Site icon Vistara News

Khalistani Terrorist: ಖಲಿಸ್ತಾನಿ ಭಯೋತ್ಪಾದಕ ಲಾಂಡಾನ ಪ್ರಮುಖ ಸಹಾಯಕ ಬಲ್ಜೀತ್ ಸಿಂಗ್ ಬಂಧನ

Khalistani Terrorist

ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳಿಗೆ ಮಾರಾಕಾಸ್ತ್ರಗಳ ಪೂರೈಕೆಗೆ (supply of deadly weapons) ಸಂಬಂಧಿಸಿ ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾನ ಪ್ರಮುಖ ಸಹಾಯಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಶುಕ್ರವಾರ ಬಂಧಿಸಿದೆ.

ಮಾರಕಾಸ್ತ್ರಗಳ ಪೂರೈಕೆಗೆ ಸಂಬಂಧಿಸಿದ ಪ್ರಮುಖ ಭಯೋತ್ಪಾದನಾ ಜಾಲವನ್ನು ಭೇದಿಸಿದ ಎನ್‌ಐಎ, ಮಧ್ಯಪ್ರದೇಶದ ಬದ್ವಾನಿ ಜಿಲ್ಲೆಯ ಬಲ್ಜೀತ್ ಸಿಂಗ್ ಅಲಿಯಾಸ್ ರಾಣಾ ಭಾಯ್ ಅಲಿಯಾಸ್ ಬಲ್ಲಿ ಎಂಬಾತನನ್ನು ಗುರುವಾರ ಪಂಜಾಬ್‌ನಲ್ಲಿ ಬಂಧಿಸಿದೆ. ಬಲ್ಜೀತ್ ಸಿಂಗ್ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪಂಜಾಬ್‌ನಲ್ಲಿರುವ ಲಾಂಡಾನ ಏಜೆಂಟ್‌ಗಳಿಗೆ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ಎಂದು ತಿಳಿದು ಬಂದಿದೆ.


ಭಯೋತ್ಪಾದನಾ ವಿರೋಧಿ ಏಜೆನ್ಸಿ ಪ್ರಕಾರ, ಈ ಶಸ್ತ್ರಾಸ್ತ್ರಗಳನ್ನು ಉದ್ಯಮಿಗಳು ಮತ್ತು ಇತರರಿಂದ ಹಣ ಸುಲಿಗೆ ಸೇರಿದಂತೆ ದೊಡ್ಡ ಪ್ರಮಾಣದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಳಸಲಾಗುತ್ತಿತ್ತು. ಗುರುಪ್ರೀತ್ ಸಿಂಗ್ ಮತ್ತು ಸತ್ನಾಮ್ ಸಿಂಗ್ ಸತ್ತಾ ಎಂಬುವರನ್ನು ಈ ಹಿಂದೆ ಬಂಧಿಸಲಾಗಿತ್ತು. ಅವರು ನೀಡಿದ ಸುಳಿವು ಆಧರಿಸಿ ಎನ್‌ಐಎ ಈ ಬಂಧನ ನಡೆಸಿದೆ.

ಕಳೆದ ವರ್ಷ ಜುಲೈ 10ರಂದು ಎನ್‌ಐಎ ಸ್ವಯಂಪ್ರೇರಿತವಾಗಿ ದಾಖಲಿಸಿದ ಪ್ರಕರಣದ ತನಿಖೆ ವೇಳೆ ಪಂಜಾಬ್ ಮತ್ತು ಇತರ ಕೆಲವು ಸ್ಥಳಗಳಲ್ಲಿ ನಡೆದಿದ್ದ ಹಿಂಸಾತ್ಮಕ ಕೃತ್ಯಗಳಲ್ಲಿ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಸತ್ನಾಮ್ ಸಿಂಗ್ ಸತ್ತಾಗೆ ಬಲ್ಜೀತ್ ಸಿಂಗ್ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Khalistani Terrorists: ಬಿಜೆಪಿ ತೊರೆಯದಿದ್ದರೆ ಸಾಯಲು ಸಿದ್ಧರಾಗಿ; ಸಿಖ್‌ ನಾಯಕರಿಗೆ ಖಲಿಸ್ತಾನಿ ಉಗ್ರರಿಂದ ಜೀವ ಬೆದರಿಕೆ

ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ತನಿಖೆಯನ್ನು ಮುಂದುವರಿಸಿರುವ ಎನ್‌ಐಎ, ಭಾರತದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಲಾಂಡಾ ಮತ್ತು ಸತ್ತಾ ಇಬ್ಬರೂ ವಿದೇಶಗಳಿಂದ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಿದೆ.

Exit mobile version