ತಿರುಚ್ಚಿ: ಪ್ರೇಮಿಸಲು ನಿರಾಕರಿಸಿದ ಕಾರಣಕ್ಕೆ ದುಷ್ಟನೊಬ್ಬ ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ನಡು ಬೀದಿಯಲ್ಲಿ ಅಡ್ಡಗಟ್ಟಿ 14 ಬಾರಿ ಇರಿದ ಭೀಕರ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ. ಇಂಥ ಅಮಾನುಷ ಕೃತ್ಯವನ್ನು ಎಸೆದ ಈ 22 ವರ್ಷದ ಯುವಕನ ಶವ ಕೆಲವೇ ಹೊತ್ತಿನಲ್ಲಿ ಸಮೀಪದ ರೈಲ್ವೆ ಟ್ರ್ಯಾಕ್ನಲ್ಲಿ ಪತ್ತೆಯಾಗಿದೆ. ಇದೇ ಯುವಕ ಈ ಹಿಂದೆಯೂ ಇದೇ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿದ ಕಾರಣಕ್ಕೆ ಪೋಕ್ಸೋ ಕಾಯಿದೆಯಡಿ ಬಂಧಿತನಾಗಿದ್ದ. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಆರೋಪಿ ಮತ್ತೆ ಆಕೆಯನ್ನು ಬೆನ್ನು ಹತ್ತಲು ಶುರು ಮಾಡಿದ್ದ. ಮಂಗಳವಾರ ಆಕೆಯ ಪಾಲಿಗೆ ಯಮನಂತೆ ಅಡ್ಡಗಟ್ಟಿದ.
ತಿರುಚಿಯ ಆತಿಕುಲಂ ನಿವಾಸಿಯಾಗಿರುವ ಈ ವಿದ್ಯಾರ್ಥಿನಿಗೆ ಮಂಗಳವಾರ ಪರೀಕ್ಷೆ ಇತ್ತು. ಅದನ್ನು ಮುಗಿಸಿಕೊಂಡು ಆಕೆ ತನ್ನ ಸಂಬಂಧಿಯೊಬ್ಬರನ್ನು ಭೇಟಿ ಮಾಡಲು ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆಗೆ ಒಮ್ಮಿಂದೊಮ್ಮೆಗೇ ಪ್ರತ್ಯಕ್ಷನಾದ ಆರೋಪಿ ಕೇಶವನ್ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಆದರೆ ಆಕೆ ನಿರಾಕರಿಸುತ್ತಿದ್ದಂತೆಯೇ ಸಿಟ್ಟಿಗೆದ್ದ ಆತ ಅದುವರೆಗೆ ಅಡಗಿಸಿಟ್ಟುಕೊಂಡಿದ್ದ ಚೂರಿಯನ್ನು ಹೊರತೆಗೆದು ಒಂದೇ ಸಮನೆ 14 ಬಾರಿ ಇರಿದಿದ್ದಾನೆ. ಬಾಲಕಿ ಜೋರಾಗಿ ಬೊಬ್ಬೆ ಹೊಡೆಯುತ್ತಿದ್ದಂತೆಯೇ ಚೂರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ವಾಹನಗಳಲ್ಲಿ ಹೋಗುತ್ತಿದ್ದವರು ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದರು. ಆಕೆಯ ದೇಹದಿಂದ ರಕ್ತ ಒಂದೇ ಸಮನೆ ಹರಿಯುತ್ತಿತ್ತು.
ಈ ನಡುವೆ ತಕ್ಷಣವೇ ಹುಡುಕಾಟ ಆರಂಭಿಸಿದ ಪೊಲೀಸರಿಗೆ ಆತನ ಶವ ಸಮೀಪದ ರೈಲ್ವೆ ಹಳಿಯಲ್ಲಿ ದೊರೆಯಿತು. ಆರೋಪಿ ತಾನೂ ಚೂರಿಯಿಂದ ಇರಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
ಬೆನ್ನು ಬಿಡದ ಬೇತಾಳ
ತಿರುಚ್ಚಿಯ ಪೋತಮೇಟ್ಟುಪಟ್ಟಿ ನಿವಾಸಿಯಾಗಿರುವ ಕೇಶವನ್ ಬಹುಕಾಲದಿಂದಲೇ ಈ ಹುಡುಗಿಯನ್ನು ಕಾಡುತ್ತಿದ್ದ. ಆಕೆ ನಿರಂತರವಾಗಿ ಆತನ ಪ್ರೇಮವನ್ನು ನಿರಾಕರಿಸುತ್ತಿದ್ದಳು. ಅದೊಂದು ಬಾರಿ ಆತ ಆಕೆಯನ್ನು ಬೆದರಿಸಿ ಅಪಹರಿಸಿದ್ದ. ಕೊನೆಗೆ ಎಲ್ಲ ಕಡೆ ಹುಡುಕಾಡಿ ಆಕೆಯನ್ನು ಪತ್ತೆ ಹಚ್ಚಿ ಮರಳಿ ಕರೆ ತರಲಾಗಿತ್ತು. ಈ ಘಟನೆ ನಡೆದಿದ್ದು, 2021ರ ಜೂನ್ನಲ್ಲಿ. ಆಗ ಆತನನ್ನು ಜೈಲಿಗೆ ಹಾಕಲಾಗಿತ್ತು. ಸಾಮಾನ್ಯವಾಗಿ ಪೋಕ್ಸೊ ಕಾಯಿದೆಯಡಿ ವರ್ಷಾಂತರ ಕಾಲ ಜೈಲಿನಿಂದ ಬಿಡುಗಡೆ ಮಾಡುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಆತ ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ.
ಬಂದವನೇ ಮತ್ತೆ ಆಕೆಯ ಬೆನ್ನು ಬಿದ್ದಿದ್ದ. ಈ ಬಾರಿ ಆಕೆಯನ್ನು ಕೊಲೆ ಮಾಡುವುದಕ್ಕೇ ಪ್ಲಾನ್ ಮಾಡಿದಂತೆ ಕಾಣುತ್ತಿದೆ. ಆದರೆ, ಇದೀಗ ಅವನೇ ಶವವಾಗಿದ್ದಾನೆ. ಇತ್ತ ಬಾಲಕಿ ಆಸ್ಪತ್ರೆಯಲ್ಲಿದ್ದಾಳೆ. ಪರಿಸ್ಥಿತಿ ಸ್ವಲ್ಪ ಗಂಭೀರವಾಗಿಯೇ ಇದೆಯಾ ದರೂ ಪ್ರಾಣ ಉಳಿಸಲು ವೈದ್ಯರು ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ| LOVE JIHAD| ಲವ್ ಜಿಹಾದ್ಗೆ ಕುಂದಾಪುರದ ಹಿಂದೂ ಯುವತಿ ಬಲಿ