಒಬ್ಬಾತ ಸ್ಟ್ರಾಂಗ್ ರೂಮ್ ಪ್ರವೇಶಿಸಿ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಚೀಲದಲ್ಲಿ ತುಂಬಿ ಹೊರಗಡೆ ಸಾಗಿಸಿರಬೇಕು” ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: NCP Crisis: ಪಕ್ಷದಲ್ಲಿ ಯಾವುದೇ ಒಡಕಿಲ್ಲ ಎಂದ ಎನ್‌ಸಿಪಿ ಎರಡೂ ಬಣ!

ಅಪರಾಧಿಗಳಿಗೆ ಅಂಗಡಿ ಮತ್ತು ಆಭರಣಗಳ ಬಗ್ಗೆ ಮೊದಲೇ ಮಾಹಿತಿ ಇತ್ತು ಮತ್ತು ಸ್ಟ್ರಾಂಗ್ ರೂಮ್ ಅನ್ನು ಹೇಗೆ ತಲುಪಬೇಕೆಂದು ಅವರಿಗೆ ತಿಳಿದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳ್ಳರಿಗೆ ಎಲೆಕ್ಟ್ರಾನಿಕ್ ಉಪಕರಣಗಳ ಬಗ್ಗೆಯೂ ತಿಳಿದಿರುವ ಸಾಧ್ಯತೆ ಇದೆ. ದರೋಡೆ ನಡೆದ ರೀತಿಯನ್ನು ನೋಡಿದರೆ, ಅಪರಾಧಿಗಳು ತಮ್ಮ ಕೃತ್ಯದ ಬಗ್ಗೆ ಯೋಜನೆ ರೂಪಿಸಲು ಮೊದಲೇ ಸ್ಥಳಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಇನ್ನಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Exit mobile version