ಚಿತ್ತೂರ್: ತಮ್ಮ ಮಾಡಿದ ಅನಾಚಾರಕ್ಕೆ ಅಣ್ಣನನ್ನು ಭಯಾನಕವಾಗಿ ಹತ್ಯೆ ಮಾಡಲಾಗಿದೆ. ಆಂಧ್ರಪ್ರದೇಶದ ಚಿತ್ತೂರ್ನಲ್ಲಿ ನಾಗರಾಜು ಎಂಬುವರನ್ನು ಕಾರಿನಲ್ಲಿ ಕೂಡಿ, ಜೀವಂತವಾಗಿ ಸುಟ್ಟು ಕೊಲ್ಲಲಾಗಿದೆ. ಇವರ ತಮ್ಮ ಪುರುಷೋತ್ತಮ್ ಎಂಬಾತ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಇದೇ ವಿಷಯಕ್ಕೆ ಸಿಟ್ಟಾದ ಮಹಿಳೆಯ ಕುಟುಂಬದವರು, ನಾಗರಾಜು ಅವರನ್ನು ಕೊಂದಿದ್ದಾರೆ. ಅಂದಹಾಗೇ, ನಾಗರಾಜು, ಪುರುಷೋತ್ತಮ್ ಮತ್ತು ಆ ವಿವಾಹಿತ ಮಹಿಳೆ ಮೂವರೂ ಆಂಧ್ರಪ್ರದೇಶದ ಕೊನಾಸೀಮಾ ಜಿಲ್ಲೆಯ ರಾಮಚಂದ್ರಾಪುರ ಮಂಡಲ್ನವರು ಎನ್ನಲಾಗಿದೆ.
ಮಹಿಳೆ ಮತ್ತು ಪುರುಷೋತ್ತಮ್ ನಡುವಿನ ಸಂಬಂಧ ಮಹಿಳೆಯ ಮನೆಯವರಿಗೆ ಗೊತ್ತಾಗಿತ್ತು. ಅದರಲ್ಲಿ ರಿಪುಂಜಯ್ ಎಂಬಾತ ನಾಗರಾಜ್ನೊಂದಿಗೆ ಮಾತನಾಡಿ, ಇವರಿಬ್ಬರ ವಿಷಯದ ಬಗ್ಗೆ ಚರ್ಚೆ ಮಾಡಿದ್ದ. ಹಾಗೇ, ಮಹಿಳೆ ಮತ್ತು ಪುರುಷೋತ್ತಮ್ ನಡುವಿನ ವಿಷಯ ಇತ್ಯರ್ಥ ಮಾಡಬೇಕು ಬನ್ನಿ ಎಂದು ನಾಗರಾಜ್ನನ್ನು ಕರೆಸಿದ್ದ. ನಾಗರಾಜ್ ಕೂಡ ಮಾತನಾಡಲೆಂದು ರಿಪುಂಜಯ್ ಕರೆದಲ್ಲಿ ಹೋದ. ಆದರೆ ಅಲ್ಲಿ ದುರಂತವೇ ನಡೆದು ಹೋಗಿದೆ.
ನಾಗರಾಜ್ ತಾವು ಹೇಳಿದ ಸ್ಥಳ ತಲುಪುತ್ತಿದ್ದಂತೆ ರಿಪುಂಜಯ್ ಮತ್ತು ಇತರರು ಆತನನ್ನು ಕಾರಿನಲ್ಲಿ ಕೂರಿಸಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದರು. ಒಂದೆಡೆ ಕಾರು ನಿಲ್ಲಿಸಿಕೊಂಡು ನಾಗರಾಜುವಿಗೆ ಬಾಯಿಗೆ ಬಂದಂತೆ ಬೈದರು. ಬಳಿಕ ಥಳಿಸಿ, ಕಾರಿನೊಳಗೇ ಕೂರಿಸಿ ಹಗ್ಗದಿಂದ ಕಟ್ಟಿಹಾಕಿದರು. ಇಷ್ಟೆಲ್ಲ ಆದ ಮೇಲೆ ಇಡೀ ಕಾರಿನ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ್ದಾರೆ. ಒಳಗಿದ್ದ ನಾಗರಾಜ್ ಸಜೀವ ದಹನಗೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಆ ಕಾರನ್ನು ಕಂದಕಕ್ಕೆ ನೂಕಲು ಪ್ರಯತ್ನ ಮಾಡಿದ್ದಾರೆ. ಆದರೆ ಕಲ್ಲಿಗೆ ಅಡ್ಡ ಸಿಕ್ಕಿದ್ದರಿಂದ ಅದು ಬೀಳಲಿಲ್ಲ.
ಇದನ್ನೂ ಓದಿ: Fire tragedy: ಬಿಎಂಟಿಸಿ ಬಸ್ಸಿಗೆ ಬೆಂಕಿ, ಕಂಡಕ್ಟರ್ ಸಜೀವ ದಹನ
ಹೀಗೆ ಇವರಿಬ್ಬರ ಕುಟುಂಬದ ವಿಷಯ-ದ್ವೇಷದ ವಿಷಯ ದೊಡ್ಡದಾಗಿ, ಹಲವರಿಗೆ ಗೊತ್ತಿತ್ತು.. ನಾಗರಾಜುವನ್ನು ಆ ಮಹಿಳೆ ಕುಟುಂಬದವರು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿದ ಒಂದಿಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ಕೊಡುವಷ್ಟರಲ್ಲಿ ನಾಗರಾಜ್ ಸುಟ್ಟ ಗಾಯಗಳಿಂದ ಜೀವ ಬಿಟ್ಟಿದ್ದರು. ಆ ಶವವನ್ನು ಪೊಲೀಸರು ಕಾರಿನಿಂದ ಹೊರತೆಗೆದು ಕುಟುಂಬದವರಿಗೆ ವರ್ಗಾಯಿಸಿದ್ದಾರೆ. ತನಿಖೆ ನಡೆಯುತ್ತಿದೆ.