ಮೈಸೂರು/ರಾಯಚೂರು/ದೊಡ್ಡಬಳ್ಳಾಪುರ/ಶಿವಮೊಗ್ಗ: ಭಾನುವಾರ ಬೆಳಗ್ಗೆ ಪೌರಕಾರ್ಮಿಕ ರಸ್ತೆಯಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದಾಗ ಒನ್‌ವೇನಲ್ಲಿ ಬಂದ ಕಾರೊಂದು ಡಿಕ್ಕಿ (Road Accident) ಹೊಡೆದಿದೆ. ಪರಿಣಾಮ ಕಾರ್ಮಿಕನ ಕಾಲು ಕಟ್ ಆಗಿದೆ. ಮೈಸೂರಿನ ಡಿ.ದೇವರಾಜ ಅರಸು ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.
ಅಶೋಕಪುರಂ ನಿವಾಸಿ ಮಹದೇವು ಕಾಲಿನ ಪಾದವೇ ಕಟ್ ಆಗಿ ರಸ್ತೆಗೆ ಬಿದ್ದಿದೆ. ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ಮಹದೇವು ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಸ್ಥಳೀಯರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಭೇಟಿ ನೀಡಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆ ಹಾಗೂ ಪೌರಕಾರ್ಮಿಕರನ್ನು ರಕ್ಷಣೆ ಮಾಡುವಂತೆ ಆರೋಗ್ಯಾಧಿಕಾರಿ, ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಕುರಿಗಾಹಿಗೆ ಡಿಕ್ಕಿ ಹೊಡೆದ ಮಾಜಿ ಶಾಸಕನ ಅಳಿಯನ ಕಾರು!
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ಪಟ್ಟಣದ ಪಿಕಳಿಹಾಳ ಗ್ರಾಮದ ಬಳಿ ವೇಗವಾಗಿ ಬಂದ ಕಾರೊಂದು ಕುರಿಗಾಹಿ ಮೇಲೆ ಹರಿದಿದೆ. ಪರಿಣಾಮ ಬಸವರಾಜ್ (20) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪಿಕಳಿಹಾಳ ಗ್ರಾಮದ ಬಸವರಾಜ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸವರಾಜ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಇನ್ನು ಕಾರು ಮಾಜಿ ಶಾಸಕರೊಬ್ಬರ ಅಳಿಯನ ಕಾರು ಎಂದು ತಿಳಿದುಬಂದಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಳಿಯ ಶರಣಬಸವ ವ್ಯಾಕರನಾಳ ಎಂಬಾತ ಕಾರು ಎನ್ನಲಾಗಿದೆ. ಮುದ್ಗಲ್‌ನಿಂದ ತಾವರಗೇರಾ ಕಡೆ ಎರ್ಟಿಗಾ ಕಾರು ಹೊರಟ್ಟಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಡ್ರಿಂಕ್ ಆ್ಯಂಡ್ ಡ್ರೈವ್ ಕಾರಣವೆಂದು ಆರೋಪಿಸಲಾಗಿದ್ದು, ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Self Harming : ಹೆಣ್ಮಕ್ಕಳ ಜತೆಗೆ ದಂಪತಿ ಆತ್ಮಹತ್ಯೆ; ಕೊಳೆತು ನಾರುತ್ತಿರುವ ಶವಗಳು
ಚಲಿಸುತ್ತಿದ್ದ ಕ್ಯಾಂಟರ್‌ಗೆ ತಲೆಯೊಡ್ಡಿ ವ್ಯಕ್ತಿ ಆತ್ಮಹತ್ಯೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಇಸ್ಲಾಂಪುರದಲ್ಲಿ ಶನಿವಾರ ರಾತ್ರಿ ನೋಡ ನೋಡುತ್ತಿದ್ದಂತೆ ಚಲಿಸುತ್ತಿದ್ದ ಕ್ಯಾಂಟರ್ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಬೇಕಂತಲೇ ಕ್ಯಾಂಟರ್ ಕೆಳಗಡೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಸ್ತೆಯ ಪಕ್ಕದಲ್ಲೆ ನಿಂತಿದ್ದ ವ್ಯಕ್ತಿ ಕ್ಯಾಂಟರ್ ವೇಗವಾಗಿ ಬರುತ್ತಿದ್ದಂತೆ ಚಕ್ರದಡಿ ಮಲಗಿ ಮೃತಪಟ್ಟಿದ್ದಾನೆ. ಸದ್ಯ ಮೃತ ವ್ಯಕ್ತಿ ಯಾರು? ಆತನ ವಿಳಾಸವೇನು ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಗ್ಗಾನ್ ಆಸ್ಪತ್ರೆ ಎದುರೆ ಕಾರು ಪಲ್ಟಿ
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಎದುರು ಈ ಘಟನೆ ನಡೆದಿದೆ. ಸಾಗರ ಕಡೆಯಿಂದ ಅತಿ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣಕ್ಕೆ ಸಿಗದೆ ಮೂರು ಬಾರಿ ಪಲ್ಟಿಯಾಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರಲ್ಲಿ ಚಾಲಕನಿಗೆ ತೀವ್ರ ಗಾಯವಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