ಬೆಂಗಳೂರು: ಅಕ್ಟೋಬರ್‌ನಲ್ಲಿ ವಿಶ್ವ ಕಪ್ (World cup Cricket) ನಡೆಯುವ ಬದಲು ವಿಶ್ವ ಭಯೋತ್ಪಾದಕ ಕಪ್ (World Terrorism cup) ನಡೆಯಲಿದೆ ಎಂದು ಖಲಿಸ್ತಾನಿ ಉಗ್ರರು (Khalistani Terrorists) ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯುವ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯ (ICC World cup 2023) ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳ ಮೇಲೆ (Bangalore Matches) ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ.
ವಿಶ್ವಕಪ್ ಕ್ರಿಕೆಟ್ 2023 ಪಂದ್ಯಾವಳಿ ಗುರುವಾರ ಆರಂಭವಾಗಿದ್ದು, ಮೊದಲ ಪಂದ್ಯ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಅಹಮದಾಬಾದ್‌ನಲ್ಲಿ ನಡೆಯುತ್ತಿದೆ. ಖಲಿಸ್ತಾನಿಗಳ ಬೆದರಿಕೆ ಅಹಮದಾಬಾದ್ ಮತ್ತು ಬೆಂಗಳೂರಿನ ಮೇಲೆ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಬೆಂಗಳೂರಿನ ಮೇಲೆ ಹೆಚ್ಚು ನಿಗಾ ಇಡಲಾಗಿದೆ.
ಖಲಿಸ್ತಾನಕ್ಕಾಗಿ ಹೋರಾಟ ನಡೆಸುತ್ತಿರುವ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್‌ಜೆ) ಸಂಘಟನೆಯ ಉಗ್ರರು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವೆಡೆ ಖಲಿಸ್ತಾನಿ ಪರ ಘೋಷಣೆ ಮೊಳಗಿಸಿದ್ದರು. ದೆಹಲಿಯ ಗೋಡೆಗಳ ಮೇಲೆ ಭಾರತ ವಿರೋಧಿ ಹೇಳಿಕೆ ಬರೆಯಲಾಗಿತ್ತು. ಇದರ ಜತೆಗೆ ಈ ಬಾರಿಯ ವಿಶ್ವ ಕಪ್ ವಿಶ್ವ ಭಯೋತ್ಪಾದಕರ ಕಪ್ ಆಗಲಿದೆ ಎಂದು ಬೆದರಿಕೆ ಹಾಕಿರುವುದನ್ನು ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದ್ದು ಪಂದ್ಯ ನಡೆಯುವ ರಾಜ್ಯಗಳ ಪೊಲೀಸರಿಗೆ ಹೈ ಆರ್ಲಟ್ ಆಗಿರುವಂತೆ ಸೂಚನೆ ನೀಡಿದೆ.
ಖಲಿಸ್ತಾನಿಗಳ ಬೆದರಿಕೆ ಬೆನ್ನಲ್ಲೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಯೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಗೆ ಸಿದ್ಧತೆ ನಡೆಸಲಾಗಿದೆ. ಅಕ್ಟೊಬರ್ 20ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಈ ಪಂದ್ಯ ನಡೆಯುತ್ತಿರುವುದರಿಂದ ಇನ್ನಷ್ಟು ಕಟ್ಟೆಚ್ಚರ ವಹಿಸಬೇಕಾಗಿದೆ.
ಬೆಂಗಳೂರಿನಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿವೆ.
ಅ.20: ಆಸ್ಟ್ರೇಲಿಯಾ-ಪಾಕಿಸ್ತಾನ
ಅ.26: ಇಂಗ್ಲೆಂಡ್- ಶ್ರೀಲಂಕಾ
ನ.4: ನ್ಯೂಜಿಲ್ಯಾಂಡ್- ಪಾಕಿಸ್ತಾನ
ನ.9: ನ್ಯೂಜಿಲ್ಯಾಂಡ್- ಶ್ರೀಲಂಕಾ
ನ.12: ಭಾರತ-ನೆದರ್ ಲ್ಯಾಂಡ್
13 ವರ್ಷದ ಹಿಂದೆ ನಡೆದಿತ್ತು ಬಾಂಬ್ ಸ್ಫೋಟ
ಈ ಹಿಂದೆ 2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್ ನಡೆಯುವಾಗ ಬಾಂಬ್ ಸ್ಫೋಟವಾಗಿತ್ತು. ಗೇಟ್ ನಂಬರ್ 11 ಹಾಗೂ 15ರಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರರು ಬಾಂಬ್ ಬ್ಲಾಸ್ಟ್ ಮಾಡಿದ್ದರು. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದರು.
ಇದೀಗ ಖಲಿಸ್ತಾನಿಗಳು ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ವಿಶ್ವ ಕಪ್ ಪಂದ್ಯಾವಳಿ ಮೇಲೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲು ಸಿದ್ಧತೆ ನಡೆಸಲಾಗಿದೆ. ನಗರ ಪೊಲೀಸರ ಭದ್ರತೆ ಜೊತೆಗೆ ಹೆಚ್ಚುವರಿ ಕೇಂದ್ರ ಪೊಲೀಸ್ ಮೀಸಲು ಪಡೆಯನ್ನು ಕರೆಯಿಸಿಕೊಳ್ಳಬೇಕೇ ಎಂಬುದರ ಪರಿಸ್ಥಿತಿ ಅವಲೋಕಿಸಿ ನಿಯೋಜಿಸಲು ಚಿಂತನೆ ನಡೆಸಲಾಗಿದೆ.