ಬೆಂಗಳೂರು: ಹೆಸರಿಗೆ ಇವನು ಕೆಆರ್ ಪುರಂ ತಾಲೂಕು ಕಚೇರಿಯ ಸರ್ವೇ ಸೂಪರ್ ವೈಸರ್ (Survey Supervisor). ಆದರೆ, ಇವನು ಐದು ಬಾರ್‌ಗಳ ಓನರು! ಕೋಟಿ ಕೋಟಿ ಮೌಲ್ಯದ ಆಸ್ತಿಯ ಸಾಹುಕಾರ್! ಇದು ಮಂಗಳವಾರ ಲೋಕಾಯುಕ್ತ (Lokayukta Raid) ಬಲೆಗೆ ಬಿದ್ದ ಕೆ.ಟಿ ಶ್ರೀನಿವಾಸ್ (KT Shrinivas) ಎಂಬ ಕೋಟಿ ಕುಳದ ಸಣ್ಣ ಪರಿಚಯ. ಇವರನ್ನು ಕೆ.ಟಿ ಶ್ರೀನಿವಾಸ್ ಅನ್ನೋದಕ್ಕಿಂತಲೂ ಕೋಟಿ ಶ್ರೀನಿವಾಸ್ ಅಂತ ಧಾರಾಳವಾಗಿ ಹೇಳಬಹುದು.
ಮೊನ್ನೆ ಮೊನ್ನೆಯಷ್ಟೆ ಲೋಕಾಯುಕ್ತ ಪೊಲೀಸರು 14 ಅಧಿಕಾರಿಗಳಿಗೆ ಸೇರಿದ 48 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ಶ್ರೀನಿವಾಸ್‌ನ ಕೈಗಳು ಅದೆಷ್ಟು ಭ್ರಷ್ಟವಾಗಿವೆ ಎಂದರೆ ಪೊಲೀಸರು ಇವರ ಆಸ್ತಿಯನ್ನು ಪತ್ತೆ ಹಚ್ಚಲು 14 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಬೇಕಾಯಿತು. ಅಂತಿಮವಾಗಿ ಈತನಿಗೆ ಸೇರಿದ ಮೂರುವರೆ ಕೋಟಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ.
ಅದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಮಾಡುವ ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಳಿ ಮಾಡುವ ಭಾಗವಾಗಿ ಲೋಕಾಯುಕ್ತ ಪೊಲೀಸರು ಕೆಆರ್ ಪುರಂ ತಾಲೂಕು ಕಚೇರಿಯ ಸರ್ವೆ ಸೂಪರ್ ವೈಸರ್ ಕೆಟಿ ಶ್ರೀನಿವಾಸ್‌ಗೆ ಮುಹೂರ್ತ ಇಟ್ಟಿದ್ದರು. ಆತನಿಗೆ ಸೇರಿದ 14 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದರು.
ಬೆಂಗಳೂರಿನ ಹೆಣ್ಣೂರು, ಕೊತ್ತನೂರು, ಕೆ.ಆರ್. ಪುರಂ ಮತ್ತು ತುಮಕೂರು ಜಿಲ್ಲೆಯ 14 ಕಡೆ ಲೋಕಾ ದಾಳಿ ನಡೆದಿದ್ದು, ಸರ್ವೆ ಅಧಿಕಾರಿ ಹಾಗೂ ಅವ್ರ ಕುಟುಂಬಸ್ಥರ ಹೆಸರಿನಲ್ಲಿರುವ ಕೋಟಿ ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಲಾಗಿದೆ.
ಈ ಸೂಪರ್‌ವೈಸರ್ ತನ್ನ ಹೆಸರಲ್ಲಿ ಮಾತ್ರವಲ್ಲ, ಪತ್ನಿ, ಸಹೋದರಿ, ಸೋದರನ ಹೆಸರಲ್ಲೂ ಆಸ್ತಿ ಮಾಡಿದ್ದಾರೆ. ಇವರದೇ ಮುಂದಾಳುತ್ವದಲ್ಲಿ ಅವರ ಹೆಸರಲ್ಲಿ ಐದು ಲಿಕ್ಕರ್ ಶಾಪ್‌ಗಳನ್ನು ನಡೆಸುತ್ತಿರುವುದು ದಾಳಿಯ ವೇಳೆ ಬೆಳಕಿಗೆ ಬಂದಿದೆ.
