ಗುಣಾ: ಅಕ್ರಮ ಬೇಟೆಗಾರರ ಗುಂಡಿಗೆ ಮೂವರು ಪೊಲೀಸರ ಪ್ರಾಣ ಬಲಿಯಾದ ಘಟನೆ ಮಧ್ಯಪ್ರದೇಶದ (Madhya Pradesh cops Killed) ಗುಣಾ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದಿದೆ. ಅಪರೂಪದ ಪ್ರಭೇದಕ್ಕೆ ಸೇರಿದ ನಾಲ್ಕು ಜಿಂಕೆಗಳನ್ನು ಕೊಲ್ಲಲಾಗಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಕಳ್ಳಬೇಟೆಗಾರರು ಪೊಲೀಸರ ಮೇಲೆಯೂ ಗುಂಡು ಹಾರಿಸಿದ್ದರಿಂದ ಪೊಲೀಸರು ಬಲಿ ಆಗಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ರಾಜ್‌ಕುಮಾರ್ ಜಾತವ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳಾದ ನೀಲೇಶ್ ಭಾರ್ಗವಾ ಮತ್ತು ಶಾಂತಾಂರಾಮ್ ಮೀನಾ ಮೃತರು ಎಂದು ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
ಟ್ವಿಟರ್ ಮೂಲಕ ವಿಡಿಯೋ ಹೇಳಿಕೆ ನೀಡಿದ ನರೋತ್ತಮ್ ಮಿಶ್ರಾ, ಇತ್ತೀಚೆಗೆ ಕಳ್ಳಬೇಟೆ ಹೆಚ್ಚಿತ್ತು. ಹಾಗೇ ಅಪರೂಪದ ತಳಿಯ ನಾಲ್ಕು ಜಿಂಕೆಗಳನ್ನು 7-8 ಜನ ದುಷ್ಕರ್ಮಿಗಳು ಸೇರಿ ಬೇಟೆಯಾಡಿದ್ದಾರೆ.
ಬೈಕ್‌ನಲ್ಲಿ ಹೋಗುತ್ತಿದ್ದಾರೆ ಎಂಬ ಮಾಹಿತಿಯನ್ನು ಪಡೆದ ಗುಣಾ ಜಿಲ್ಲೆಯ ಆರೋನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಬೇಟೆಗಾರರನ್ನು ಸುತ್ತುವರಿದಿದ್ದರು. ಪೊಲೀಸರನ್ನು ನೋಡಿದ್ದೇ, ಅವರು ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಮಧ್ಯಪ್ರದೇಶ ಸಚಿವರ ಮನೆಯಲ್ಲೆ ಸೊಸೆಯ ಶವ ಪತ್ತೆ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಪೊಲೀಸರ ಸಾವಿಗೆ ನ್ಯಾಯ ಒದಗಿಸುತ್ತೇವೆ. ಕ್ರಿಮಿನಲ್‌ಗಳನ್ನು ಸುಮ್ಮನೆ ಬಿಡುವುದಿಲ್ಲ. ಇತಿಹಾಸದಲ್ಲಿ ಒಂದು ಉದಾಹರಣೆಯಾಗುವಂಥ ಕಠಿಣ ಶಿಕ್ಷೆಯನ್ನು ಅವರಿಗೆ ನೀಡಲಾಗುವುದು. ನಾವು ಈಗಾಗಲೇ ಗ್ವಾಲಿಯರ್ ಐಜಿ (Inspector-general of police)ಯನ್ನು ಕೆಲಸದಿಂದ ತೆಗೆದುಹಾಕಿದ್ದೇವೆ. ಅವರು ಸ್ಥಳಕ್ಕೆ ಸರಿಯಾದ ಸಮಯದಲ್ಲಿ ತಲುಪಿದ್ದರೆ ಆ ದುಷ್ಕರ್ಮಿಗಳು ಪರಾರಿಯಾಗುತ್ತಿರಲಿಲ್ಲ. ಪೊಲೀಸ್ ಸಿಬ್ಬಂದಿಯ ಪ್ರಾಣವೂ ಹೋಗುತ್ತಿರಲಿಲ್ಲ. ಮೃತ ಕುಟುಂಬಗಳಿಗೆ ತಲಾ 1ಕೋಟಿ ರೂ.ಪರಿಹಾರ ನೀಡಲಾಗುವುದು ಮತ್ತು ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Wheat export ban: ಭಾರತದಿಂದ ಗೋಧಿ ರಫ್ತಿಗೆ ನಿಷೇಧ