Site icon Vistara News

ಕಾನ್ಪುರ ಗಲಭೆ: ಕಲ್ಲು ಎಸೆದವರಿಗೆ 500 ರೂ., ಪೆಟ್ರೋಲ್‌ ಬಾಂಬ್‌ ಎಸೆದರೆ 5000 ರೂ! ಎಸ್‌ಐಟಿ ವರದಿಯಲ್ಲಿ ಬಹಿರಂಗ

Kanpur stone pelting

ಕಾನ್ಪುರ: ಬಿಜೆಪಿ ವಕ್ತಾರೆ ನೂಪುರ್‌ ಶರ್ಮ ಅವರ ವಿವಾದಾತ್ಮಕ ಹೇಳಿಕೆ ಖಂಡಿಸಿ ಜೂನ್‌ ೩ರಂದು ಕಾನ್ಪುರದಲ್ಲಿ ಭಾರಿ ಗಲಭೆಯೇ ನಡೆದಿತ್ತು. ಬಂದ್‌ಗೆ ಕರೆ ನೀಡಿದ ಕೆಲವೇ ನಿಮಿಷಗಳಲ್ಲಿ ದೊಡ್ಡ ಗುಂಪು ದಾಂಧಲೆ ಎಬ್ಬಿಸಿತ್ತು. ಕಲ್ಲು ತೂರಾಟ ಶುರುವಾಗಿತ್ತು. ಇಷ್ಟು ಸಣ್ಣ ಮಧ್ಯಂತರದಲ್ಲಿ ಇಷ್ಟೊಂದು ಜನ ಹೇಗೆ ಕಲ್ಲು ತೂರಾಟಕ್ಕೆ ತಯಾರಾದರು, ಕಲ್ಲು ಎಲ್ಲಿಂದ ಬಂತು ಎನ್ನುವ ವಿಚಾರಗಳೆಲ್ಲ ಚರ್ಚೆಗೆ ಬಂದಿತ್ತು. ಈಗ ವಿಶೇಷ ತನಿಖಾ ತಂಡ ಸಲ್ಲಿಸಿದ ವರದಿ ಇವುಗಳಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದೆ. ಅಂದರೆ, ಇದೊಂದು ಅತ್ಯಂತ ವ್ಯವಸ್ಥಿತವಾದ ಗಲಭೆ, ಮೊದಲೇ ಎಲ್ಲವನ್ನೂ ಸಿದ್ಧಗೊಳಿಸಿ ಹಿಂಸೆಗೆ ಪ್ರಚೋದನೆ ನೀಡಲಾಗಿದೆ ಎಂದು ವರದಿ ಹೇಳಿದೆ.

ಎಸ್‌ಐಟಿ ತನಿಖಾ ವರದಿ ಪ್ರಕಾರ, ಕಾನ್ಪುರದಲ್ಲಿ ಕಲ್ಲು ತೂರಾಟ ನಡೆಸಲು ಮೊದಲೇ ತರಬೇತಿ ನೀಡಲಾಗಿತ್ತು ಮತ್ತು ಅವರಿಗೆ ಹಣವನ್ನೂ ನೀಡಲಾಗಿದೆ. ಅಂದರೆ ಹಿಂಸೆಯನ್ನು ಹಬ್ಬಿಸಲು ದೊಡ್ಡ ಮೊತ್ತವನ್ನು ಚೆಲ್ಲಲಾಗಿದೆ. ಜತೆಗೆ ಒಂದೊಮ್ಮೆ ಬಂಧನವಾದರೆ, ಪ್ರಕರಣ ದಾಖಲಾದರೆ ಕಾನೂನಿನ ನೆರವು ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಕಾನ್ಪುರ ಗಲಭೆಗೆ ಸಂಬಂಧಿಸಿ ಮಂಗಳವಾರ ಎಸ್‌ಐಟಿ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ದಿನೇಶ್‌ ಅಗರ್ವಾಲ್‌ ಅವರು ಇದನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.