ಸರ್ವೇ ಅಧಿಕಾರಿಯ ಆಸ್ತಿ ಸರ್ವೆಗೆ ಮೀರಿದ್ದು!
- ಬೆಂಗಳೂರು ಉತ್ತರ ತಾಲ್ಲೂಕು ಅಂದ್ರಳ್ಳಿಯಲ್ಲಿ 2.70 ಲಕ್ಷ ಮೌಲ್ಯದ ನಿವೇಶನ
- ಬೆಂಗಳೂರಿನ ಹೆಣ್ಣೂರು ಗ್ರಾಮದಲ್ಲಿ ಸಹೋದರಿ ಕೆಟಿ ಪುಷ್ಪಲತಾ ಹೆಸರಿನಲ್ಲಿ 83.45 ಲಕ್ಷದ ನಿವೇಶನ
- 60 ಲಕ್ಷ ಮೌಲ್ಯದಲ್ಲಿ ನಿರ್ಮಾಣ ಹಂತದಲ್ಲಿರೊ ಕಟ್ಟಡ
- ತುಮಕೂರಿನ ರಾಯಪುರ ಗ್ರಾಮದಲ್ಲಿ ಪತ್ನಿ ರಾಜೇಶ್ವರಿ ಹೆಸರಿನಲ್ಲಿ 5 ಲಕ್ಷ ಮೌಲ್ಯದ 5 ಗುಂಟೆ ಜಮೀನು
- ಪತ್ನಿ ಹಾಗು ಸಹೋದರಿಯ ಹೆಸರಲ್ಲಿ 50 ಲಕ್ಷ ಮೌಲ್ಯದ ಹೋಟೆಲ್ ಉದ್ಯಮ – ಸಿ ಎಲ್ 7
- ತುಮಕೂರಿನ ಬಾಣಾವರದಲ್ಲಿ 50 ಲಕ್ಷ ಮೌಲ್ಯದ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ – ಸಿ ಎಲ್ 7
- ಸಹೋದರಿ ಹೆಸರಿನಲ್ಲಿ ತುಮಕೂರಿನ ನಂಜೇಗೌಡನ ಪಾಳ್ಯದಲ್ಲಿ 20 ಲಕ್ಷ ಮೌಲ್ಯದ ಬಾರ್
- ಸಹೋದರ ಕೆ ಟಿ ವೆಂಕಟೇಗೌಡ ಹೆಸರಲ್ಲಿ ತುಮಕೂರಿನ ಭೈರಸಂದ್ರದಲ್ಲಿ 25 ಲಕ್ಷ ಮೌಲ್ಯದ ಬಾರ್ ಅಂಡ್ ರೆಸ್ಟೊರೆಂಟ್
- ಪತ್ನಿ ರಾಜೇಶ್ವರಿ ಹೆಸರಲ್ಲಿ ಮತ್ತೊಂದು 40 ಲಕ್ಷ ಮೌಲ್ಯದ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ – ಸಿಎಲ್ 7
- 10 ಲಕ್ಷ ಮೌಲ್ಯದ ಎಸ್ ಕ್ರಾಸ್ ಕಾರು
- ಬೆಂಗಳೂರಿನ ಕೊತ್ತನೂರಿನಲ್ಲಿ 10 ಲಕ್ಷ ಮೌಲ್ಯದ ನಿವೇಶನ
ಹೀಗೆ ಅಂದಾಜು 3.53 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿದೆ. ಆಸ್ತಿ ಪಾಸ್ತಿ ಪತ್ರಗಳನ್ನ ವಶಕ್ಕೆ ಪಡೆದಿರೊ ಲೋಕಾ ಪೊಲೀಸರು ತನಿಖೆ ಮುಂದುವರಿಸಿದ್ದು, ದಾಖಲೆಗಳ ಪರಿಶೀಲನೆ ಬಳಿಕ ಮತ್ತಷ್ಟು ಅಕ್ರಮ ಆಸ್ತಿ ಪತ್ತೆಯಾಗುವ ಸಾಧ್ಯತೆಯೂ ಇದೆ.