Site icon Vistara News

Lokayukta Raid : 14 ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾ ದಾಳಿ, 48 ಕಡೆ ಬೇಟೆಯಲ್ಲಿ ಸಿಕ್ಕಿದ್ದು ಕೋಟಿ ಕೋಟಿ ಅಕ್ರಮ ಆಸ್ತಿ

loka raig in state

ಬೆಂಗಳೂರು: ರಾಜ್ಯದಲ್ಲಿ ಗುರುವಾರ 14 ಭ್ರಷ್ಟ ಅಧಿಕಾರಿಗಳ (Corrupt officers) ಮೇಲೆ ಲೋಕಾಯುಕ್ತ ದಾಳಿ (Lokayukta Raid) ನಡೆದಿದೆ. ಅವರಿಗೆ ಸೇರಿದ ಒಟ್ಟು 48 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು (Lokayukta officers) ಹುಡುಕಾಟ ನಡೆಸಿದ್ದು, ಈ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಸರ್ಕಾರಿ ಉದ್ಯೋಗವನ್ನು ಲಂಚದ ಪಡೆಯಲು ಬಳಸಿಕೊಂಡು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಅಧಿಕಾರಿಗಳು ಹೇಗೆ ಐಷಾರಾಮಿ ಬದುಕು ಕಟ್ಟಿಕೊಂಡಿದ್ದರು ಎನ್ನುವುದು ಈ ದಾಳಿಯ ಮೂಲಕ ಬಯಲಾಗಿದೆ. ಇಲ್ಲಿ ಭ್ರಷ್ಟರ ಮನೆಯಲ್ಲಿ ಸಿಕ್ಕಿದ ಅಕ್ರಮ ಆಸ್ತಿಪಾಸ್ತಿಯ ವಿವರಗಳಿವೆ.

1.ಎಸ್.ನಟರಾಜ್, ಕಂದಾಯ ನಿರೀಕ್ಷಕರು ಬೆಂಗಳೂರು: 4.91 ಕೋಟಿ ರೂ. ಮೌಲ್ಯದ ಆಸ್ತಿ

ಬೆಂಗಳೂರಿನ ಬಿಬಿಎಂಪಿಯಲ್ಲಿ ಮಹದೇವಪುರ ವಲಯದಲ್ಲಿ ಕಂದಾಯ ನಿರೀಕ್ಷಕನಾಗಿರುವ ಕಂದಾಯ ನಿರೀಕ್ಷಕ ನಟರಾಜ್‌ಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಹುಡುಕಾಟ ನಡೆದಿದ್ದು, ಈ ವೇಳೆ ಒಟ್ಟು 3.91 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು 1 ಕೋಟಿ ರೂ. ಮೌಲ್ಯದ ಚರಾಸ್ತಿ, ಹೀಗೆ ಒಟ್ಟು 4.91 ಕೋಟಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಲಾಗಿದೆ.

ನಟರಾಜ್‌ ತಮ್ಮ ಗೊತ್ತಾದ ಆದಾಯ ಮೂಲಕ್ಕಿಂತ 391% ಹೆಚ್ಚು ಆಸ್ತಿ ಸಂಗ್ರಹ ಹೊಂದಿದ್ದಾರೆ

ಕಂದಾಯ ನಿರೀಕ್ಷಕ ನಟರಾಜ್‌

ನಟರಾಜ್‌ ಈ ಹಿಂದೆ ಆಗಸ್ಟ್‌ 4ರಂದು ಐದು ಲಕ್ಷ ರೂ. ಲಂಚ ಸ್ವೀಕರಿಸುವಾಗ ಟ್ರ್ಯಾಪ್‌ ಆಗಿದ್ದ. ಅದಕ್ಕಿಂತ ಮೊದಲು ಬೆಂಗಳೂರಿನ 45 ಕಂದಾಯ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದರೂ ಆರ್‌ಐ ನಟರಾಜ್‌ಗೆ ಮಾತ್ರ ಬುದ್ಧಿ ಬಂದಿರಲಿಲ್ಲ. ಆಗಲೇ ನಟರಾಜ್‌ ಮೇಲೆ ಕಣ್ಣು ಬಿದ್ದಿತ್ತು. ನಟರಾಜ್ ಆಸ್ತಿ ಪಾಸ್ತಿ ತನಿಖೆ ನಡೆಯುವಾಗ ಆದಾಯಕ್ಕೆ ಮೀರಿದ ಆಸ್ತಿಗಳಿಕೆ ಕಂಡು ಬಂದಿತ್ತು. ಹೀಗಾಗಿ ಈ ಬಾರಿ ನಟರಾಜ್ ಕನಕಪುರ ಮನೆ ಹಾಗೂ ಅವಲಹಳ್ಳಿ ಮನೆ ಮೇಲೆ ದಾಳಿ ಪರಿಶೀಲನೆ ನಡೆಸಲಾಗಿದೆ.

