ಚಂಡೀಗಢ: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ (Live In Relationship) ಯುವತಿಯರಿಗೆ ಕಿರುಕುಳ ನೀಡುವುದು, ಅವರನ್ನು ಭೀಕರವಾಗಿ ಕೊಲೆ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಇದಕ್ಕೆ ನಿದರ್ಶನ ಎಂಬಂತೆ ಹರಿಯಾಣದ ಗುರುಗ್ರಾಮದಲ್ಲಿ ವ್ಯಕ್ತಿಯೊಬ್ಬ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಗೆ ಸ್ಕ್ರೂಡ್ರೈವರ್‌ನಿಂದ (Screwdriver) ಇರಿದು ಮಾರಣಾಂತಿಕವಾಗಿ (Assault Case) ಹಲ್ಲೆ ನಡೆಸಿದ್ದಾನೆ.
ಉತ್ತರ ಪ್ರದೇಶ ಮೂಲದ ಶಿವಂ ಕುಮಾರ್ ಎಂಬಾತನು ಗುರುಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಈತನು ಮಹಿಳೆಯ ಜತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾನೆ. ಆಗಸ್ಟ್ 17ರಂದು ಈತನು ಮಹಿಳೆಯನ್ನು ಸೆಕ್ಸ್ ಮಾಡಲು ಕರೆದಿದ್ದಾನೆ. ಇದಕ್ಕೆ ಮಹಿಳೆ ಒಪ್ಪದಿದ್ದರೂ ಆಕೆಯನ್ನು ಬಲವಂತ ಮಾಡಿದ್ದಾನೆ. ಆಗಲೂ ಮಹಿಳೆ ಒಪ್ಪದ ಕಾರಣ ಆಕೆಯ ಕುತ್ತಿಗೆ ಹಿಸುಕಿ, ಸ್ಕ್ರೂಡ್ರೈವರ್ ಚುಚ್ಚಿ ಹಲ್ಲೆ ನಡೆಸಿದ್ದಾನೆ. ಬಳಿಕ ಗುರುಗ್ರಾಮದ ರಾಜೀವ್ ಚೌಕ್‌ನಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಾಣಾಪಾಯದಿಂದ ಪಾರು
ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನು ಶಿವಂ ಕುಮಾರ್ ವಿರುದ್ಧ ಆಕೆ ದೂರು ದಾಖಲಿಸಿದ್ದಾರೆ. “ನಾನು ನನ್ನ ಗಂಡನಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ. ಇದೇ ವೇಳೆ ಶಿವಂ ಕುಮಾರ್‌ನ ಪರಿಚಯವಾಯಿತು. ಆತ ನನ್ನನ್ನು ಮದುವೆಯಾಗುವುದಾಗಿ ನಂಬಿಸಿದೆ. ಆದರೆ, ಈಗಾಗಲೇ ಆತನಿಗೆ ಮದುವೆಯಾಗಿದೆ ಎಂಬುದನ್ನು ನನ್ನಿಂದ ಮುಚ್ಚಿಟ್ಟಿದ್ದಾನೆ” ಎಂದು ಮಹಿಳೆಯು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಲಿವ್ ಇನ್ ಸಂಗಾತಿಯಿಂದ ದಾರುಣ ಅಂತ್ಯಕಂಡ 28ರ ಮಹಿಳೆ; ಪತಿಯನ್ನು ಬಿಟ್ಟು ಹೋಗಿದ್ದವಳು ಬೆಂಕಿಯಲ್ಲಿ ಬೆಂದು ಸಾವು
“ತನಗೆ ಈಗಾಗಲೇ ಮದುವೆಯಾಗಿದೆ ಎಂಬುದನ್ನು ನನ್ನಿಂದ ಮರೆಮಾಚಿ ಮೋಸ ಮಾಡಿದ್ದಾನೆ. ಈತನಿಗೆ ಈಗಾಗಲೇ ಮದುವೆಯಾಗಿರುವುದನ್ನು ತಿಳಿದು ನಾನು ಗದರಿದೆ. ಅಲ್ಲದೆ, ನನ್ನನ್ನು ಭೇಟಿಯಾಗಲು ಬರಬೇಡ ಎಂದೆ. ಆದರೂ ಆತ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದೆ. ಇದಕ್ಕೆ ನಿರಾಕರಿಸಿದಾಗ ನನ್ನ ಮೇಲೆ ಹಲ್ಲೆ ನಡೆಸಿದ” ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.