ನವ ದೆಹಲಿ: ರಾಜಸ್ಥಾನದ ಉದಯಪುರದಲ್ಲಿ ಅಮಾಯಕ ದರ್ಜಿ ಕನ್ಹಯ್ಯ ಲಾಲ್ ಅವರನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ (Rajsthan murder) ರಾಕ್ಷಸರಾದ ಮೊಹಮ್ಮದ್ ರಿಯಾಜ್ ಅಖ್ತಾರಿ ಮತ್ತು ಘೋಷ್ ಮೊಹಮ್ಮದ್‌ಗೆ ಪಾಕಿಸ್ತಾನದ ಸಂಪರ್ಕ ಇರುವುದು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿದೆ. ಇವರಿಬ್ಬರೂ ಈ ಪೈಶಾಚಿಕ ಕೃತ್ಯ ನಡೆಸುವ ಎರಡು ಮೂರು ದಿನ ಮೊದಲು ʻಸದ್ಯವೇ ಒಂದು ವಿಶೇಷ ಕೃತ್ಯ ನಡೆಸಿ ವಿಡಿಯೊ ಕಳುಹಿಸುತ್ತೇವೆʼ ಎಂದು ಪಾಕಿಸ್ತಾನದಲ್ಲಿರುವ ಫ್ರೆಂಡ್ಸ್‌ಗೆ ಮೆಸೇಜ್ ಮಾಡಿದ್ದರು!
ಉದಯಪುರದ ಈ ಭಯಾನಕ ಕೃತ್ಯದ ಬಗ್ಗೆ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿದೆ. ಇದರ ನಡುವೆ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿದ್ದು, ಅವೆಲ್ಲವೂ ಬೆಚ್ಚಿಬೀಳಿಸುವಂತಿವೆ.
ದವಾತ್ ಇ ಇಸ್ಲಾಮಿ ಸದಸ್ಯರು
ಜೂನ್ ೨೮ರ ಸಂಜೆ ಕನ್ಹಯ್ಯ ಲಾಲ್ ಅವರನ್ನು ಕೊರಳನ್ನು ಸೀಳಿ ಕೊಲೆ ಮಾಡಿದ್ದ ಈ ಹಂತಕರು ಅಜ್ಮೀರ್ ದರ್ಗಾಕ್ಕೆ ಪ್ರಾರ್ಥನೆ ಸಲ್ಲಿಸಲೆಂದು ಬೈಕ್‌ನಲ್ಲಿ ಧಾವಿಸುತ್ತಿದ್ದ ವೇಳೆ ರಾಜಸಮಂದ್‌ನ ಭೀಮ್ ಎಂಬಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಇವರು ಬಹು ಹಿಂದಿನಿಂದಲೇ ಪಾಕಿಸ್ತಾನದ ಜತೆಗೆ ಸಂಪರ್ಕ ಹೊಂದಿದ್ದರು ಮಾತ್ರವಲ್ಲ, ಅಲ್ಲಿ ಉಗ್ರ ಧಾರ್ಮಿಕ ಸಂಘಟನೆ ದವಾತ್ ಇ ಇಸ್ಲಾಮಿ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನಕ್ಕೆ ಹೋಗಿದ್ದರು.
ಮೊಹಮ್ಮದ್ ರಿಯಾಜ್ ಅಖ್ತಾರಿಯನ್ನು ದವಾತ್ ಇ ಇಸ್ಲಾಮಿ ಸಂಘಟನೆಗೆ ಸೇರಿಸಿದ್ದು ಉದಯಪುರದ ರಿಯಾಸತ್ ಹುಸೇನ್ ಮತ್ತು ಅಬ್ದುಲ್ ರಜಾಕ್ ಎಂಬ ಇಬ್ಬರು ಸ್ನೇಹಿತರು. ೨೦೧೩ರ ಅಂತ್ಯದಲ್ಲಿ ಈ ಇಬ್ಬರು ಭಾರತದಿಂದ ಸುಮಾರು ೩೦ ಮಂದಿಯನ್ನು ಕರಾಚಿಗೆ ಕರೆದುಕೊಂಡು ಹೋಗಿದ್ದರು ಎಂದು ಮೂಲಗಳು ತಿಳಿಸಿವೆ. ಉದಯಪುರದ ವಾಸಿಮ್ ಅಖ್ತಾರಿ ಮತ್ತು ಅಖ್ತರ್ ರಾಜಾ ಎಂಬವರೂ ಜತೆಗಿದ್ದರು. ಆವತ್ತು ಅವರು ೪೫ ದಿನಗಳ ಕಾಲ ಅಲ್ಲಿ ಜಿಹಾದಿ ಟ್ರೇನಿಂಗ್ ಪಡೆದು ೨೦೧೪ರ ಫೆಬ್ರವರಿ ೧ರಂದು ಮರಳಿ ಬಂದಿದ್ದರು. ಮೊಹಮ್ಮದ್ ೨೦೧೩ ಮತ್ತು ೨೦೧೯ರಲ್ಲಿ ಸೌದಿ ಅರೇಬಿಯಾಕ್ಕೂ ಭೇಟಿ ನೀಡಿದ್ದ. ಜತೆಗೆ ೨೦೧೭-೧೮ರಲ್ಲಿ ನೇಪಾಳಕ್ಕೂ ಹೋಗಿಬಂದಿದ್ದ.
