Site icon Vistara News

Tunisha Sharma Death | ನಟಿ ತುನಿಶಾ ಶರ್ಮಾ ಸಾವಿಗೆ ಲವ್‌ ಜಿಹಾದ್‌ ಕಾರಣ? ಪೊಲೀಸರು ಹೇಳುವುದೇನು?

Tunisha Sharma Death Case

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ಕಿರುತೆರೆ ನಟಿ ತುನಿಶಾ ಶರ್ಮಾ ಸಾವಿನ ಪ್ರಕರಣ (Tunisha Sharma Death) ಹಲವು ತಿರುವು ಪಡೆದುಕೊಳ್ಳುತ್ತಿದೆ. ಅದರಲ್ಲೂ, ನಟಿ ಆತ್ಮಹತ್ಯೆ ಮಾಡಿಕೊಳ್ಳಲು ಲವ್‌ ಜಿಹಾದ್‌ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ನಟಿಯ ಸಾವಿಗೆ ಆಕೆಯ ಸಹ ನಟ ಶಿಜಾನ್‌ ಮೊಹಮ್ಮದ್‌ ಖಾನ್‌ ಕಾರಣ. ಇದರ ಹಿಂದೆ ಲವ್‌ ಜಿಹಾದ್‌ ಎಂದು ಹೇಳಲಾಗುತ್ತಿದೆ. ಬಿಜೆಪಿ ಶಾಸಕ ರಾಮ್‌ ಕದಮ್‌ ಅವರು ಕೂಡ ‘ಲವ್‌ ಜಿಹಾದ್’‌ ಇದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳುವ ಮೂಲಕ ಲವ್‌ ಜಿಹಾದ್‌ ಆರೋಪಗಳಿಗೆ ಪುಷ್ಟಿ ನೀಡಿದ್ದಾರೆ.

ಲವ್‌ ಜಿಹಾದ್‌ ಇದ್ದರೆ ಕ್ರಮ ಎಂದ ಬಿಜೆಪಿ ಶಾಸಕ
ಬಿಜೆಪಿ ಶಾಸಕ ರಾಮ್‌ ಕದಮ್‌ ಅವರು ನಟಿಯ ಸಾವಿನ ಹಿಂದೆ ಲವ್‌ ಜಿಹಾದ್‌ ಇರುವ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. “ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು? ಹಾಗೊಂದು ವೇಳೆ ಪ್ರಕರಣದಲ್ಲಿ ಲವ್‌ ಜಿಹಾದ್‌ ಕುತಂತ್ರ ಇರುವುದು ತನಿಖೆಯಿಂದ ಸಾಬೀತಾದರೆ ಖಂಡಿತವಾಗಿಯೂ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ನಟಿಯ ಕುಟುಂಬಸ್ಥರಿಗೆ ನ್ಯಾಯ ಒದಗಿಸಲಾಗುತ್ತದೆ” ಎಂದು ತಿಳಿಸಿದರು.

ಪೊಲೀಸರು ನೀಡಿದ ಮಾಹಿತಿ ಏನು?
ಮುಂಬೈ ಎಸಿಪಿ ಚಂದ್ರಕಾಂತ್ ಜಾಧವ್‌ ಅವರು ಪ್ರಕರಣದಲ್ಲಿ ಲವ್‌ ಜಿಹಾದ್‌ ಇರುವುದನ್ನು ಅಲ್ಲಗಳೆದಿದ್ದಾರೆ. “ಇದುವರೆಗಿನ ತನಿಖೆ, ವಿಚಾರಣೆ ಪ್ರಕಾರ ಪ್ರಕರಣದಲ್ಲಿ ಲವ್‌ ಜಿಹಾದ್‌ ಅಥವಾ ಬೆದರಿಕೆ ಹಾಕುವ ಅಂಶಗಳು ಕಂಡುಬಂದಿಲ್ಲ. ಶಿಜಾನ್‌ ಮೊಹಮ್ಮದ್‌ ಖಾನ್‌ನ ಮೊಬೈಲ್‌ ಜಪ್ತಿ ಮಾಡಲಾಗಿದ್ದು, ಪರಿಶೀಲನೆ ನಡೆಸಲಾಗಿದೆ. ಆದರೆ, ಲವ್‌ ಜಿಹಾದ್‌ ಸೇರಿ ಯಾವುದೇ ಅಂಶಗಳು ಕಂಡುಬಂದಿಲ್ಲ” ಎಂದು ಮಾಹಿತಿ ನೀಡಿದರು.

20 ವರ್ಷದ ತುನಿಶಾ ಶರ್ಮಾ ಅವರು ‘ಅಲಿ ಬಾಬಾ: ದಾಸ್ತಾನ್‌ ಎ ಕಾಬೂಲ್’‌ (Ali Baba: Dastaan-E-Kabul) ಟಿವಿ ಸಿರೀಸ್‌ನ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಆದರೆ, ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆ ವಸಾಯಿ ಎಂಬಲ್ಲಿ ಶೂಟಿಂಗ್‌ ಮಾಡುವಾಗ ಸೆಟ್‌ನ ಕೋಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದರು. ಇದೇ ಟಿವಿ ಶೋ ಸಹ ನಟ ಶಿಜಾನ್‌ ಮೊಹಮ್ಮದ್‌ ಖಾನ್‌ ಅವರನ್ನು ತುನಿಶಾ ಶರ್ಮಾ ಪ್ರೀತಿಸುತ್ತಿದ್ದರು.

ಆದರೆ, 15 ದಿನದ ಹಿಂದೆಯೇ ಬ್ರೇಕಪ್‌ ಆಗಿತ್ತು. ಇದರಿಂದ ಮನನೊಂದು ತುನಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ತುನಿಶಾ ಗರ್ಭಿಣಿಯಾಗಿದ್ದರು ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಆದರೆ, ಮರಣೋತ್ತರ ವರದಿ ಪ್ರಕಾರ ಅವರು ಗರ್ಭಿಣಿಯಾಗಿರಲಿಲ್ಲ ಎಂಬುದು ದೃಢವಾಗಿದೆ. ಇನ್ನು ಶಿಜಾನ್‌ ಖಾನ್‌ರನ್ನು ಕೋರ್ಟ್‌ 4 ದಿನ ಪೊಲೀಸ್‌ ಕಸ್ಟಡಿಗೆ ವಹಿಸಿದೆ.

ಇದನ್ನೂ ಓದಿ | Tunisha Sharma | ನಟಿ ತುನಿಶಾ ಆತ್ಮಹತ್ಯೆಗೆ ಶಿಜಾನ್​ ಮೊಹಮ್ಮದ್​ ಖಾನ್​​ನೊಂದಿಗಿನ ಬ್ರೇಕಪ್​ ಕಾರಣ ಎಂದ ಪೊಲೀಸ್​​

Exit mobile version