Site icon Vistara News

Crime News : ವಾಕಿಂಗ್‌ ಮಾಡುತ್ತಿದ್ದ ನಾಯಿಗಳ ಕಚ್ಚಾಟ; ಗುಂಡೇಟಿನಿಂದ ಇಬ್ಬರ ಪ್ರಾಣ ಹೋಗುವಂತಾಯಿತು!

man kills Neighbours

ಭೋಪಾಲ್‌: ಸಾಕು ನಾಯಿ ವಿಚಾರದಲ್ಲಿ ಆರಂಭವಾದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯು ಜನರತ್ತ ಗುಂಡು ಹಾರಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ ಆಗಿವೆ (Crime News) ಕೂಡ.

ಖಾಸಗಿ ಬ್ಯಾಂಕ್‌ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿರುವ ರಾಜ್‌ಪಾಲ್‌ ಸಿಂಗ್‌ ರಾಜ್‌ವಾತ್‌ ತಮ್ಮ ಮನೆಯಲ್ಲಿ ಒಂದು ನಾಯಿಯನ್ನು ಸಾಕಿದ್ದರು. ಹಾಗೆಯೇ ಅವರ ಪಕ್ಕದ ಮನೆಯವರಾದ ವಿಮಲ್‌ ಅಚಲ(35) ಕೂಡ ನಾಯಿ ಸಾಕಿದ್ದರು. ಗುರುವಾರ ರಾತ್ರಿ 11 ಗಂಟೆ ಹೊತ್ತಿಗೆ ಇಬ್ಬರೂ ತಮ್ಮ ಮನೆಯೆದುರಿನ ರಸ್ತೆಯಲ್ಲಿ ನಾಯಿಗಳನ್ನು ವಾಕಿಂಗ್‌ ಮಾಡಿಸುತ್ತಿದ್ದರು. ಈ ವೇಳೆ ಎರಡೂ ನಾಯಿಗಳು ಜಗಳಕ್ಕೆ ಬಿದ್ದಿವೆ. ಅವುಗಳ ಜಗಳದ ವಿಚಾರದಲ್ಲೇ ರಾಜ್‌ಪಾಲ್‌ ಮತ್ತು ವಿಮಲ್‌ ಜಗಳ ಆಡಿಕೊಂಡಿದ್ದಾರೆ.

ಇದನ್ನೂ ಓದಿ: Viral News : ಬೆತ್ತಲೆ ತೋರಿಸುವ ʼಮ್ಯಾಜಿಕ್‌ ಕನ್ನಡಿʼಗಾಗಿ 9 ಲಕ್ಷ ರೂ. ಕಳೆದುಕೊಂಡ ಕಿಲಾಡಿ ಮುದುಕ!
ಜಗಳ ತಾರಕಕ್ಕೇರಿದಾಗ ಸಿಟ್ಟಿನಿಂದ ತನ್ನ ಮೊದಲನೇ ಮಹಡಿಯ ಮನೆಗೆ ಓಡಿದ ರಾಜ್‌ಪಾಲ್‌ ತನ್ನ ಬಳಿ ಇದ್ದ ಬಂದೂಕನ್ನು ಹೊರಗೆ ತೆಗೆದುಕೊಂಡು ಬಂದಿದ್ದಾನೆ. ಮನೆಯ ಬಾಲ್ಕನಿಯಲ್ಲೇ ನಿಂತುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿ ಹೆದರಿಸಿದ್ದಾನೆ. ಕೊನೆಗೆ ರಸ್ತೆ ಮೇಲಿದ್ದ ವಿಮಲ್‌ ಕಡೆಗೇ ಗುಂಡು ಹಾರಿಸಿದ್ದಾನೆ. ಈ ಗಲಾಟೆಯಲ್ಲಿ ಇನ್ನೊಬ್ಬ ಸ್ಥಳೀಯರಾದ 27 ವರ್ಷದ ರಾಹುಲ್‌ ವರ್ಮಾ ಅವರಿಗೂ ಗುಂಡು ಬಿದ್ದಿದೆ. ಹಾಗೆಯೇ ಅಲ್ಲಿ ಅಕ್ಕ ಪಕ್ಕ ಇದ್ದ ಆರು ಮಂದಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.

ಘಟನೆ ನಡೆದ ತಕ್ಷಣವೇ ವಿಮಲ್‌ ಮತ್ತು ರಾಹುಲ್‌ ವರ್ಮಾರವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅವರು ಅಲ್ಲಿ ಪ್ರಾಣ ಬಿಟ್ಟಿದ್ದಾರೆ. ಉಳಿದ ಆರು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ವಿಮಲ್‌ ಅವರು ನಗರದ ನಿಪಾಣಿಯಾ ಏರಿಯಾದಲ್ಲಿ ಹೇರ್‌ ಸೆಲೂನ್‌ ಒಂದನ್ನು ನಡೆಸಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Viral News : ಮದುವೆಯಾದ ದಿನದಂದೇ ಮುರಿದುಬಿತ್ತು ದಾಂಪತ್ಯ! ಅದಕ್ಕೆಲ್ಲ ಕಾರಣವಾಗಿದ್ದು ಆ ಒಂದು ಕೇಕ್‌!
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ರಾಜ್‌ಪಾಲ್‌ ಹಾಗೂ ಆತನ ಮಗ ಸುಧೀರ್‌ ಮತ್ತು ಇನ್ನೊಬ್ಬ ಸಂಬಂಧಿ ಶುಭಂ ಎಂಬುವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗ್ವಾಲಿಯರ್‌ ಮೂಲದ ರಾಜ್‌ಪಾಲ್‌ ಇಂದೋರ್‌ನಲ್ಲಿ ಖಾಸಗಿ ಬ್ಯಾಂಕ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದುದ್ದರಿಂದ ಅವರಿಗೆ ಬ್ಯಾಂಕ್‌ ವತಿಯಿಂದ ಪರವಾನಗಿ ಇರುವ ಬಂದೂಕು ಕೊಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Exit mobile version