Site icon Vistara News

ನಡು ರಾತ್ರಿ, ರಸ್ತೆ ಮಧ್ಯೆ ಮಹಿಳೆಗೆ ಒದ್ದರು, ಹೊಡೆದರು, ತುಳಿದರು; ಭೀಕರ ವಿಡಿಯೊ ವೈರಲ್

Manipur Woman

Manipur woman assaulted on camera by group in Delhi; case lodged

ನವದೆಹಲಿ: ಮಣಿಪುರದಲ್ಲಿ ಕಳೆದ ಹಲವು ತಿಂಗಳಿಂದ ಹಿಂಸಾಚಾರ (Manipur Violence) ಭುಗಿಲೆದ್ದಿದೆ. ಕುಕಿ ಹಾಗೂ ಮೈತೈ ಸಮುದಾಯಗಳ ನಡುವಿನ ಸಂಘರ್ಷವು ನೂರಾರು ಜನರನ್ನು ಬಲಿ ಪಡೆದಿದೆ. ಈ ಹಿಂಸಾಚಾರ ಈಗ ರಾಷ್ಟ್ರ ರಾಜಧಾನಿ ದೆಹಲಿಗೂ ಕಾಲಿಟ್ಟಿದೆ. ಹೌದು, ದೆಹಲಿಯಲ್ಲಿ ಮೈತೈ ಸಮುದಾಯದವರು ಎನ್ನಲಾದ ಮಣಿಪುರದ ಒಬ್ಬ ಮಹಿಳೆ ಹಾಗೂ ಇಬ್ಬರು ವ್ಯಕ್ತಿಗಳ ಮೇಳೆ ಕುಕಿ ಸಮುದಾಯದವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ಭೀಕರ ವಿಡಿಯೊ (Viral Video) ಈಗ ವೈರಲ್‌ ಆಗಿದೆ.

ದೆಹಲಿಯ ಸನ್‌ಲೈಟ್‌ ಕಾಲೋನಿಯಲ್ಲಿ ಗುರುವಾರ (ನವೆಂಬರ್‌ 30) ರಾತ್ರಿ ಸುಮಾರು ಎಂಟರಿಂದ ಹತ್ತು ದುಷ್ಕರ್ಮಿಗಳು ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಗೆ ಒದ್ದು, ತುಳಿದು, ಹೊಡೆದು ಹಲ್ಲೆ ನಡೆಸಿದ್ದಾರೆ. ರಸ್ತೆ ಮೇಲೆಯೇ ಅವರನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ, ಆಕ್ರೋಶ ವ್ಯಕ್ತವಾಗುತ್ತಲೇ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಹಾಗೆಯೇ, ವಿಡಿಯೊ ಆಧರಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವೈರಲ್‌ ಆಗಿರುವ ವಿಡಿಯೊ

ಮಣಿಪುರದಲ್ಲಿ ಕುಕಿ ಹಾಗೂ ಮೈತೈ ಸಮುದಾಯಗಳ ಮಧ್ಯೆ ಮೇ 3ರಿಂದಲೂ ಹಿಂಸಾಚಾರ ಭುಗಿಲೆದ್ದಿದೆ. ಇದುವರೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಸುಮಾರು 180ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಿದ್ಧ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದರೂ ಹಿಂಸಾಚಾರ ನಿಲ್ಲುತ್ತಿಲ್ಲ. ಅಲ್ಲದೆ, ಮಣಿಪುರ ಹಿಂಸಾಚಾರ ಪ್ರಕರಣವು ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಮಣಿಪುರದಲ್ಲಿ ಶಾಂತಿಸ್ಥಾಪನೆಯ ಭರವಸೆ ನೀಡಿದ್ದರು. ಮಣಿಪುರದ ಅತ್ಯಂತ ಹಳೆಯ ಉಗ್ರಗಾಮಿ ಸಂಘಟನೆಯಾದ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ ಇತ್ತೀಚೆಗಷ್ಟೇ ಶಾಂತಿಸ್ಥಾಪನೆ ಕುರಿತು ಕೇಂದ್ರ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ: ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

“ನಾನು, ಪತ್ನಿ ಹಾಗೂ ನನ್ನ ಸಹೋದರಿಯು ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಊಟದ ಬಳಿಕ ನಮ್ಮ ಕುಟುಂಬದ ಸ್ನೇಹಿತರೊಬ್ಬರನ್ನು ಬಿಡಲು ಹೋಗಿದ್ದೆವು. ಇದೇ ವೇಳೆ ಮೊಬೈಲ್‌ ಬ್ಯಾಟರಿ ಲೋ ಆಗಿ, ಸ್ವಿಚ್ಡ್‌ ಆಫ್‌ ಆದ ಕಾರಣ ಕ್ಯಾಬ್‌ ಬುಕ್‌ ಮಾಡಲು ಬೇರೆಯವರ ಸಹಾಯ ಬೇಡಿದೆವು. ಇದೇ ವೇಳೆ ನನ್ನ ಹೆಂಡತಿ ಹಾಗೂ ಸಹೋದರಿ ಕುರಿತು ಅಸಭ್ಯವಾಗಿ ಮಾತನಾಡಿದರು. ಇದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಿದರು” ಎಂದು ಹಲ್ಲೆಗೀಡಾದ ವ್ಯಕ್ತಿ ತಿಳಿಸಿದ್ದಾರೆ. ಹಲ್ಲೆಗೊಳಗಾದವರು ಮಣಿಪುರದ ಮೈತೈ ಸಮುದಾಯಕ್ಕೆ ಸೇರಿದವರೇ ಎಂಬ ವಿಷಯ ದೃಢಪಟ್ಟಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇದು ಮೈತೈ ಹಾಗೂ ಕುಕಿ ಸಮುದಾಯದವರ ಸಂಘರ್ಷ ಎಂದೇ ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version