Site icon Vistara News

Chelavara Falls: ಚೇಲವಾರ ಫಾಲ್ಸ್‌ನಲ್ಲಿ ಮುಳುಗಿ ಕೇರಳ ಯುವಕ ಸಾವು

Chelavara Falls

ಕೊಡಗು: ಕೊಡಗು ಜಿಲ್ಲೆ ನಾಪೋಕ್ಲುವಿನ ಚೆಯ್ಯಂಡಾಣೆ ಸಮೀಪದ ಚೇಲವಾರ ಫಾಲ್ಸ್‌ನಲ್ಲಿ (Chelavara Falls) ಯುವಕನೊಬ್ಬ ನೀರುಪಾಲಾಗಿದ್ದಾನೆ. ಕೊಡಗಿಗೆ ಪ್ರವಾಸಕ್ಕೆಂದು ಕೇರಳದಿಂದ ಬಂದಿದ್ದ ಯುವಕ (Youth drowns in water) ಮೃತಪಟ್ಟಿದ್ದಾನೆ.

ಕೇರಳದ ಇರಿಟ್ಟಿಯ ರಾಶೀದ್ (25) ಮೃತ ಯುವಕ ಎಂದು ಗುರುತಿಸಲಾಗಿದೆ. ಚೆಯ್ಯಂಡಾಣೆ ಸಮೀಪದ ಚೇಲವಾರ ಫಾಲ್ಸ್‌ನಲ್ಲಿ ಈ ಘಟನೆ ನಡೆದಿದೆ. ಚೇಲಾವರ ಫಾಲ್ಸ್‌ಗೆ ಬಂದಿದ್ದ ರಾಶೀದ್ ಈಜಲು ನೀರಿಗೆ ಇಳಿದಿದ್ದ ಎಂದು ತಿಳಿದುಬಂದಿದೆ.

Kerala youth drowns in Chelavara falls

ಫಾಲ್ಸ್ ನೋಡಲು ಮೂವರು ಸ್ನೇಹಿತರೊಂದಿಗೆ ಬಂದಿದ್ದ ರಶೀದ್‌, ಆಳ ತಿಳಿಯದೇ ನೀರಿಗೆ ಇಳಿದಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಈಜುವಾಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾನೆ ಎಂದು ಗೊತ್ತಾಗಿದೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಶವವನ್ನು ಮೇಲಕ್ಕೆ ತೆಗೆದಿದ್ದಾರೆ. ಭದ್ರತೆ ಇಲ್ಲದೆ ಇರುವುದು ಇಂತಹ ಅವಘಡಗಳಿಗೆ ಕಾರಣವಾಗಿದೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಾಯ ಇದೆ ಎಂದು ಹೇಳುತ್ತಿದ್ದರೂ ಪ್ರವಾಸಿಗರು ನೀರಿಗೆ ಇಳಿಯುತ್ತಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ಸ್ಥಳೀಯರು ಹೇಳಿದ್ದಾರೆ.

Baby Theft : ಕಂಡವರ ಮಗು ಕದ್ದು ಭಿಕ್ಷಾಟನೆಗೆ ಬಳಸಿಕೊಂಡ ಮಹಿಳೆಗೆ 4 ವರ್ಷ ಜೈಲು ಶಿಕ್ಷೆ

ಮಂಗಳೂರು: ಬೇರೊಬ್ಬರ ಮಗುವನ್ನು ಕದ್ದು ಭಿಕ್ಷಾಟನೆಗೆ (Begging) ಬಳಸಿಕೊಂಡ ಮಹಿಳೆಗೆ ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ) ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡವನ್ನು ವಿಧಿಸಿದೆ. ರುಬಿಯಾ ಅಲಿಯಾಸ್ ಫಾತಿಮಾ (44) ಶಿಕ್ಷೆಗೊಳಗಾದವಳು.

ಏನಿದು ಪ್ರಕರಣ?

ಸಂಶಾದ್‌ ಎಂಬಾಕೆ ಭಿಕ್ಷಾಟನೆ ನಡೆಸಿ ಜೀವ ನಡೆಸುತ್ತಿದ್ದಳು. ಈಕೆಗೆ 7 ತಿಂಗಳ ಮಗುವು ಇತ್ತು. ಕಳೆದ 2016ರ ಡಿಸೆಂಬರ್‌ನಲ್ಲಿ ಅಳಪೆ ಗ್ರಾಮದ ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣ ಬಳಿ ಭಿಕ್ಷಾಟನೆ ನಡೆಸುತ್ತಿದ್ದ ಸಂಶಾದ್‌ಳನ್ನು ಈ ರುಬಿಯಾ ಪರಿಚಯ ಮಾಡಿಕೊಂಡು ನಂಬಿಕೆಯನ್ನು ಗಿಟ್ಟಿಸಿಕೊಂಡಿದ್ದಳು. ಹೀಗಿದ್ದಾಗ 2017ರ ಜ.12ರಂದು ಸಂಶಾದ್‌, ತನ್ನ 7 ತಿಂಗಳ ಮಗುವನ್ನು ಕಂಕನಾಡಿ ರೈಲ್ವೆ ಜಂಕ್ಷನ್ ಸಮೀಪದ ವಾಹನ ನಿಲುಗಡೆ ಸ್ಥಳದಲ್ಲಿ ಮಲಗಿಸಿ, ಭಿಕ್ಷಾಟನೆಗೆ ತೆರಳಿದ್ದಳು. ಭಿಕ್ಷಾಟನೆ ಮಾಡಿ ವಾಪಸ್‌ ಆಗಿದ್ದ ಸಂಶಾದ್‌ಗೆ ಅಘಾತವಾಗಿತ್ತು. ಯಾಕೆಂದರೆ ಮಲಗಿದ್ದ ಮಗುವು ಕಳವಾಗಿತ್ತು. ಇದರಿಂದ ಆತಂಕಕೊಂಡ ಸಂಶಾದ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಮಗು ಕದ್ದು ಪರಾರಿ ಆಗಿದ್ದ ರುಬೀಯಾ

