ಮಂಗಳೂರು : ಮಂಗಳೂರು ಬಾಂಬ್ ಸ್ಫೋಟದ ಆರೋಪಿ ಶಾರೀಕ್ ಎನ್ನುವುದು ದೃಢವಾಗಲಿದೆಯೇ ಎಂಬ ಪ್ರಶ್ನೆ ಇದೀಗ ಉಂಟಾಗಿದೆ. ಇಂದು ಮಂಗಳೂರು ಆಸ್ಪತ್ರೆಯಲ್ಲಿ (Mangalore Blast) ಶಂಕಿತ ಉಗ್ರನ ಗುರುತು ಪತ್ತೆ ಕಾರ್ಯ ನಡೆಯಲಿದೆ.
ಆರೋಪಿಯ ಕುಟುಂಬಸ್ಥರು ಗುರುತು ಪತ್ತೆಗೆ ಶಿವಮೊಗ್ಗದಿಂದ ಮಂಗಳೂರಿಗೆ ಬರಲಿದ್ದಾರೆ. ಬೆಳಗ್ಗೆ 9.30ಕ್ಕೆ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.
ಶಂಕಿತ ಉಗ್ರ 50% ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿದ್ದಾನೆ. ಆರೋಪಿಯ ಗುರುತನ್ನು ಪೊಲೀಸರು ಬಹುತೇಕ ಪತ್ತೆ ಹಚ್ಚಿದ್ದಾರೆ. ಆದರೂ ಕುಟುಂಬಸ್ಥರು ಗುರುತು ಪತ್ತೆ ಮಾಡಿದ ಬಳಿಕ ಅಂತಿಮ ನಿರ್ಧಾರ ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಶಂಕಿತನ ಗುರುತು ಪತ್ತೆ ಬಳಿಕ ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.