2. ಶಿವರಾಜು, ತಹಶೀಲ್ದಾರ್, ಗ್ರೇಡ್-2, ಕಂದಾಯ ಇಲಾಖೆ: 4.15 ಕೋಟಿ ರೂ. ಮೌಲ್ಯದ ಆಸ್ತಿ

ಬೆಂಗಳೂರಿನ ಎಂಎಸ್‌ ಬಿಲ್ಡಿಂಗ್‌ನಲ್ಲಿರುವ ಕಂದಾಯ ಇಲಾಖೆ ಕಚೇರಿಯಲ್ಲಿ ಗ್ರೇಡ್‌ 2 ತಹಸೀಲ್ದಾರ್‌ ಆಗಿ ಕೆಲಸ ಮಾಡುತ್ತಿರುವ ಶಿವರಾಜು ಅವರಿಗೆ ಸೇರಿದ 12 ಸ್ಥಳಗಳಲ್ಲಿ ಹುಡುಕಾಟ ನಡೆದಿದೆ. ಈ ವೇಳೆ 3.5 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು 65 ಲಕ್ಷ ರೂ. ಮೌಲ್ಯದ ಚರಾಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಶಿವರಾಜು ತಮ್ಮ ಗೊತ್ತಾದ ಆದಾಯ ಮೂಲಕ್ಕಿಂತ 391% ಹೆಚ್ಚು ಆಸ್ತಿ ಸಂಗ್ರಹ ಹೊಂದಿದ್ದಾರೆ.

ತಹಸೀಲ್ದಾರ್‌ ಶಿವರಾಜ್‌ ಅವರ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮರಳುತ್ತಿರುವುದು.

3. ಭುವನಹಳ್ಳಿ ನಾಗರಾಜ್, ಕುಂದುಕೊರತೆ ನಿವಾರಣಾ ವೇದಿಕೆಯ ಮುಖ್ಯಸ್ಥರು, ಕುಂದುಕೊರತೆ ನಿವಾರಣಾ ವೇದಿಕೆಯ ಮುಖ್ಯಸ್ಥರು, ZP ಕಚೇರಿ, ತುಮಕೂರು. ಇವರ ಅಕ್ರಮ ಆಸ್ತಿ ವಿವರ ಲೆಕ್ಕ ಹಾಕಲಾಗುತ್ತಿದೆ.

4. ಲಕ್ಷ್ಮೀಪತಿ, ಚಿಕ್ಕಜಾಲ ಗ್ರಾಮ ಪಂಚಾಯಿತಿ ಸದಸ್ಯ: 3.95 ಕೋಟಿ ರೂ. ಅಕ್ರಮ ಆಸ್ತಿ

ಬೆಂಗಳೂರಿನ ಯಲಹಂಕ ಹೋಬಳಿಯ ಚಿಕ್ಕಜಾಲ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಪತಿ ಅವರಿಗೆ ಸೇರಿದ 6 ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗಿದೆ. ಇವರ ಬಳಿ 2.80 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ 1.15 ಕೋಟಿ ರೂ. ಮೌಲ್ಯದ ಚರಾಸ್ತಿ ಕಂಡುಬಂದಿದೆ. ಆಸ್ತಿಯ ಒಟ್ಟು ಮೌಲ್ಯ 3.95 ಕೋಟಿ ರೂ.ಗಳು.

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಷ್ಮೀಪತಿ ಮನೆ ಮೇಲೆ ಬೆಳಗ್ಗೆಯಿಂದಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿಕ್ಕಜಾಲ ಸಮೀಪದ ಬೃಂದಾವನ ಬಡಾವಣೆಯಲ್ಲಿ ಲಕ್ಷ್ಮೀಪತಿ ನಾಲ್ಕು ಅಂತಸ್ತಿನ ಮನೆಯಿದೆ.

