ದಾಮೋಹ್: ಬೈಕ್ ಕೀ ಕೊಡಲಿಲ್ಲ ಎಂಬ ಕೋಪದಲ್ಲಿ ತಂದೆಯೊಬ್ಬ ತನ್ನ ಮಗಲ ಕೈಯನ್ನೇ ಕತ್ತರಿಸಿದ್ದಾನೆ. ಅವನ ಸಿಟ್ಟು ಎಷ್ಟಿತ್ತೆಂದರೆ ಕಡಿದ ಕೈ ಮತ್ತು ಕೊಡಲಿಯನ್ನು ಕೈಯಲ್ಲೇ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದೇನೆ. ಮಗನ ಕೈ ಕಡಿದು ಬಂದಿದ್ದೇನೆ. ಏನು ಬೇಕಾದರೂ ಮಾಡಿ ಎಂಬಂತೆ ಧಿಮಾಕು ತೋರಿಸಿದ್ದಾನೆ. ಆದರೆ, ಆ ಕಡೆ ಮನೆಯಲ್ಲಿ ಮಗ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಬೊಬೈನಲ್ಲಿ. ಮೋತಿ ಕಚ್ಚಿ ಎಂಬ ೫೨ ವರ್ಷದ ವ್ಯಕ್ತಿ 30 ವರ್ಷದ ಮಗನಾದ ಸಂತೋಷ್ ಜತೆಗೆ ಬೈಕ್ ವಿಚಾರದಲ್ಲಿ ತಗಾದೆ ತೆಗೆದಿದ್ದಾನೆ. ಆಗ ತಂದೆಯ ಬೆಂಬಲಕ್ಕೆ ಚಿಕ್ಕಪ್ಪ ಕೂಡಾ ಬಂದಿದ್ದಾರೆ. ಇಬ್ಬರೂ ಸೇರಿ ಯುವಕನನ್ನು ದಬಾಯಿಸಿದ್ದಾರೆ. ಆಗ ಜಗಳ ತಾರಕಕ್ಕೇರಿದೆ. ಈ ಹಂತದಲ್ಲಿ ಅಪ್ಪ ಮನೆಯೊಳಗೆ ಹೋಗಿ ಕೊಡಲಿ ಎತ್ತಿಕೊಂಡು ಬಂದಿದ್ದಾನೆ. ಸಿಟ್ಟಿನ ಭರದಲ್ಲಿ ಮಗನಿಗೆ ಕಡಿದೇ ಬಿಟ್ಟಿದ್ದಾನೆ. ಕೀಯನ್ನು ಹಿಡಿದುಕೊಂಡಿದ್ದ ಕೈಗೇ ಕೊಡಲಿಯಿಂದ ಕಡಿದಿದ್ದಾನೆ. ಆಗ ಕೈ ಕತ್ತರಿಸಲ್ಪಟ್ಟು ತುಂಬ ದೂರ ಹೋಗಿ ಬಿದ್ದಿದೆ. ಮಗನನ್ನು ಅಲ್ಲೇ ಬಿಟ್ಟ ತಂದೆ ಹಾಗೇ ಕೊಡಲಿಯನ್ನು ಹಿಡಿದುಕೊಂಡು ಠಾಣೆಗೆ ಹೋಗಿದ್ದಾರೆ.
ಈ ನಡುವೆ ಸಂತೋಷನ ಹೆಂಡತಿ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ಅಲ್ಲಿ ಚಿಕಿತ್ಸೆ ಕಷ್ಟ ಎಂದು ತಿಳಿದಾಗ ಜಬಲ್ಪುರದ ಆಸ್ಪತ್ರೆಗೆ ಒಯ್ಯಲಾಗಿದೆ. ಆದರೆ, ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಸಂತೋಷ್ ಮಾರ್ಗ ಮಧ್ಯವೇ ಪ್ರಾಣ ಕಳೆದುಕೊಂಡಿದ್ದಾನೆ.
. “ಮೋತಿ ಕಚ್ಚಿ ಕೊಲೆಯ ನಂತರ ತಾವೇ ಠಾಣೆಗೆ ಬಂದು ಶರಣಾಗಿದ್ದಾರೆ. ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಬಂಧಿಸಲಾಯಿತು” ಎಂದು ದಾಮೋಹ್ ಪೊಲೀಸ್ ಅಧೀಕ್ಷಕರಾದ ಡಿಆರ್ ಟೆನಿವರ್ ತಿಳಿಸಿದ್ದಾರೆ.
ಇದನ್ನೂ ಓದಿ: Love story | ಆಂಟಿ ಮೇಲೆ ಪ್ರೀತಿ ಹೆಚ್ಚಾಗಿ ಅಂಕಲ್ ಕೊಲೆಗೆ ಸುಪಾರಿ ಕೊಟ್ಟ; ಕೊನೆಗೆ ಅವನೇ ಜೀವ ಬಿಟ್ಟ!