ಸಂಶಾದ್‌ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದರು. ಆದರೆ ಮೂರು ವರ್ಷಗಳು ಕಳೆದರೂ ಸಂಶಾದ್‌ಳ ಮಗು ಮಾತ್ರ ಪತ್ತೆಯಾಗಿರಲಿಲ್ಲ. ಇತ್ತ ಮಗು ಸಿಗದೇ ಇದ್ದಾಗ ಕಣ್ಣೀರಲ್ಲಿ ಕೈತೊಳೆದಿದ್ದಳು. ಹೀಗಿದ್ದಾಗ 2020ರ ಜ.22ರಂದು ಮೈಸೂರಿನ ಮಂಡಿ ಮೊಹಲ್ಲಾದ ಮಸೀದಿಯೊಂದರ ಬಳಿ ರುಬೀಯಾ ಜತೆಗೆ ಮಗುವೊಂದನ್ನು ಕಂಡಿದ್ದಳು. ಹತ್ತಿರ ಹೋಗಿ ನೋಡಿದಾಗ ಆ ಮಗು ತನ್ನದೆಂದು ಗುರುತಿಸಿದ್ದ ಸಂಶಾದ್ ಪೊಲೀಸರ ಗಮನಕ್ಕೆ ತಂದಿದ್ದಳು.

ರುಬಿಯಾ ಅಲಿಯಾಸ್‌ ಫಾತಿಮಾ ಮಗುವನ್ನು ಕದ್ದು ಬೇರೆ ಸ್ಥಳದಲ್ಲಿ ಬಿಟ್ಟಿದ್ದಳು. ಅನುಮಾನಬಾರದಿರಲಿ ಎಂದು ತಾನು ಕೂಡಾ ಮಗುವನ್ನು ಹುಡುಕುವ ನಾಟಕವಾಡಿದ್ದಳು. ಆದರೆ ಮಸೀದಿಯೊಂದರ ಬಳಿ ಮಗುವನ್ನು ಕೂರಿಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದಳು. ಆ ಮಗು ತನ್ನದೆಂದು ಗುರುತಿಸಿದ್ದ ಸಂಶಾದ್ ಪೊಲೀಸರ ಗಮನಕ್ಕೆ ತಂದಿದ್ದಳು. ಕೂಡಲೇ ಮಗು ಹಾಗೂ ರುಬಿಯಾಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಮಗು ನಾಪತ್ತೆಯಾಗಿ ಸುಮಾರು ಮೂರು ವರ್ಷಗಳು ಆಗಿದ್ದರಿಂದ, ಈ ರುಬಿಯಾ ತನ್ನದೇ ಮಗುವೆಂದು ವಾದ ಮಾಡಿದ್ದಳು. ಹೀಗಾಗಿ ಪೊಲೀಸರು ಮಗು ಮತ್ತು ತಾಯಿಯ ವಂಶವಾಹಿ ಪರೀಕ್ಷೆ (DNA Test) ನಡೆಸಿದಾಗ ಸಂಶಾದ್ ಅವರೇ ಆ ಮಗುವಿನ ಹೆತ್ತ ತಾಯಿ ಎಂಬುದು ಖಚಿತವಾಗಿತ್ತು.

ಕಂಕನಾಡಿ ನಗರ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ರಾಮಕೃಷ್ಣ.ಕೆ.ಕೆ ಹಾಗೂ ಪಿಎಸ್‌ಐ ಪ್ರದೀಪ್.ಟಿ.ಆರ್ ಅವರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. 2021ರ ಅ.5ರಂದು ಪ್ರಕರಣದ ವಿಚಾರಣೆ ಆರಂಭವಾಗಿತ್ತು. ಒಟ್ಟು 12 ಮಂದಿಯ ಸಾಕ್ಷ್ಯವನ್ನು ಪರಿಗಣಿಸಲಾಗಿತ್ತು. ವಕೀಲರಾದ ಜ್ಯೋತಿ ಪ್ರಮೋದ ನಾಯಕ ಸರ್ಕಾರದ ಪರವಾಗಿ ವಾದಿಸಿದ್ದರು.

ಸದ್ಯ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅಪರಾಧಿ ರುಬಿಯಾಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. 10 ಸಾವಿರ ದಂಡ ಪಾವತಿಸಲು ವಿಫಲವಾದರೆ ಮತ್ತೆ 1 ತಿಂಗಳ ಸಾದಾ ಸಜೆ ಅನುಭವಿಸಬೇಕು ಎಂದು ಫೆ.1ರಂದು ಆದೇಶ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version