ಮುಂಬೈ: ಆನ್‌ಲೈನ್ ಜಗತ್ತಿನಲ್ಲಿ ಆನ್‌ಲೈನ್ ಮೂಲಕ ನಡೆಯುತ್ತಿರುವ ವಂಚನೆ (Cyber Fraud) ಪ್ರಕರಣಗಳು ಮಿತಿಮೀರಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವವರು, ಆಮಿಷವೊಡ್ಡಿ ಒಟಿಪಿ ಕೇಳಿದರೆ ಕೊಡುವವರು ಸೇರಿ ಹಲವು ರೀತಿಯ ಜನರು ಹಣ ಕಳೆದುಕೊಳ್ಳುವವರಿದ್ದಾರೆ. ಈ ಕುರಿತು ಎಷ್ಟು ಜಾಗೃತಿ ಮೂಡಿಸಿದರೂ ಜನ ಮೋಸ ಹೋಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಮಹಾರಾಷ್ಟ್ರದಲ್ಲಿ 36 ವರ್ಷದ ಮಹಿಳೆಯೊಬ್ಬರು ಆನ್‌ಲೈನ್ ವಂಚನೆ ಜಾಲಕ್ಕೆ ಸಿಲುಕಿ 12 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಥಾಣೆ ನಗರದಲ್ಲಿ ಮಹಿಳೆಯೊಬ್ಬರಿಗೆ ಕಳೆದ ನವೆಂಬರ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ನಂಬಿದ ಮಹಿಳೆಯು ಹಣ ಕಳೆದುಕೊಂಡಿದ್ದಾರೆ. ಮಹಿಳೆಗೆ 12.47 ಲಕ್ಷ ರೂಪಾಯಿ ವಂಚನೆಯಾಗಿದ್ದು, ಕಪೂರ್‌ಬಾವ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ (IT) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಂಚನೆ ಜಾಲಕ್ಕೆ ಸಿಲುಕಿದ್ದು ಹೇಗೆ?
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನು ಕಳೆದ ವರ್ಷದ ನವೆಂಬರ್‌ನಲ್ಲಿ ಮೆಸೇಜ್ ಮಾಡಿ, ಪರಿಚಯ ಮಾಡಿಕೊಂಡಿದ್ದಾನೆ. ಇದಾದ ಬಳಿಕ ಇಬ್ಬರ ಮಧ್ಯೆ ಸ್ನೇಹವುಂಟಾಗಿದೆ. ತಾನು ಮಲೇಷ್ಯಾದವನು, ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳೆಯನ್ನು ನಂಬಿಸಿದ್ದಾನೆ. ಕೆಲವು ದಿನಗಳ ಬಳಿಕ ನಿಮಗೆ ಉಡುಗೊರೆಯೊಂದನ್ನು ಕಳುಹಿಸಿದ್ದೇನೆ ಎಂದು ಮಹಿಳೆಗೆ ತಿಳಿಸಿದ್ದಾನೆ. ಹಾಗೆಯೇ, ಉಡುಗೊರೆಯಲ್ಲಿ ಒಂದಷ್ಟು ಡಾಲರ್ ಇದೆ ಎಂಬುದಾಗಿಯೂ ಹೇಳಿದ್ದಾನೆ.
ವ್ಯಕ್ತಿ ಕಳುಹಿಸಿದ ಉಡುಗೊರೆ ಸ್ವೀಕರಿಸಲು ಉತ್ಸುಕಳಾಗಿದ್ದ ಮಹಿಳೆಗೆ ದೆಹಲಿಯ ಕಸ್ಟಮ್ಸ್ ಇಲಾಖೆಯಿಂದ ಮಾತನಾಡುತ್ತಿದ್ದೇನೆ ಎಂದು ಯುವತಿಯೊಬ್ಬಳು ಕರೆ ಮಾಡಿದ್ದಾಳೆ. ವಿದೇಶದಿಂದ ಉಡುಗೊರೆ ಬಂದಿರುವ ಕಾರಣ ಕಸ್ಟಮ್ಸ್ ಶುಲ್ಕ ನೀಡಬೇಕು ಎಂದು ಹೇಳಿದ್ದಾಳೆ. ಇದನ್ನು ನಂಬಿದ ಮಹಿಳೆಯು ಕರೆ ಮಾಡಿದ ಯುವತಿಗೆ ಹಲವು ಬಾರಿ ಹಣ ಕಳುಹಿಸಿದ್ದಾಳೆ.
ಇದನ್ನೂ ಓದಿ: Online fraud : ಆನ್‌ಲೈನ್ ವಂಚನೆ ಜಾಲಕ್ಕೆ ಪೊಲೀಸರ ಬಲೆ, 70 ಜನ ವಶಕ್ಕೆ
ಹೀಗೆ ಮಹಿಳೆಯು ಪದೇಪದೆ ಹಣ ಕಳುಹಿಸಿದರೂ ಉಡುಗೊರೆ ಬಂದಿಲ್ಲ. ಬಳಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿ ಹಾಗೂ ಕಸ್ಟಮ್ಸ್ ಇಲಾಖೆಯಿಂದ ಕರೆ ಮಾಡಿದ್ದೇನೆ ಎಂಬುದಾಗಿ ಹೇಳಿದವರಿಗೆ ಕಾಲ್ ಮಾಡಿದ್ದಾಳೆ. ಆಗ ಇಬ್ಬರ ಮೊಬೈಲ್‌ಗೂ ಕರೆ ಹೋಗಿಲ್ಲ. ಇದಾದ ಬಳಿಕವೇ ಮಹಿಳೆಗೆ ತಾನು ವಂಚನೆಗೊಳಗಾಗಿದ್ದು ಗೊತ್ತಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಮಹಿಳೆಯ ಬ್ಯಾಂಕ್ ಖಾತೆಯಿಂದ 12.47 ಲಕ್ಷ ರೂ. ಮಾಯವಾಗಿತ್ತು. ಸದ್ಯ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಆನ್‌ಲೈನ್ ವಂಚನೆ ಬಗ್ಗೆ ಇರಲಿ ಜಾಗೃತಿ
ಈಗ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್‌ಗಳಿವೆ. ಬಹುತೇಕ ಜನ ಆನ್‌ಲೈನ್ ವಹಿವಾಟು ನಡೆಸುತ್ತಾರೆ. ಹಾಗಾಗಿ, ಆನ್‌ಲೈನ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತವೆ. ಇದರಿಂದಾಗಿ, ಜನ ಯಾವುದೇ ಕಾರಣಕ್ಕೂ ಮೊಬೈಲ್ ಕರೆ ಮಾಡಿ, ಮೆಸೇಜ್ ಮಾಡಿ ಒಟಿಪಿ ಕೇಳಿದರೆ ಕೊಡಬಾರದು. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವರನ್ನು ನಂಬಬಾರದು. ಉಡುಗೊರೆ ಬಂದಿದೆ, ಕಸ್ಟಮ್ಸ್ ಸುಂಕ ಕೊಡಿ ಎಂಬುದು ಸೇರಿ ಯಾವುದೇ ಆಮಿಷಗಳಿಗೆ ಬಲಿಯಾಗಬಾರದು.