ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ೧೧ ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ೫೫ ವರ್ಷದ ಮದರಸಾ ಶಿಕ್ಷಕ ನಿಗೆ ಇಲ್ಲಿನ ಪೋಕ್ಸೋ ಕೋರ್ಟ್ ಒಟ್ಟು ೬೭ ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ. ಇದರಲ್ಲಿ ಕೆಲವು ಶಿಕ್ಷೆಗಳನ್ನು ಜತೆ ಜತೆಯಾಗಿ ಅನುಭವಿಸಲು ಅವಕಾಶವಿರುವುದರಿಂದ ಒಟ್ಟಾರೆಯಾಗಿ ಆತ ೨೦ ವರ್ಷ ಜೈಲಿನಲ್ಲಿ ಕಳೆಯಬೇಕಾಗಿದೆ. ಜತೆಗೆ ೬೫,೦೦೦ ರೂ. ಪರಿಹಾರವನ್ನು ಪಾವತಿಸಬೇಕಾಗಿದೆ.
ಈ ಕಾಮುಕ ಶಿಕ್ಷಕ ವಿದ್ಯಾರ್ಥಿಯ ಮೇಲೆ ಶಿಕ್ಷಣ ಸಂಸ್ಥೆಯಲ್ಲೇ ದೌರ್ಜನ್ಯ ಎಸಗುತ್ತಿದ್ದ ಎಂದು ಆರೋಪಿಸಲಾಗಿದೆ. ೫೫ ವರ್ಷದ ಅಳಿಯಾರ್ ಎಂಬ ಹೆಸರಿನ ಶಿಕ್ಷಕನ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೋಕ್ಸೊ ಕೋರ್ಟ್ ನ್ಯಾಯಮೂರ್ತಿಗಳು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆದೇಶಿಸಿ, ೬೭ ವರ್ಷಗಳ ಜೈಲು ಶಿಕ್ಷೆಯನ್ನೇ ವಿಧಿಸಿದರು.
ಬಾಲಕ ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಮೊದಲು ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಬಳಿಕ ಅದು ಶಾಲಾ ಆಡಳಿತ ಮಂಡಳಿಗೆ ತಿಳಿಯಿತು. ಮುಂದೆ ಚೈಲ್ಡ್ ಲೈನ್ ಸಿಬ್ಬಂದಿ ಅರಿವಿಗೆ ಬಂದು ಪೊಲೀಸ್ ಠಾಣೆ ಮೂಲಕ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಜೂನ್ ೩೦ರಂದು ಫಾಸ್ಟ್ ಟ್ರ್ಯಾಕ್ ಕೋರ್ಟ್ ಈ ಕಠಿಣ ಶಿಕ್ಷೆಯ ತೀರ್ಪನ್ನು ನೀಡಿದೆ.
ಹೇಗೆ ನಡೆಯುತ್ತಿತ್ತು ದೌರ್ಜನ್ಯ?
ತಡಿಯಿಟ್ಟಪರಂಬು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೊ ಬರುವ ಮದರಸಾಕ್ಕೆ ಈ ೧೧ ವರ್ಷದ ವಿದ್ಯಾರ್ಥಿ ಹಾಜರಾಗುತ್ತಿದ್ದ. ಮುಂಜಾನೆ ಶಾಲೆ ಆರಂಭವಾಗುವುದಕ್ಕೆ ಮೊದಲು ಈ ತರಗತಿ ನಡೆಯುತ್ತಿತ್ತು. ಆದರೆ, ೨೦೧೯-೨೦ರ ಅವಧಿಯಲ್ಲಿ ಆರೋಪಿ ಶಿಕ್ಷಕ ಅಳಿಯಾರ್ ಹುಡುಗನನ್ನು ನಾನಾ ಕಾರಣ ನೀಡಿ ಸಂಜೆಯೂ ಬರುವಂತೆ ಒತ್ತಾಯಿಸುತ್ತಿದ್ದ. ಸಂಜೆ ಹೋದಾಗ ಲೈಂಗಿಕವಾಗಿ ಕಿರುಕುಳ ಕೊಡುತ್ತಿದ್ದ.
ಅದೊಂದು ಸಾರಿ ಈ ಶಿಕ್ಷಕ ಬಾಲಕನಿಗೆ ಅಶ್ಲೀಲ ವಿಡಿಯೊಗಳಿರುವ ಮೊಬೈಲನ್ನು ಕೊಟ್ಟಿದ್ದ. ಅದನ್ನು ನೋಡಿಕೊಂಡಿರುವಂತೆ ತಿಳಿಸಿದ್ದ. ಬಾಲಕ ಮನೆಗೆ ಬಂದು ಇದನ್ನು ಕದ್ದುಮುಚ್ಚಿ ನೋಡುತ್ತಿದ್ದಾಗ ಹೆತ್ತವರ ಕೈಗೆ ಸಿಕ್ಕಿಬಿದ್ದಿದ್ದ. ಆಗ ಹೆತ್ತವರು ಹುಡುಗನ ಮೇಲಿನ ಸಿಟ್ಟಿನಿಂದ ಮೊಬೈಲನ್ನು ಒಡೆದು ಹಾಕಿದ್ದರು. ಆದರೆ, ಅವರಿಗೆ ಯಾವ ಕಾರಣಕ್ಕಾಗಿ ಆ ಮೊಬೈಲ್ ಹುಡುಗನ ಕೈಗೆ ಬಂದಿತ್ತು ಎನ್ನುವುದರ ಅರಿವು ಇರಲಿಲ್ಲ ಎಂದು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಎ. ಸಿಂಧು ಕೋರ್ಟ್‌ಗೆ ತಿಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಶೇಷ ನ್ಯಾಯಾಧೀಶರಾದ ಸತೀಶ್ ಶ್ರೀಕುಮಾರ್ ಅವರು ೧೨ ವರ್ಷದೊಳಗಿನ ಮಕ್ಕಳನ್ನು ಮೋಸ ಮಾಡಿ ಈ ರೀತಿ ಬಳಸಿಕೊಳ್ಳುವುದು, ಅದೂ ಶಿಕ್ಷಕನೊಬ್ಬ ಇಂಥ ಕೃತ್ಯಕ್ಕೆ ಇಳಿಯುವುದು ಘೋರ ಅಪರಾಧ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಕೇರಳ ರಾಜ್ಯ ಸಂತ್ರಸ್ತರ ಪರಿಹಾರ ಯೋಜನೆಯ ಮೂಲಕ ವಿದ್ಯಾರ್ಥಿಗೆ ಪರಿಹಾರ ಒದಗಿಸಲು ಸಹಕರಿಸಬೇಕು ಎಂದು ಸೂಚಿಸಿದರು.