ಮುಂಬಯಿ: ಖ್ಯಾತ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ದಂಪತಿಗೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕುತ್ತಿದ್ದವನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ಮದುವೆಯಾದ ಬಳಿಕ ಒಂದೇ ಸಮನೆ ಕಿರಿಕಿರಿ ಮಾಡುತ್ತಿದ್ದ ಈತನ ಹೆಸರು ಮನ್ವಿಂದರ್ ಸಿಂಗ್.
ಸೋಮವಾರ ಮುಂಜಾನೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ನೇರವಾಗಿ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಬಂದಿದ್ದರು. ಅಪರಿಚಿತ ವ್ಯಕ್ತಿಯೊಬ್ಬ ತಮಗೆ ಬೆದರಿಕೆ ಹಾಕುತ್ತಿದ್ದಾನೆ, ಮಾನಸಿಕ ನೆಮ್ಮದಿ ಕೆಡಿಸಲು ಯತ್ನಿಸುತ್ತಿದ್ದಾನೆ ಎಂದು ದೂರು ನೀಡಿದ್ವಿದರು. ಕೂಡಲೇ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆತನ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಿಂದ ಮಾಹಿತಿ ಪಡೆದು ಬಲೆ ಬೀಸಿದರು. ಕೆಲವೇ ಹೊತ್ತಿನಲ್ಲಿ ಆತನ ಬಂಧನವೂ ನಡೆದಿದೆ.
ಯಾರಿವನು ಮನ್ವಿಂದರ್, ಬೆದರಿಕೆ ಹಾಕಿದ್ದೇಕೆ?
ಮನ್ವಿಂದರ್ ಸಿಂಗ್ ಕೂಡಾ ಒಬ್ಬ ನಟನೇ ಎನ್ನುವುದು ತನಿಖೆ ವೇಳೆ ತಿಳಿದುಬಂದಿದೆ. ಯುವ ನಟನಾಗಿರುವ ಆತ ಅವಕಾಶಗಳಿಲ್ಲದೆ ಕಂಗಾಲಾಗಿದ್ದ. ಕತ್ರಿನಾ ಕೈಫ್ ಅವರ ದೊಡ್ಡ ಫ್ಯಾನ್ ಆಗಿರುವ ಆತ ಆಕೆಯನ್ನೇ ಮದುವೆಯಾಗಬೇಕು ಅಂತ ಆಸೆ ಹೊಂದಿದ್ದನಂತೆ. ಆದರೆ, ಯಾವಾಗ ಕತ್ರಿನಾ ಕೈಪ್ ಮತ್ತು ವಿಕ್ಕಿ ಕೌಶಲ್ ಮದುವೆ ನಡೆದೇ ಹೋಯಿತೋ ಆಗ ಅವನಿಗೆ ಹುಚ್ಚು ಹಿಡಿದಂತಾಗಿದೆ.
ಮದುವೆ ನಂತರ ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಕತ್ರಿನಾ ಬಗ್ಗೆ ಕೆಟ್ಟ ಪೋಸ್ಟ್‌ಗಳನ್ನು ಹಾಕುವುದು, ದಂಪತಿಗೆ ಜೀವ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದ. ಪ್ರಮುಖವಾಗಿ ಇನ್‌ಸ್ಟಾ ಗ್ರಾಂನಲ್ಲಿ ಬೆದರಿಕೆ ಮೆಸೇಜ್‌ಗಳನ್ನು ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ವ್ಯಕ್ತಿ ಬೆದರಿಕೆ ಹಾಕುವುದು ಮಾತ್ರವಲ್ಲ, ಕೆಲವೊಮ್ಮೆ ಕತ್ರಿನಾ ಕೈಫ್ ಅವರನ್ನು ಸ್ಟಾಕಿಂಗ್ ಕೂಡಾ ಮಾಡುತ್ತಿದ್ದನಂತೆ.
ಆರೋಪಿ ಮನ್ವಿಂದರ್ ಕೆಲವೊಂದು ವಿಡಿಯೊ ಮತ್ತು ಚಿತ್ರಗಳನ್ನು ಎಡಿಟ್ ಮಾಡಿ ತಾನು ಕತ್ರಿನಾ ಕೈಫ್ ಜತೆಗಿರುವಂತೆ ಪೋಸ್ ಕೊಟ್ಟಿದ್ದ. ಅವುಗಳನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡುತ್ತಿದ್ದ.
ಇದನ್ನೂ ಓದಿ| ಸಲ್ಮಾನ್ ಖಾನ್ ಬಳಿಕ ಈಗ ನಟಿ ಸ್ವರ ಭಾಸ್ಕರ್‌ಗೆ ಜೀವ ಬೆದರಿಕೆ, ಪೊಲೀಸರಿಂದ ಬಿಗಿ ಭದ್ರತೆ