ದವಾತ್ ಇ ಇಸ್ಲಾಮಿ ಸಂಪರ್ಕ
ಈ ನಡುವೆ ಮೊಹಮ್ಮದ್‌ಗೆ ದವಾತ್ ಇ ಇಸ್ಲಾಮಿ ಎಂಬ ಪಾಕಿಸ್ತಾನದ ಧಾರ್ಮಿಕ ಉಗ್ರ ಸಂಘಟನೆಯ ಜತೆಗೆ ಸಂಪರ್ಕ ಬೆಳೆದಿತ್ತು. ದವಾತ್ ಇ ಇಸ್ಲಾಮಿ ಎನ್ನುವುದು ಪಾಕಿಸ್ತಾನದ ಉಗ್ರವಾದಿ ರಾಜಕೀಯ ಪಕ್ಷ ತೆಹ್ರಿಕ್ ಇ ಲಬ್ಬಾಯಿಕ್ ಜತೆ ಸಂಬಂಧ ಹೊಂದಿದೆ. ಮೊಹಮ್ಮದ್ ಈಗಲೂ ದವಾತ್ ಇ ಇಸ್ಲಾಮಿ ಸಂಘಟನೆಯ ಪ್ರಮುಖರಾದ ಸಲ್ಮಾನ್ ಭಾಯ್ ಮತ್ತು ಅಬ್ಬು ಇಬ್ರಾಹಿಂ ಜತೆ ನಿರಂತರ ಸಂಪರ್ಕದಲ್ಲಿದ್ದಾನೆ.
ಪಾಕಿಸ್ತಾನದಲ್ಲೂ ಪ್ರತಿಭಟಿಸಿದ್ದರು
ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದಾಗ ಪಾಕಿಸ್ತಾನದಲ್ಲಿ ಪ್ರತಿಭಟನೆಯ ಸಾರಥ್ಯ ವಹಿಸಿದವರು ಇದೇ ಸಲ್ಮಾನ್ ಭಾಯಿ ಮತ್ತು ಅಬ್ಬು ಇಬ್ರಾಹಿಂ. ಅವರು ಭಾರತದಲ್ಲೂ ದೊಡ್ಡ ಮಟ್ಟದ ಹೋರಾಟ ನಡೆಯಬೇಕು ಎಂದು ಮೊಹಮ್ಮದ್‌ಗೆ ಕರೆ ಮಾಡಿ ತಿಳಿಸಿದ್ದರು ಎನ್ನಲಾಗಿದೆ.
ಅಷ್ಟರ ನಡುವೆಯೇ ಕನ್ಹಯ್ಯ ಲಾಲ್ ನೂಪುರ್ ಶರ್ಮ ಪರವಾಗಿ ಒಂದು ಪೋಸ್ಟ್ ಹಾಕಿದ ವಿದ್ಯಮಾನ ನಡೆದಿತ್ತು. ಸ್ಥಳೀಯರು ಸೇರಿ ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರೂ ನೀಡಿದ್ದರು. ಕನ್ಹಯ್ಯ ಲಾಲ್ ವಿಚಾರಣೆ ಎದುರಿಸಿ, ಜೈಲು ಸೇರಿ ಐದು ದಿನಗಳ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.
