ನವ ದೆಹಲಿ: ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್ ಎಂಬ ಹಿಂದೂ ಟೇಲರ್‌ನನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಹಂತಕರಾದ ಮೊಹಮ್ಮದ್ ರಿಯಾಜ್ ಅಟ್ಟಾರಿ ಮತ್ತು ಮಹಮ್ಮದ್ ಗೌಸ್ ಎಂಬ ಕಿರಾತಕರು ಈ ಹಿಂದೆ ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿದ್ದರು ಎಂಬ ಅಂಶ ಎನ್‌ಐಎ ತನಿಖೆ ವೇಳೆ ಬಯಲಾಗಿದೆ.
ನೂಪುರ್ ಶರ್ಮ ಅವರ ವಿವಾದಾತ್ಮಕ ಹೇಳಿಕೆಗೆ ಪೂರಕವಾಗಿ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆಂಬ ಕಾರಣಕ್ಕೆ ಕನ್ಹಯ್ಯ ಲಾಲ್ ಅವರನ್ನು ಕೊರಳು ಕತ್ತರಿಸಿ ಕೊಂದ ಈ ದುಷ್ಟರು ಸಾಮಾನ್ಯರಲ್ಲ. ಬಹು ವರ್ಷಗಳಿಂದಲೇ ಈ ಭಾಗದಲ್ಲಿ ಹಲವಾರು ದ್ವೇಷ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಪಾಕಿಸ್ತಾನದ ಧಾರ್ಮಿಕ ಮೂಲಭೂತವಾದಿ ಸಂಘಟನೆ ದಾವತ್ ಇ ಇಸ್ಲಾಮಿ ಎಂಬ ಸಂಘಟನೆಯ ಜತೆಗೆ ಸಂಬಂಧ ಹೊಂದಿರುವ ಈ ಇಬ್ಬರು ಕ್ರಿಮಿನಲ್‌ಗಳು ೨೦೧೩ರ ಅಂತ್ಯದಲ್ಲಿ ಪಾಕಿಸ್ತಾನಕ್ಕೆ ಹೋಗಿ ೪೫ ದಿನಗಳ ಕಾಲ ತರಬೇತಿ ಪಡೆದಿದ್ದರು. ಅವರು ಅಲ್ಲಿ ಜಗತ್ತಿನಲ್ಲಿ ಆತಂಕ ಸೃಷ್ಟಿಸುತ್ತಿರುವ ಕಿರಾತಕ ಪಡೆಯಾಗಿರುವ ಐಸಿಸ್‌ನಿಂದ ತರಬೇತಿಗೆ ಒಳಗಾಗಿದ್ದರು ಎನ್ನಲಾಗಿದೆ.
ಕನ್ಹಯ್ಯ ಲಾಲ್ ಹತ್ಯೆಯ ಮೂಲಕ ದೇಶ ಕಂಡು ಕೇಳರಿಯದ ಶಿರಚ್ಛೇದದ ಮೂಲಕ ಬೆಚ್ಚಿಬೀಳಿಸಿದ ಈ ಟೀಮ್ ಇಂಥ ಕೃತ್ಯಕ್ಕಾಗಿ ಐಸಿಸ್‌ನ ವಿಡಿಯೊಗಳನ್ನು ವೀಕ್ಷಿಸಿತ್ತು ಎಂದು ಹೇಳಲಾಗಿದೆ. ಐಸಿಸ್ ಜಗತ್ತಿನ ನಾನಾ ಭಾಗಗಳಲ್ಲಿ ಧಾರ್ಮಿಕ ವಿರೋಧಿಗಳನ್ನು ತಲೆ ಕಡಿಯುವ ಕ್ರೂರ ಶಿಕ್ಷೆಗೆ ಒಳಪಡಿಸುತ್ತಿದೆ ಮತ್ತು ಅದರ ವಿಡಿಯೊಗಳನ್ನು ಮಾಧ್ಯಮಗಳಲ್ಲಿ ಹರಿಬಿಡುತ್ತಿದೆ. ಕನ್ಹಯ್ಯ ಲಾಲ್ ಹಂತಕರು ಇವುಗಳನ್ನು ನೋಡಿಯೇ ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ.
ಅಲ್ ಸೂಫಾ ಸಂಸ್ಥೆಯಲ್ಲಿದ್ದ
ಮೊಹಮ್ಮದ್ ರಿಯಾಜ್ ಅಟ್ಟಾರಿ ಉದಯಪುರದಲ್ಲಿ ಅಲ್ ಸೂಫಾ ಎನ್ನುವ ಸಂಸ್ಥೆಯೊಂದನ್ನು ಸ್ಥಾಪಿಸಿದ್ದ. ಕಳೆದ ಐದು ವರ್ಷಗಳಿಂದ ಆತ ಇಲ್ಲಿ ಚಟುವಟಿಕೆಯಲ್ಲಿದ್ದಾನೆ. ತನ್ನದೇ ಆದ ಒಂದು ತಂಡವನ್ನು ಕಟ್ಟಿಕೊಂಡಿದ್ದಾನೆ. ಅದರಲ್ಲಿ ವಕೀಲರು, ಧರ್ಮಗುರುಗಳೂ ಇದ್ದಾರೆ. ಇನ್ನೊಬ್ಬ ಹಂತ ಮೊಹಮ್ಮದ್ ಗೌಸ್ ಜತೆ ಸೇರಿಕೊಂಡು ಆತ ಹಲವಾರು ದ್ವೇಷ ಚಟುವಟಿಕೆಗಳಲ್ಲಿ, ಹಿಂಸಾಕೃತ್ಯಗಳಲ್ಲಿ ಭಾಗವಹಿಸಿದ್ದ ಎಂದು ತಿಳಿದುಬಂದಿದೆ.