ಲಕ್ಷ್ಮೀಪತಿ ಅವರ ಆಸ್ತಿ ಗೊತ್ತಾದ ಆದಾಯ ಮೂಲಕ್ಕಿಂತ 270% ಹೆಚ್ಚಾಗಿದೆ

5. ಎಸ್.ಭಾರತಿ, ಇಇ, ವಿಭಾಗ, ಬಿಬಿಎಂಪಿ ಮತ್ತು 6. ಕೆ.ಮಹೇಶ್, ಎಇ, ಸಣ್ಣ ನೀರಾವರಿ ಇಲಾಖೆ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ.

ಎಸ್‌ ಭಾರತಿ ಮತ್ತು ಕೆ. ಮಹೇಶ್‌ ಇಬ್ಬರೂ ಪತಿ-ಪತ್ನಿಯರಾಗಿದ್ದು, ಇವರಿಗೆ ಸೇರಿದ ದಾವಣಗೆರೆ, ಹೊಳಲ್ಕೆರೆ ಮತ್ತು ಬೆಂಗಳೂರಿನ ಮನೆ, ಕಚೇರಿಗಳಲ್ಲಿ ಹುಡುಕಾಟ ನಡೆಸಲಾಗಿದೆ.

ಲೋಕಾ ದಾಳಿಗೆ ಒಳಗಾದ ದಂಪತಿ ಭಾರತಿ ಮತ್ತು ಮಹೇಶ್‌

88 ಲಕ್ಷ ರೂ. ಮೌಲ್ಯದ ಸ್ಥಿರ ಹಾಗೂ 20 ಲಕ್ಷ ರೂ. ಮೌಲ್ಯದ ಚರಾಸ್ತಿಗಳನ್ನು ಪತ್ತೆ ಹಚ್ಚಲಾಗಿದ್ದು. ಇದು ಅವರ ಆದಾಯ ಮೂಲಕ್ಕಿಂತ 211% ಹೆಚ್ಚಾಗಿದೆ.

ಇದನ್ನೂ ಓದಿ: Lokayukta raid : ಗಂಡ-ಹೆಂಡ್ತಿ ಇಬ್ಬರೂ ಎಂಜಿನಿಯರ್;‌ ಮನೆಯಲ್ಲಿ ಸಿಕ್ಕಿದ್ದು1 ಕೆಜಿ ಚಿನ್ನ, 15 ಲಕ್ಷ ರೂ. ನಗದು

7. ಕೆ.ಎನ್. ನಾಗರಾಜು, ಜಂಟಿ ನಿರ್ದೇಶಕರು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ

ನಾಗರಾಜು ಅವರಿಗೆ ಸೇರಿದ ಆರು ಕಡೆಗಳಲ್ಲಿ ಹುಡುಕಾಟ ನಡೆಸಲಾಗಿದ್ದು, 41 ಲಕ್ಷ ರೂ. ಮೌಲ್ಯದ ಚರಾಸ್ತಿ ಹಾಗೂ ಮೂರು ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಪತ್ತೆಯಾದ ಆಸ್ತಿಯ ಒಟ್ಟು ಮೌಲ್ಯ 3.41 ಕೋಟಿ ರೂ. ಆಗಿದ್ದು, ಇದು ಗೊತ್ತಾದ ಆದಾಯ ಮೂಲಕ್ಕಿಂತ 138.19% ಅಧಿಕವಿದೆ.

8. ಡಾ.ನಂಜುಂಡೇಗೌಡ, ಹೆಚ್ಚುವರಿ ಡಿಸಿ, ಕಂದಾಯ ಇಲಾಖೆ, ಡಿಸಿ ಕಚೇರಿ ಮಡಿಕೇರ

ಡಾ. ನಂಜುಂಡೇ ಗೌಡ ಮತ್ತು ಸಂಬಂಧಿಕರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗಿದೆ. ಇವರ ಬಳಿ ಪತ್ತೆಯಾಗಿರುವ ಚರಾಸ್ತಿಗಳ ಅಂದಾಜು ಮೌಲ್ಯ 98,43,518 ರೂ. ಸ್ಥಿರಾಸ್ತಿಗಳ ಮೌಲ್ಯ 2,55,00,000 ರೂ. ಒಟ್ಟು 3.53 ಕೋಟಿ ರೂ.ಗಳ ಆಸ್ತಿ ಪತ್ತೆಯಾಗಿದೆ. ಇದು ಗೊತ್ತಾದ ಆದಾಯ ಮೂಲಗಳಿಗಿಂತ 243% ಹೆಚ್ಚಾಗಿದೆ.

