ಬೆಂಗಳೂರು: ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ತನ್ನ ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು (Marriage in trouble) ಹತ್ತಿದ್ದಾರೆ. ಕಾರಣವೇನೆಂದರೆ ಆತ ಮದುವೆಯಾಗಿ ಅದೆಷ್ಟೋ ತಿಂಗಳಾಗಿದ್ದರೂ ದಿನವೂ ಒಂದೊಂದು ಕಾರಣ ನೀಡಿ ಲೈಂಗಿಕ ಸಂಪರ್ಕವನ್ನು (Sexual relationship) ಮುಂದೂಡುತ್ತಿದ್ದ. ಇದೀಗ ಗಂಡನ ಅಸಲಿ ಮುಖವನ್ನು (Real Face of Husband) ಆಕೆ ಪತ್ತೆ ಹಚ್ಚಿದ್ದಾಳೆ.
ಅವನು ಸಲಿಂಗಕಾಮಿಯಾಗಿದ್ದು, ಹೆಣ್ಮಕ್ಕಳ ಬಗ್ಗೆ ಅವನಿಗೆ ಎಳ್ಳಷ್ಟೂ ಆಸಕ್ತಿ ಇಲ್ಲ. ಕೇವಲ ಪುರುಷರು ಮಾತ್ರ ಅವನ ಆಕರ್ಷಣೆಯ ಕೇಂದ್ರಬಿಂದು ಎನ್ನುವುದನ್ನು ಕಂಡುಕೊಂಡ ಆಕೆ ಈಗ ತನ್ನ ಸಲಿಂಗಿ ಗಂಡನ ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ಏನಿದು ಸಲಿಂಗಿಯ ಮದುವೆ ಕಥೆ?
ಅವಳು ವೃತ್ತಿಯಲ್ಲಿ ಎಂಜಿನಿಯರ್. ಬದುಕಿನಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಕಂಡಿದ್ದಳು. ಕೆಲವು ವರ್ಷಗಳ ಹಿಂದೆ ಅವಳಿಗೆ ಮದುವೆಯಾಗಿತ್ತು. ಹುಡುಗನೂ ಒಳ್ಳೆಯ ಕೆಲಸದಲ್ಲಿದ್ದ. ಆತನ ತುಂಬ ಪ್ರಬುದ್ಧ ಮತ್ತು ನಯವಾದ ವರ್ತನೆಗಳು ಆಕೆಗೂ ಇಷ್ಟವಾಗಿದ್ದ. ಆದರೆ, ದಿನ ಕಳೆದಂತೆ ಆತ ಯಾಕೋ ಮದುವೆಯ ನಂತರ ನಡೆಯಬೇಕಾದ ಯಾವ ಚಟುವಟಿಕೆಗಳಿಗೂ ಆತ ಆಸಕ್ತನಾಗಿಲ್ಲ ಎನ್ನುವ ಸಂಗತಿ ಆಕೆಯ ಅರಿವಿಗೆ ಬಂತು. ಮೊದಲ ರಾತ್ರಿ ಬಿಡಿ, ಎಷ್ಟು ರಾತ್ರಿ ಕಳೆದರೂ ಫಸ್ಟ್ ನೈಟ್ ನಡೆಯಲೇ ಇಲ್ಲ.
ಆತ ದಿನಕ್ಕೊಂದು ಕಾರಣ ಹೇಳುತ್ತಾ ರಾತ್ರಿ ಆಕೆಯಿಂದ ದೂರ ಉಳಿಯಲು ಯತ್ನಿಸುತ್ತಿದ್ದ. ಈ ನಡುವೆ ಕುಟುಂಬಿಕರಲ್ಲಿ ಈ ಸಂಗತಿಯ ಬಗ್ಗೆ ಸಣ್ಣದಾಗಿ ಪ್ರಸ್ತಾಪಿಸಿದಾಗ ಅದಕ್ಕೆ ಅವಸರ ಮಾಡಬೇಡ, ಅವನ ಅಣ್ಣನಿಗೆ ಮಕ್ಕಳಾಗಿಲ್ಲ. ಅವನಿಗೆ ಆಗಲಿ, ನಿಮಗೆ ನಂತರ ಆದರೆ ಸಾಕು ಎಂದಿದ್ದರು. ಆದರೆ ಅವಳ ಸಮಸ್ಯೆ ಮಕ್ಕಳಾಗುವುದಕ್ಕೆ ಸಂಬಂಧಿಸಿದ್ದಾಗಿರಲಿಲ್ಲ. ಬದಲಾಗಿ ಗಂಡು-ಹೆಣ್ಣಿನ ನಡುವೆ ನಡೆಯುವ ಸಹಜ ಚಟುವಟಿಕೆಗಳೂ ನಡೆಯುತ್ತಿಲ್ಲವಲ್ಲ, ಹಾಗಿದ್ದರೆ ಮದುವೆ ಆಗಿದ್ದು ಯಾಕೆ ಎನ್ನುವುದು ಆಕೆಯ ಚಿಂತೆಯಾಗಿತ್ತು.