ಪಾಕಿಸ್ತಾನಿಯರ ಜತೆ ಸಂಪರ್ಕ
ರಿಯಾಜ್ ಪಟ್ಟಾರಿ ಈಗಲೂ ಪಾಕಿಸ್ತಾನ ಕೆಲವರ ಜತೆ ಸಂಪರ್ಕವಿದೆ. ಆತನ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಪಾಕಿಸ್ತಾನದ ಎಂಟು ನಂಬರ್‌ಗಳು ಪತ್ತೆಯಾಗಿವೆ. ಅದರಲ್ಲಿ ಪ್ರಮುಖವಾಗಿರುವುದು ದವಾತ್ – ಇ- ಇಸ್ಲಾಮಿ ಸಂಘಟನೆ ಸೇರಿದ ಸಲ್ಮಾನ್ ಮತ್ತು ಅಬ್ಬು ಜಾನ್ ಎಂಬವರು. ಕನ್ಹಯ್ಯ ಲಾಲ್ ಹತ್ಯೆಗೆ ಕೆಲವು ದಿನದ ಮೊದಲು ರಿಯಾಜ್ ಸಲ್ಮಾನ್ ಮತ್ತು ಅಬ್ಬು ಜಾನ್‌ಗೆ ಕರೆ ಮಾಡಿ ತಾನೊಂದು ದೊಡ್ಡ ಕೆಲಸ ಮಾಡಲಿದ್ದು, ಅದರ ವಿಡಿಯೊ ಕಳುಹಿಸುವುದಾಗಿ ಹೇಳಿದ್ದ ಎನ್ನಲಾಗಿದೆ.
ಬ್ಯುಸಿನೆಸ್ ಮ್ಯಾನ್ ಹತ್ಯೆಗೆ ಸಂಚು
ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡುವ ಸ್ಕೆಚ್‌ನ ಜತೆಗೆ ಉದಯಪುರದ ಇನ್ನೊಬ್ಬ ಉದ್ಯಮಿಯ ಮೇಲೂ ಈ ದುಷ್ಕರ್ಮಿಗಳು ಕಣ್ಣಿಟ್ಟಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಅವರು ಕೂಡಾ ಹಿಂದೂ ಭಾವನೆಗಳ ಪರವಾಗಿದ್ದಾರೆ ಎನ್ನುವುದಷ್ಟೇ ಅವರ ಆಕ್ಷೇಪವಾಗಿತ್ತು. ಆದರೆ, ಈ ದುಷ್ಟರ ಬಂಧನದಿಂದ ಅವರ ಅಪಾಯ ತಪ್ಪಿದೆ.
ಜೈಪುರದ ಸರಣಿ ಸ್ಪೋಟ ಸ್ಕೆಚ್‌ಗೆ ಲಿಂಕ್
೨೦೨೨ರ ಮಾರ್ಚ್ ೩೦ರಂದು ಜೈಪುರದಲ್ಲಿ ಒಂದು ದೊಡ್ಡ ಸರಣಿ ಸ್ಪೋಟ ಸಂಚನ್ನು ವಿಫಲಗೊಳಿಸಲಾಗಿತ್ತು. ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಮೂವರು ದುಷ್ಕರ್ಮಿಗಳನ್ನು ಬಂಧಿಸಿ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹೀಗೆ ಬಂಧಿತರಾದ ಮೂವರಿಗೂ ಮಹಮ್ಮದ್ ಅಟ್ಟಾರಿಗೂ ಸಂಬಂಧವಿದೆ ಎಂದು ಈಗ ತನಿಖೆ ವೇಳೆ ಬಯಲಾಗಿದೆ.
ಎನ್‌ಐಎ ಪೊಲೀಸರು ಈಗಷ್ಟೇ ತನಿಖೆ ಆರಂಭಿಸಿದ್ದು, ಹೆಚ್ಚಿನ ವಿಚಾರಣೆ ವೇಳೆ ಇನ್ನಷ್ಟು ಮಾಹಿತಿ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ| Rajsthan murder: ಕನ್ಹಯ್ಯ ಲಾಲ್ ಹಂತಕರಿಗೆ ಪಾಕಿಸ್ತಾನ ಲಿಂಕ್, 45 ದಿನ ಜಿಹಾದಿ ಟ್ರೇನಿಂಗ್!