ಆವತ್ತು ಜೂನ್ ೨೦. ಅಖ್ತಾರಿ ಮತ್ತು ಮೊಹಮ್ಮದ್ ಉದಯಪುರದ ಮುಖರ್ಜಿ ಚೌಕದಲ್ಲಿರುವ ಅಂಜುಮಾನ್‌ನಲ್ಲಿ ಒಂದು ಮೀಟಿಂಗ್ ಮಾಡಿದ್ದರು. ಅದರಲ್ಲಿ ಭಾಗವಹಿಸಿದವರು ಅಂಜುಮಾನ್‌ನ ಸಾದರ್ ಆಗಿರುವ ಮುಜೀಬ್ ಸಿದ್ದಿಕಿ, ಮೌಲಾನಾ ಆಗಿರುವ ಜುಲ್ಕಾನ್ ಸಾದರ್, ವಕೀಲರಾದ ಆಶ್ವಕ್ ಮತ್ತು ಮನೂದ್.
ಆವತ್ತು ಅಖ್ತಾರಿ ಮತ್ತು ಘೋಷ್ ಮೊಹಮ್ಮದ್ ತಾವು ಟೇಲರ್ ಕನ್ಹಯ್ಯ ಲಾಲ್‌ನನ್ನು ಕೊಲ್ಲುವುದಾಗಿ ಪ್ರತಿಜ್ಞೆ ಸ್ವೀಕರಿದ್ದರು. ಅದಾದ ಬಳಿಕ ನಾಲ್ಕೈದು ಬಾರಿ ಅಂಗಡಿಯ ಬಳಿ ಓಡಾಡಿ ಮಾಹಿತಿ ಸಂಗ್ರಹಿಸಿದ್ದರು. ಕೊಲ್ಲುವುದಕ್ಕೆ ಎಲ್ಲವೂ ಸೂಕ್ತವಾಗಿದೆ ಅನಿಸಿದಾಗ ಪಾಕಿಸ್ತಾನದಲ್ಲಿರುವ ಸಲ್ಮಾನ್ ಬಾಯಿ ಮತ್ತು ಅಬ್ಬು ಇಬ್ರಾಹಿಂಗೆ ಒಂದು ಮೆಸೇಜ್ ಕಳುಹಿಸಿದ್ದರು: ನಾವೇನೋ ವಿಶೇಷವಾದದ್ದನ್ನು ಮಾಡುತ್ತಿದ್ದೇವೆ. ಅದರ ವಿಡಿಯೋ ಕಳುಹಿಸುತ್ತೇವೆ.!
ಆ ದಿನ ಬಂದೇ ಬಿಟ್ಟಿತ್ತು. ಜೂನ್ ೨೮ರ ಸಂಜೆಯ ಹೊತ್ತು ಕನ್ಹಯ್ಯ ಲಾಲ್ ಅಂಗಡಿಯಲ್ಲಿ ಒಬ್ಬರೇ ಇದ್ದರು. ಆಗ ಒಳಪ್ರವೇಶಿಸಿದ ದುಷ್ಕರ್ಮಿ ಒಂದು ಜುಬ್ಬಾ ಹೊಲಿಸಬೇಕಿತ್ತು ಎಂದು ಹೇಳುತ್ತಾ ಅಂಗಡಿಗೆ ಕಾಲಿಟ್ಟಿದ್ದ. ಕನ್ಹಯ್ಯ ಲಾಲ್ ಜುಬ್ಬಾದ ಅಳತೆ ತೆಗೆಯಲೆಂದು ಬಾಗುತ್ತಿದ್ದಂತೆಯೇ ಹರಿತವಾದ ಆಯುಧದಿಂದ ಗೋಣನ್ನೇ ಕತ್ತರಿಸಿ ಬಿಟ್ಟಿದ್ದ ಮೊಹಮ್ಮದ್ ಅಖ್ತಾರಿ. ಮುಂದೆ ಬೆನ್ನು ಬೆನ್ನಿಗೇ ೨೬ ಬಾರಿ ಕತ್ತರಿಸುವ ಹೊತ್ತಿಗೆ ರುಂಡ ಮುಂಡ ಬೇರೆ ಬೇರೆಯಾಗಿತ್ತು. ಇದೆಲ್ಲವನ್ನೂ ವಿಡಿಯೊ ಮಾಡಿದ್ದವನು ಘೋಷ್ ಮೊಹಮ್ಮದ್.