ಯಾರಿಗೆ ಎಷ್ಟು ಹಣ?
ಕಲ್ಲು ತೂರಾಟ ಮಾಡಿದವರಿಗೆ ೫೦೦ರಿಂದ ೧೦೦೦ ರೂ. ನೀಡಿದ್ದರೆ, ಪೆಟ್ರೋಲ್‌ ಬಾಂಬ್‌ ಎಸೆದು ಹಿಂಸೆ ಹೆಚ್ಚಿಸಿದವರಿಗೆ ೫೦೦೦ ರೂ.ವರೆಗೆ ನೀಡಲಾಗಿದೆ. ವಾಹನಗಳಲ್ಲಿ ಕಲ್ಲು ತಂದು ಕೊಟ್ಟವರಿಗೆ ತಲಾ ೧೦೦೦ ರೂ. ನೀಡಲಾಗಿದೆ. ಈ ರೀತಿ ಕಲ್ಲು ತೂರಾಟ ಮಾಡಲು ಏಳರಿಂದ ಒಂಬತ್ತು ದಿನಗಳ ಕಾಲ ತರಬೇತಿ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಎಲ್ಲಿ ಮೊದಲ ಹಿಂಸಾಚಾರ?
ನೂಪುರ್‌ ಶರ್ಮ ಅವರ ಹೇಳಿಕೆಯನ್ನು ಖಂಡಿಸಿ ಜೂನ್‌ ೩ರಂದು ಕಾನ್ಪುರದ ಪರೇಡ್‌ ಮಾರ್ಕೆಟ್‌ನಲ್ಲಿ ಮೊದಲ ಬಾರಿಗೆ ಹಿಂಸಾಚಾರ ಭುಗಿಲೆದ್ದಿತ್ತು. ಸ್ಥಳೀಯ ಸಂಘಟನೆಯೊಂದು ಬಂದ್‌ಗೆ ಕರೆ ನೀಡಿತ್ತು. ಕೆಲವೇ ನಿಮಿಷಗಳಲ್ಲಿ ಹಿಂಸಾಚಾರ ಹರಡಿ ಅಲ್ಲೋಲಕಲ್ಲೋಲ ಉಂಟಾಗಿತ್ತು. ಪರೇಡ್‌ ಮಾರ್ಕೆಟ್‌ ಎನ್ನುವುದು ನಗರದ ಅತಿ ದೊಡ್ಡ ಹೋಲ್‌ಸೇಲ್‌ ಮಾರ್ಕೆಟ್‌.

ಹಯಾತ್‌ ಝಫರ್‌ ಹಶ್ಮಿಯೇ ಪ್ರಧಾನ ಸೂತ್ರಧಾರ
ಅಷ್ಟಕ್ಕೂ ಈ ಎಲ್ಲ ಹಿಂಸಾಚಾರದ ರೂವಾರಿ ಹಯಾತ್‌ ಝಪರ್‌ ಹಷ್ಮಿ ಎಂದು ಪೊಲೀಸರು ಗುರುತಿಸಿದ್ದರು. ಅವನ ಸಹಚರರು ಸೇರಿದಂತೆ ೪೦ ಮಂದಿ ದೊಂಬಿಕೋರರನ್ನು ಬಂಧಿಸಲಾಗಿದೆ. ಹಷ್ಮಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ.

ಹಷ್ಮಿಯ ಈ ದುಷ್ಕೃತ್ಯಕ್ಕೆ ಕೊಲ್ಲಿ ರಾಷ್ಟ್ರಗಳಿಂದಲೂ ಹಣ ಹೂಡಿಕೆ ಮಾಡಲಾಗಿತ್ತು ಎನ್ನಲಾಗಿದೆ. ಇದು ಆತನ ಬ್ಯಾಂಕ್‌ ಅಕೌಂಟ್‌ ಮತ್ತು ಫೋನ್‌ ಸಂಭಾಷಣೆ ಮೂಲಕ ಸ್ಪಷ್ಟವಾಗಿದೆ. ಬಾಬಾ ಬಿರಿಯಾನಿಯ ಮಾಲೀಕರ ಮುಕ್ತಾರ್‌ ಬಾಬಾ ಕಲ್ಲು ತೂರಾಟಕ್ಕೆ ಜನರನ್ನು ಗೊತ್ತು ಮಾಡಿದ್ದ. ಕಲ್ಲು ತೂರಾಟಕ್ಕೆ ನಿಯೋಜಿತರಾದವರಿಗೆ ೧೦ ಲಕ್ಷ ರೂ.ಯನ್ನು ಅಡ್ವಾನ್ಸ್‌ ಅಗಿ ಪಾವತಿ ಮಾಡಲಾಗಿತ್ತು ಎಂದು ವರದಿ ಹೇಳಿದೆ. ಹಾಜಿ ಕುಡ್ಡುಸ್‌ ಎಂಬಾತ ಗಲಭೆ ಸಂದರ್ಭದಲ್ಲಿ ಸ್ಥಳೀಯಾಡಳಿತದ ಬೆಂಬಲ ಪಡೆಯುವ ಕೆಲಸ ಮಾಡಿದ್ದ. ಆತನಿಗೆ ಒಂದು ಫ್ಲ್ಯಾಟನ್ನು ಉಚಿತವಾಗಿ ನೀಡಲಾಗಿದೆ.

ಇದನ್ನೂ ಓದಿ| ಪ್ರವಾದಿ ಅವಹೇಳನ ವಿವಾದ: ಪ್ರಯಾಗರಾಜ್‌ ಹಿಂಸಾಚಾರ ಆರೋಪಿ ಮನೆಗೆ ಬುಲ್ಡೋಜರ್‌!

Exit mobile version