ಜೈಪುರ: ‘ಹಣಕ್ಕಾಗಿ ಹೆಣ ಕೂಡ ಬಾಯಿ ಬಿಡುತ್ತದೆ’ ಎಂಬ ಮಾತಿದೆ. ಆದರೆ, ರಾಜಸ್ಥಾನದ ಜೈಪುರದಲ್ಲಿ ವ್ಯಕ್ತಿಯೊಬ್ಬ ಹಣಕ್ಕಾಗಿ ಹೆಂಡತಿಯನ್ನೇ ಹೆಣವಾಗಿಸಿದ್ದಾನೆ. ಹೌದು, ಇನ್ಶುರೆನ್ಸ್‌ನ ೧.೯ ಕೋಟಿ ರೂಪಾಯಿಗಾಗಿ ಅಪಘಾತ ಮಾಡಿಸುವ (Man Kills Wife) ಮೂಲಕ ಹೆಂಡತಿಯನ್ನು ಕೊಲ್ಲಿಸಿದ್ದಾನೆ.
ಮಹೇಶ್ ಚಾಂದ್ ಎಂಬ ವ್ಯಕ್ತಿಯು ಹೆಂಡತಿ ಪ್ರಯಾಣಿಸುತ್ತಿದ್ದ ಬೈಕ್‌ಗೆ ಕಾರು ಗುದ್ದಿಸಲು ಸುಪಾರಿ ಕೊಟ್ಟಿದ್ದಾನೆ. ಅದರಂತೆ, ಸುಪಾರಿ ಪಡೆದವರು ಕಾರು ಗುದ್ದಿಸಿ ಚಾಂದ್‌ನ ಹೆಂಡತಿ ಶೈಲು ಅವರನ್ನು ಹತ್ಯೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಐವರನ್ನು ಬಂಧಿಸಿದ್ದಾರೆ.
“ಮಹೇಶ್ ಚಾಂದ್ ಹಾಗೂ ಶೈಲು ೨೦೧೫ರಲ್ಲಿ ಮದುವೆಯಾಗಿದ್ದು, ಕೆಲ ವರ್ಷಗಳಿಂದ ಅವರ ಸಂಬಂಧದಲ್ಲಿ ಬಿರುಕುಂಟಾಗಿತ್ತು. ಹಾಗಾಗಿ, ಶೈಲು ತಂದೆ-ತಾಯಿ ಮನೆಯಲ್ಲಿ ವಾಸಿಸುತ್ತಿದ್ದರು. ಶೈಲು ವಿಮೆ ಮಾಡಿಸಿದ್ದು, ಸಹಜ ಸಾವು ಸಂಭವಿಸಿದರೆ ಅವರ ಕುಟುಂಬಸ್ಥರಿಗೆ ಒಂದು ಕೋಟಿ ರೂ. ಹಾಗೂ ಅಪಘಾತದಲ್ಲಿ ಮೃತಪಟ್ಟರೆ ೧.೯ ಕೋಟಿ ರೂ. ಇನ್ಶುರೆನ್ಸ್ ಮೊತ್ತ ಸಿಗುತ್ತದೆ. ಇದನ್ನು ಗಮನಿಸಿದ ಮಹೇಶ್ ಚಾಂದ್ ಅಪಘಾತ ಮಾಡಿಸಿದ್ದಾನೆ” ಎಂದು ಪಶ್ಚಿಮ ವಿಭಾಗದ ಡಿಸಿಪಿ ವಂದಿತಾ ರಾಣಾ ಮಾಹಿತಿ ನೀಡಿದ್ದಾರೆ.
ಹೆಂಡತಿಯನ್ನು ಕೊಲ್ಲಿಸಲು ರೌಡಿ ಶೀಟರ್ ಆದ ಮುಕೇಶ್ ಸಿಂಗ್ ರಾಥೋಡ್ ಎಂಬಾತನಿಗೆ ಮಹೇಶ್ ಚಾಂದ್ ೧೦ ಲಕ್ಷ ರೂ. ಸುಪಾರಿ ನೀಡಿದ್ದಾನೆ. ಅದರಂತೆ, ಅಕ್ಟೋಬರ್ ೫ರಂದು ಶೈಲು ಅವರು ಬೆಳಗಿನ ಜಾವ ಆಂಜನೇಯನ ದೇವಾಲಯಕ್ಕೆ ತೆರಳುವಾಗ ಎಸ್‌ಯುವಿ ಕಾರ್ ಗುದ್ದಿಸಲಾಗಿದೆ. ಅಪಘಾತದಲ್ಲಿ ಶೈಲು ಹಾಗೂ ಆಕೆಯ ಸಂಬಂಧಿಯೊಬ್ಬ ಮೃತಪಟ್ಟಿದ್ದಾನೆ. ಮಹೇಶ್ ಚಾಂದ್ ಕೂಡ ಎಸ್‌ಯುವಿಯನ್ನು ಫಾಲೋ ಮಾಡುತ್ತಿದ್ದ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | love murder | ಪ್ರೇಮಿಗಳ ಜಗಳ ಕೊಲೆಯಲ್ಲಿ ಅಂತ್ಯ: ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದ ಸುಂದರಿಯನ್ನು ಕೊಂದೇ ಹಾಕಿದ!