ಅವನು ಮಕ್ಕಳ ಬಗ್ಗೆ ಮಾತನಾಡಿದಾಗಲೂ ಪಲಾಯನ ಮಾಡುತ್ತಿದ್ದ. ಏನೇನೋ ಕಾರಣಗಳನ್ನು ನಯವಾಗಿ ಹೇಳುತ್ತಿದ್ದ. ಯಾಕೆ ಹೀಗೆ ಎಂದು ಯೋಚಿಸುತಿದ್ದವಳು ಒಂದು ದಿನ ಅವನ ಮೊಬೈಲನ್ನು ಪರೀಕ್ಷಿಸಿದಳು. ಆಗ ಅವಳಿಗೆ ಬೆಚ್ಚಿ ಬೀಳುವ ಸಂಗತಿಯೊಂದು ತಿಳಿದುಬಂತು. ಅದೇನೆಂದರೆ ಅವನಿಗೆ ಹುಡುಗಿಯರ ಮೇಲೆ ಆಸಕ್ತಿಯೇ ಇಲ್ಲ. ಅವನ ಆಸಕ್ತಿ ಏನಿದ್ದರೂ ಹುಡುಗರು. ಅವನೊಬ್ಬ ಪುರುಷ ಸಲಿಂಗಿಯಾಗಿದ್ದ!
ಆತನ ಮೊಬೈಲ್ ವಾಟ್ಸ್ ಆಪ್, ಮೆಸೇಂಜರ್‌ಗಳನ್ನು ನೋಡಿದಾಗ ಆತ ಬೇರೆ ಬೇರೆ ಹುಡುಗರ ಜತೆ ನಡೆಸಿದ ಸೆಕ್ಸ್ ಚಾಟ್‌ಗಳು ಕಂಡುಬಂದವು. ಜತೆಗೆ ವಾಟ್ಸ್ ಆಪ್‌ನಲ್ಲಿ ಆತ ಗಂಡ-ಹೆಂಡತಿ ಆಲಿಂಗಿಸಿಕೊಳ್ಳುವಂತೆ ಬೇರೆ ಹುಡುಗನನ್ನು ಆಲಿಂಗಿಸಿಕೊಂಡಿದ್ದು ಕಂಡುಬಂದಿದೆ. ಮಾತ್ರವಲ್ಲ ಲೈಂಗಿಕ ಚಟುವಟಿಕೆ ನಡೆಸುವ ಚಿತ್ರಗಳು, ವಿಡಿಯೋಗಳೂ ಇದ್ದವು.
ಇದನ್ನೂ ಓದಿ: Lesbian trouble | ಪ್ರೇಯಸಿ ಮೇಲೆ ಹಲ್ಲೆ ಮಾಡಿ ಕೈ ಕೊಯ್ದುಕೊಂಡ ಯುವತಿ, ಇದು ಸ್ತ್ರೀ ಸಲಿಂಗಿಗಳ ಗಲಾಟೆ?
ಇದನ್ನೆಲ್ಲ ಗಮನಿಸಿ ಪ್ರಶ್ನಿಸಿದಾಗ ಅದುವರೆಗೆ ನಯವಾಗಿ ಮಾತನಾಡುತ್ತಿದ್ದ ಆತ ಒಮ್ಮಿಂದೊಮ್ಮೆಗೇ ಕೆರಳಿದ. ಅವಳ ಮೇಲೆ ಹಲ್ಲೆ ನಡೆಸಿದ. ಇದಾದ ಬಳಿಕ ಯುವತಿ ಮತ್ತೊಮ್ಮೆ ತನ್ನ ಮನೆಯವರಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾಳೆ. ಆಗಲೂ ಅವರು ಹೊಂದಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ಅದೆಷ್ಟೋ ಗಂಡು ಮಕ್ಕಳಿಗೆ ಕೆಟ್ಟ ಹೆಂಗಸರ ಸಂಗ ಇರುತ್ತದೆ. ಆದರೆ, ಇವನು ಹಾಗಲ್ಲವಲ್ಲ ಎಂದು ಹೇಳುವ ಮೂಲಕ ಆಕೆಯನ್ನೇ ಸಮಾಧಾನ ಮಾಡಿದ್ದರು.
ಇದೆಲ್ಲದರ ನಡುವೆ ಆಕೆಗೆ ಈ ವ್ಯಕ್ತಿ ಸಲಿಂಗಿ ಎನ್ನುವುದು ಗೊತ್ತಿದ್ದೇ ಗಂಡನ ಮನೆಯವರು ಮದುವೆ ಮಾಡಿದ್ದಾರೆ ಎನ್ನುವ ಸತ್ಯ ತಿಳಿದು ಇನ್ನಷ್ಟು ಆಕ್ರೋಶ ಉಕ್ಕಿತು. ಅವರು ಮದುವೆಯಾದ ಮೇಲೆ ಮಗ ಸರಿ ಹೋದಾನು ಎಂದು ಮದುವೆ ಮಾಡಿಸಿದ್ದರು. 160 ಗ್ರಾಂ ಚಿನ್ನ ಮತ್ತು ನಗದನ್ನು ಹುಡುಗಿ ಕಡೆಯವರು ನೀಡಿದ್ದರು.
ಇದೀಗ ಯುವತಿ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ. ಗಂಡ ಮತ್ತು ಮನೆಯವರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.