ಕೋಲಾರ: ಮನೆಗೆ ನುಗ್ಗಿ ಶಿಕ್ಷಕಿಯ ಕೊಲೆ (Teacher Murder Case) ಮಾಡಿದ ಪ್ರಕರಣದಲ್ಲಿ ತಿರುಪತಿಯಲ್ಲಿ ತಲೆ ಮರೆಸಿಕೊಂಡಿದ್ದ ಆರು ಮಂದಿಯನ್ನು ಕೋಲಾರ ಪೊಲೀಸರು (Kolar news) ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಸುಂಕ ಲೇಔಟ್ ಬಡಾವಣೆಯಲ್ಲಿ ಕೊಲೆ ಪ್ರಕರಣ ನಡೆದಿತ್ತು. ಆಗಸ್ಟ್ 14ರ ಸಂಜೆ ದಿವ್ಯಶ್ರೀ (43) ಎಂಬ ಶಿಕ್ಷಕಿಯನ್ನು ಕೊಲೆ ಮಾಡಲಾಗಿತ್ತು. ಕೊಲೆ ಮಾಡಿದ ಆರೋಪಿಗಳು ಆಂಧ್ರಪ್ರದೇಶದ ತಿರುಪತಿಯಲ್ಲಿ ತಲೆ ಮರೆಸಿಕೊಂಡಿದ್ದರು. ಆರೋಪಿಗಳನ್ನು ಭುವನ್ ಪತ್ರಹಳ್ಳಿ, ರಂಜಿತ್ ಮುಳಬಾಗಿಲು, ಶಹೀದ್ ನಂಗಲಿ, ರಾಹುಲ್ ಮಲ್ಲೇಕುಪ್ಪ, ಭರತ್ ಗುಮ್ಮಕಲ್, ಯಶ್ವಂತ್ ಮಲ್ಲೇಕುಪ್ಪ ಎಂದು ಗುರುತಿಸಲಾಗಿದೆ.
ದಿವ್ಯಶ್ರೀ ಅವರ ಗಂಡನ ಫೈನಾನ್ಸ್ ವ್ಯವಹಾರಕ್ಕೆ ಸಂಬಂಧಿಸಿ ಚಿಂತಾಮಣಿಯಲ್ಲಿರುವ ಜಮೀನಿನ ವ್ಯಾಜ್ಯದ ವಿಚಾರದಲ್ಲಿ ಕೊಲೆ ನಡೆದಿದೆ. ಕೊಲೆಗಾಗಿ ಸುಪಾರಿ ನೀಡಿದ ಆರೋಪಿಗಾಗಿ ಹುಡುಕಾಟ ನಡೆದಿದೆ. ಆರೋಪಿಗಳಲ್ಲಿ ಅಪ್ರಾಪ್ತ ವಯಸ್ಕರೂ ಇದ್ದು, ಮಾದಕ ದ್ರವ್ಯವ ವ್ಯಸನಿಗಳಾದ ಇವರು ಚಿಲ್ಲರೆ ಕಾಸಿಗಾಗಿ ಕೊಲೆ ಮಾಡಿರುವ ಸಾಧ್ಯತೆ ಇದೆ. ಮುಳಬಾಗಿಲು ಪೊಲೀಸರಿಂದ ವಿಚಾರಣೆ ಮುಂದುವರಿದಿದೆ.
ಪ್ರಕರಣದ ವಿವರ
ಮುಳಬಾಗಿಲು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ದಿವ್ಯಶ್ರೀ ಅವರು ಮಗಳೊಂದಿಗೆ ವಾಸವಾಗಿದ್ದು, ಇವರ ಪತಿ ಪದ್ಮನಾಭ ಶೆಟ್ಟಿ ಅಗರಬತ್ತಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದಾರೆ. ಇವರ ಮತ್ತೊಬ್ಬ ಮಗ ಪ್ರೇಮ್ ವಿದ್ಯಾಭ್ಯಾಸದ ನಿಮಿತ್ತ ಬೇರೆ ಊರಿನಲ್ಲಿ ನೆಲೆಸಿದ್ದಾರೆ. ಪತಿ ಹೊರಗೆ ಹೋಗಿದ್ದು, ಮನೆಯಲ್ಲಿ ದಿವ್ಯಶ್ರೀ ಹಾಗೂ ಪುತ್ರಿ ನಿಶಾ ಮಾತ್ರ ಇದ್ದಾಗ ಪಾತಕ ನಡೆದಿದೆ.