ಕೊಡಗು ಅಪರ ಜಿಲ್ಲಾಧಿಕಾರಿ ನಾಗರಾಜು ಅವರ ಮನೆ ಮೇಲೆ ಲೋಕಾಯುಕ್ತ ದಾಳಿ

ಇದನ್ನೂ ಓದಿ: Karnataka live news: ಕೊಡಗು ಎಡಿಸಿ ನಂಜುಂಡೇಗೌಡ ಕೈಲಿ 52 ಎಕರೆ ಬೇನಾಮಿ ಆಸ್ತಿ, ಸಿಕ್ಕಿದ ನಗದು ಎಷ್ಟು?

9. ಕೆ.ಕೆ. ರಘುಪತಿ, ಎಸ್ಇ, ಹಾರಂಗಿ ಯೋಜನೆ, ಕುಶಾಲನಗರ, ಕೊಡಗು

ನೀರಾವರಿ ನಿಗಮದಲ್ಲಿ ಕಾರ್ಯಕಾರಿ ಎಂಜಿನಿಯರ್‌ ಆಗಿರುವ ಕೆ.ಕೆ. ರಘುಪತಿ ಅವರಿಗೆ ಸೇರಿದ ಮೂರು ಸ್ಥಳಗಳಲ್ಲಿ ಹುಡುಕಾಟ ನಡೆದಿದೆ. ಇವರ ಚರಾಸ್ತಿಗಳ ಮೌಲ್ಯ 1.32 ಕೋಟಿ ಇದ್ದರೆ ಸ್ಥಿರಾಸ್ತಿಯಗಳ ಮೌಲ್ಯ 2.34 ಕೋಟಿ ರೂ., ಪತ್ತೆಯಾದ ಒಟ್ಟು ಆಸ್ತಿಯ ಮೌಲ್ಯ 3.66 ಕೋಟಿ ರೂ. ಇದು ಗೊತ್ತಾದ ಆದಾಯ ಮೂಲಕ್ಕಿಂತ 205% ಹೆಚ್ಚಾಗಿದೆ.

ಕೆ.ಕೆ. ರಘುಪತಿ ಮತ್ತು ಅವರ ಮನೆ

10. ಎಸ್.ಸತೀಶ್, ವಲಯ ಅರಣ್ಯಾಧಿಕಾರಿ, ಚೆನ್ನಗಿರಿ ವಲಯ, ಭದ್ರಾವತಿ ವಿಭಾಗ

ವಲಯ ಅರಣ್ಯಾಧಿಕಾರಿ ಎಸ್‌. ಸತೀಶ್‌ ಅವರಿಗೆ ಸೇರಿದ ಎರಡು ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದ್ದು, ಚರಾಸ್ತಿ 46 ಲಕ್ಷ ಮತ್ತು ಸ್ಥಿರಾಸ್ತಿ 1.16 ಕೋಟಿ ರೂ. ಹೀಗೆ ಒಟ್ಟು 1.62 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇದು ಗೊತ್ತಾದ ಆದಾಯ ಮೂಲಕ್ಕಿಂತ 146% ಹೆಚ್ಚಾಗಿದೆ.

11. ಮಂಜುನಾಥ, ವ್ಯವಸ್ಥಾಪಕರು, ನಿರ್ಮಿತಿ ಕೇಂದ್ರ, ಕೊಪ್ಪಳ

ನಿರ್ಮಿತಿ ಕೇಂದ್ರದ ಕಚೇರಿ ವ್ಯವಸ್ಥಾಪಕ‌ ಮಂಜುನಾಥ್ ಬನ್ನಿಕೊಪ್ಪ ಅವರಿಗೆ ಸೇರಿದ ಮೂರು ಸ್ಥಳಗಳಲ್ಲಿ ಹುಡುಕಾಟ ನಡೆದಿದೆ. ಶೋಧದ ವೇಳೆ ಸಿಕ್ಕಿದ ಚರಾಸ್ತಿಗಳ ಮೌಲ್ಯ 57 ಲಕ್ಷ ರೂ. ಮತ್ತು ಸ್ಥಿರಾಸ್ತಿ ಮೌಲ್ಯ 2.22 ಕೋಟಿ. ಒಟ್ಟು ಮೌಲ್ಯ 2.79 ಕೋಟಿ ರೂ.ಗಳು. ಇದು ಗೊತ್ತಾದ ಆದಾಯ ಮೂಲಕ್ಕಿಂತ 136% ಹೆಚ್ಚು.

