Site icon Vistara News

ಮೊಬೈಲಲ್ಲೇ ಮುಳುಗಿರಬೇಡ ಮಗನೆ ಎಂದಿದ್ದಕ್ಕೆ ತಾಯಿಯನ್ನೇ ಕೊಂದ ನೀಚ ಮಗ!

Man Kills Mother In Kerala

Kerala Man Kills 63 Year Old Mother For Questioning His Mobile Addiction

ತಿರುವನಂತಪುರಂ: ಆಧುನಿಕ ಕಾಲದಲ್ಲಿ ಗಾಳಿ, ನೀರು, ಅನ್ನದಂತೆ ಮೊಬೈಲ್‌ ಕೂಡ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಬರೀ ಅವಶ್ಯಕತೆ ಅಲ್ಲ, ಮನುಷ್ಯನ ಅವಿಭಾಜ್ಯ ಅಂಗವೂ (Mobile Addiction) ಆಗಿದೆ. ಕುಂತರೂ, ನಿಂತರೂ, ನಡೆದುಕೊಂಡು ಹೋಗುವಾಗ, ಬಸ್, ಮೆಟ್ರೋದಲ್ಲಿ ಕುಳಿತಾಗ, ನಾಲ್ಕು ಜನರ ಸ್ನೇಹಿತರು ಬೇರೆತಾಗ ಸೇರಿ ಎಲ್ಲ ಮಲಗುವಾಗ ಬಿಟ್ಟು ಬಹುತೇಕ ಸಂದರ್ಭಗಳಲ್ಲಿ ಮೊಬೈಲ್‌ ಬಳಸುವವರಿದ್ದಾರೆ. ಹೀಗೆ, ಮೂರು ಹೊತ್ತೂ ಮೊಬೈಲ್‌ನಲ್ಲಿ ಇದ್ದ ಮಗನಿಗೆ ಬುದ್ಧಿ ಹೇಳಿದ್ದಕ್ಕಾಗಿ ಕುಪಿತಗೊಂಡ ಮಗ ತಾಯಿಯನ್ನೇ ಕೊಂದ ಘಟನೆ ಕೇರಳದಲ್ಲಿ (Kerala) ನಡೆದಿದೆ.

ಕೇರಳದ ಕಣ್ಣೂರಿನಲ್ಲಿ ಮಗನು 63 ವರ್ಷದ ರುಕ್ಮಿಣಿ ಎಂಬುವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ರುಕ್ಮಿಣಿ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಣಿಚಿರ ಗ್ರಾಮದಲ್ಲಿ ತಾಯಿ-ಮಗ ವಾಸಿಸುತ್ತಿದ್ದು, ಮೊಬೈಲ್‌ ಜಾಸ್ತಿ ಬಳಸಬೇಡ ಎಂದು ತಾಯಿ ಹೇಳಿದ್ದಕ್ಕೇ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ರುಕ್ಮಿಣಿ ಅವರು ಶನಿವಾರ (ಅಕ್ಟೋಬರ್‌ 14) ಮೃತಪಟ್ಟಿದ್ದಾರೆ.

People Holding Mobiles

ಸುಜಿತ್‌ ಎಂಬ ಯುವಕನು ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿರುವ ಸುಜಿತ್‌, ಯಾವಾಗಲೂ ಮೊಬೈಲ್‌ನಲ್ಲಿಯೇ ಮುಳುಗಿರುತ್ತಿದ್ದ. ಮೂರು ಹೊತ್ತೂ ಮೊಬೈಲ್‌ ಬಳಸುತ್ತಿದ್ದ. ಇದರಿಂದ ಗಾಬರಿಗೊಂಡ ರುಕ್ಮಿಣಿ ಅವರು ಮಗನಿಗೆ ಬುದ್ಧಿವಾದ ಹೇಳಿದ್ದರು. ಜಾಸ್ತಿ ಮೊಬೈಲ್‌ ಬಳಸುವುದು ಸರಿಯಲ್ಲ ಮಗನೆ ಎಂದಿದ್ದರು. ಯಾವಾಗ ಮೊಬೈಲ್‌ಅನ್ನು ಜಾಸ್ತಿ ಬಳಸಬಾರದು ಎಂದು ತಾಯಿ ಹೇಳಿದರೋ, ಆಗ ಸುಜಿತ್‌ ಕುದ್ದುಹೋಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Murder Case : ಕೊಡಲಿಯಿಂದ ಹೊಡೆದು ಪತ್ನಿಯನ್ನೇ ಕೊಂದ ಕುಡುಕ ಪತಿ!

ಮೊಬೈಲ್‌ ಬಳಸಬೇಡ ಎಂದು ಎರಡು ಮೂರು ಬಾರಿ ತಾಯಿ ಹೇಳಿದ್ದರಿಂದ ಕುಪಿತಗೊಂಡ ಸುಜಿತ್‌, ರುಕ್ಮಿಣಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅವರ ತಲೆಯನ್ನು ಬಲವಾಗಿ ಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ. ಇದರಿಂದಾಗಿ ರುಕ್ಮಿಣಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೊನೆಗೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅತಿಯಾಗಿ ಮೊಬೈಲ್‌ ಬಳಕೆ ಮಾಡುವುದು ಕೂಡ ಮಾನಸಿಕವಾಗಿ ಕುಗ್ಗಿಹೋಗಲು ಕಾರಣವಾಗುತ್ತದೆ ಎಂದು ಮಾನಸಿಕ ತಜ್ಞರು ಎಚ್ಚರಿಸಿದರೂ ಬಹುತೇಕ ಮಂದಿ ಯಾವಾಗಲೂ ಮೊಬೈಲ್‌ ಹಿಡಿದೇ ಕೂರುವ ದೃಶ್ಯಗಳು ಈಗ ಸಾಮಾನ್ಯವಾಗಿವೆ.

Exit mobile version