ನಿಶಾ ನಿನ್ನೆ ಸಂಜೆ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ಓದುತ್ತಿದ್ದಳು. ನೆಲ ಮಾಳಿಗೆಯಲ್ಲಿ ದಿವ್ಯಶ್ರೀ ಅವರು ರಾತ್ರಿ 7.30ರ ಸುಮಾರಿನಲ್ಲಿ ಟಿವಿ ವೀಕ್ಷಿಸುತ್ತ ಕುಳಿತಿದ್ದರು. ಆ ವೇಳೆ ಹಂತಕರು ಏಕಾಏಕಿ ಮನೆಯೊಳಗೆ ನುಗ್ಗಿ ಚಾಕುವಿನಿಂದ ದಿವ್ಯಶ್ರೀ ಅವರ ಕುತ್ತಿಗೆ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮನೆಯೊಳಗೆ ಏನೋ ಗಲಾಟೆಯಾಗುತ್ತಿದೆ ಎಂದು ನಿಶಾ ಕೆಳಗೆ ಇಳಿದು ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಇದ್ದದ್ದು ಕಂಡು ಚೀರಾಡಿದ್ದಾರೆ. ನೆರೆಹೊರೆಯವರು ಏನಾಯಿತೆಂದು ಇವರ ಮನೆಗೆ ಬಂದು ನೋಡಿ ತಕ್ಷಣ ರಕ್ತದ ಮಡುವಿನಲ್ಲಿ ಬಿದಿದ್ದ ದಿವ್ಯಶ್ರೀ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಜನಭರಿತ ಈ ಬಡಾವಣೆಯಲ್ಲಿ ಶಿಕ್ಷಕಿಯ ಕೊಲೆ ನಡೆದಿರುವುದು ಕಂಡು ಆತಂಕಗೊಂಡ ಸುತ್ತಮುತ್ತಲ ನಿವಾಸಿಗಳು ಭಯಭೀತರಾಗಿದ್ದಾರೆ.
ಊಟ ಮಾಡುವಾಗ ಇಲಿ ವಿಷ ಸಿಂಪಡಣೆ, ವಿದ್ಯಾರ್ಥಿಗಳು ಆಸ್ಪತ್ರೆಪಾಲು
ಬೆಂಗಳೂರು: ರಾಜಧಾನಿಯ ಪಿಜಿಯೊಂದರಲ್ಲಿ (PG) ಊಟ ಮಾಡುತ್ತಿರುವಾಗ ಇಲಿ ವಿಷ (Rat Poison spray) ಸ್ಪ್ರೇ ಮಾಡಿದ ಕಾರಣ ವಿದ್ಯಾರ್ಥಿಗಳು ಅಸ್ವಸ್ಥಗೊಂಡು (Food Poison) ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಜ್ಞಾನಭಾರತಿಯ ಅಮ್ಮ ಆಶ್ರಮದ ಮುಂಭಾಗದ ಪಿಜಿಯಲ್ಲಿ ಘಟನೆ ನಡೆದಿದೆ. ರಾತ್ರಿ 8 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದಾಗ ಊಟದ ಹಾಲ್‌ನಲ್ಲೇ ಇಲಿ ಪಾಯಿಸನ್ ಸ್ಪ್ರೇ ಮಾಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳಲ್ಲಿ ವಾಂತಿ ಕಾಣಿಸಿಕೊಂಡಿತ್ತು. ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಎಂಬಾತ ಸ್ಪ್ರೇ ಮಾಡಿದ್ದು, ಇದರಿಂದ ಫುಡ್ ಪಾಯಿಸನ್ ಆಗಿದೆ.
ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹತ್ತಿರದ ಅಭಯ ಆಸ್ಪತ್ರೆ, ಭಾನು ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜ್ಞಾನಭಾರತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾಸಗಿ ನರ್ಸಿಂಗ್ ಕಾಲೇಜಿನಿಂದ ಹಾಸ್ಟೆಲ್ ನಡೆಸಲಾಗುತ್ತಿದ್ದು, ಹಾಸ್ಟೆಲ್ ಬಿಲ್ಡಿಂಗ್‌ನ ನೆಲ ಮಹಡಿಯಲ್ಲಿ ಊಟದ ಹಾಲ್ ಇದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Kolkata Doctor Murder Case: ಟ್ರೈನಿ ವೈದ್ಯೆಯ ಹತ್ಯೆ-ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಭಾರೀ ಲಾಠಿಚಾರ್ಜ್