12. ವಿಜಯ ಕುಮಾರ್‌, ಪೊಲೀಸ್‌ ಕಾನ್‌ಸ್ಟೇಬಲ್‌, ಚಿತ್ತಗುಪ್ಪಾ, ಬೀದರ್

‌ವಿಜಯ ಕುಮಾರ್‌ ಅವರಿಗೆ ಸೇರಿದ ಮೂರು ಕಡೆ ದಾಳಿ ನಡೆದಿದೆ. 54 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ, 1.26 ಕೋಟಿ ಮೌಲ್ಯದ ಸ್ಥಿರಾಸ್ತಿ ಹೀಗೆ 1.80 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಗೊತ್ತಾದ ಆದಾಯ ಮೂಲಕ್ಕಿಂ 136 ಕೋಟಿ ರೂ. ಹೆಚ್ಚು ಆಸ್ತಿ ದಾಖಲಾಗಿದೆ. ಹುಮ್ನಾಬಾದ ಪಟ್ಟಣದ ಟೀಚರ್ ಕಾಲೋನಿ. ಹಾಗೂ ಹುಚಕನಳ್ಳಿ ಗ್ರಾಮದ ಮನೆ ಮೇಲೆ ದಾಳಿ ನಡೆದಿದೆ.

ವಿಜಯ ಕುಮಾರ್‌ ಬೀದರ್‌

13. ಸಂತೋಷ ಶರಣಪ್ಪ ಆನಿಸೆಟ್ಟಿ, ಕಂದಾಯ ನಿರೀಕ್ಷಕರು, ಬೆಳಗಾವಿ, ಮಹಾನಗರ ಪಾಲಿಕೆ

ಸಂತೋಷ ಶರಣಪ್ಪ ಆನಿಸೆಟ್ಟಿ ಅವರಿಗೆ ಸೇರಿದ ಹಲವು ಮನೆ, ಕಚೇರಿಗಳಲ್ಲಿ ದಾಳಿ ಮುಂದುವರಿದಿದೆ. ಪತ್ತೆಯಾದ ಆಸ್ತಿ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

ಧಾರವಾಡದಲ್ಲಿರುವ ಸಂತೋಷ ಮನೆ ಸೇರಿದಂತೆ ಐದು ಕಡೆ ಲೋಕಾ ದಾಳಿ ನಡೆದಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಾಡಿರುವ ಸಂತೋಷ ಮನೆಯ ಇಂಟೀರಿಯರ್ ನೋಡಿಯೇ ಅಧಿಕಾರಿಗಳು ಶಾಕ್‌ ಆಗಿದ್ದಾರೆ. ಧಾರವಾಡ ಬಿಜಿಎಸ್ ಶಾಲೆ ಬಳಿ ಇರುವ ಸಂತೋಷ್ ಅನಿಶೆಟ್ಟರ ಸಹೋದರನ ಮನೆಯ ಮೇಲೂ ದಾಳಿ ನಡೆದಿದೆ. ವೆಂಕಟಾಪೂರ ಬಳಿ ಇರುವ ಬಂಗಲೆ, ಸೇರಿದಂತೆ ಐದು ಕಡೆ 15 ಅಧಿಕಾರಿಗಳಿಂದ ದಾಳಿಯಾಗಿದೆ. ಈ ಮೊದಲು ಹು-ಧಾ ಪಾಲಿಕೆಯಲ್ಲಿದ್ದ ಸಂತೋಷ ಕೆಲ ವರ್ಷಗಳ ಹಿಂದೆ ಬೆಳಗಾವಿಗೆ ವರ್ಗವಾಗಿದ್ದರು.

14. ಶಿವಾನಂದ ಮಾನಕರ, ಪೊಲೀಸ್ ಪೇದೆ, ಧಾರವಾಡ ಪಟ್ಟಣ ಪೊಲೀಸ್ ಠಾಣೆ

ಶಿವಾನಂದ ಮಾನಕರ ಅವರಿಗೆ ಸೇರಿದ ಆಸ್ತಿಯ ಪರಿಶೀಲನೆ ನಡೆಯುತ್ತಿದ್ದು, ಪೂರ್ತಿ ಮಾಹಿತಿ ಇನ್ನೂ ಲೆಕ್ಕಾಚಾರ ಮುಕ್ತಾಯಗೊಂಡಿಲ್ಲ.

Exit mobile version