ಬೆಂಗಳೂರು: ಅವಳಿ ಮಕ್ಕಳಿಗೆ ಜನ್ಮ ನೀಡಿದ ಬೆನ್ನಲ್ಲೇ ವೈದ್ಯರ ನಿರ್ಲಕ್ಷ್ಯದಿಂದ (Medical negligence) ತಾಯಿ (Mother Dies) ಮೃತಪಟ್ಟಿದ್ದಾರೆನ್ನಲಾದ ಕೇಸ್‌ಗೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮಣಿಪಾಲ್ ಆಸ್ಪತ್ರೆಯಲ್ಲಿದ್ದ ಮೃತದೇಹವನ್ನು ಬಿಲ್ ಪಾವತಿ ಮಾಡದೆಯೇ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಈ ಬಗ್ಗೆ ವಿಸ್ತಾರ ನ್ಯೂಸ್ ವರದಿಗೆ ಆಡಳಿತ ಮಂಡಳಿ ಸ್ಪಂದಿಸಿದೆ.
ಕ್ಲೌಡ್‌ನೈನ್ (CloudNine) ಆಸ್ಪತ್ರೆಯ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಜನನಿ (33) ಮೃತ ಬಾಣಂತಿಯಾಗಿದ್ದಾರೆ. ಇವರನ್ನು ನಗರದ ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಅವಧಿಪೂರ್ವ ಹೆರಿಗೆಯಾದ ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಣಂತಿ ಮೃತಪಟ್ಟಿದ್ದಾರೆ. ಇದಕ್ಕೆ ಕ್ಲೌಡ್‌ನೈನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.
ಕ್ಲೌಡ್‌ನೈನ್ (CloudNine) ಆಸ್ಪತ್ರೆಯಲ್ಲಿ ಐವಿಎಫ್ ಮೂಲಕ ಜನನಿ ಮತ್ತು ಕೇಶವ್ ದಂಪತಿ ಮಕ್ಕಳನ್ನು ಪಡೆದಿದ್ದರು. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮೇ 2ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗಾಗಿ ದಂಪತಿ ಹೆರಿಗೆ ಪ್ಯಾಕೇಜ್ ಮಾಡಿಸಿದ್ದರು. ಜನನಿಗೆ ಅವಧಿ ಪೂರ್ವ (7.5 ತಿಂಗಳಿಗೆ) ಹೆರಿಗೆ ಆಗಿತ್ತು. ನಂತರ ಆಕೆಗೆ ಜಾಂಡೀಸ್ ಇದೆ, ಲಿವರ್ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದರು, ಪರಿಸ್ಥಿತಿ ಗಂಭೀರವಾಗಿದ್ದರಿಂದ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಬುಧವಾರ ಬೆಳಗ್ಗೆ ಜನನಿ ಸಾವನ್ನಪ್ಪಿದ್ದರು. ಆದರೆ, ಈ ವೇಳೆ ಅವರ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ 30 ಲಕ್ಷ ರೂಪಾಯಿ ಬಿಲ್ ಆಗಿದೆ ಎನ್ನಲಾಗಿದೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 30 ಲಕ್ಷ ಬಿಲ್ ಆಗಿದ್ದು, ಈ ಬಿಲ್ ಪಾವತಿಸಿ ಮೃತದೇಹ ತೆಗೆದುಕೊಂಡು ಹೋಗಿ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಆದರೆ, ಕ್ಲೌಡ್‌ನೈನ್ ಆಸ್ಪತ್ರೆಯವರ ನಿರ್ಲಕ್ಷ್ಯಕ್ಕೆ ಜನನಿ ಸಾವಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಬಿಲ್ ಅನ್ನು CloudNine ಆಸ್ಪತ್ರೆಯೇ ಪಾವತಿಸಬೇಕೆಂದು ಪಟ್ಟು ಹಿಡಿದಿದ್ದರು. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಜೆ.ಬಿ.ನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದರು.
ಮೃತ ಜನನಿ ಪತಿ ಕೇಶವ್ ಪ್ರತಿಕ್ರಿಯಿಸಿ, ಕಳೆದ ತಿಂಗಳು ಪರೀಕ್ಷೆಗೆ ಬಂದಾಗ ವೈದ್ಯರು ಕೆಲವು ಮಾತ್ರೆಗಳನ್ನು ಕೊಟ್ಟಿದ್ದರು. ನಂತರ ನನ್ನ ಹೆಂಡತಿಗೆ ಕಾಲು ಊತ ಸೇರಿ ಆರೋಗ್ಯದಲ್ಲಿ ಕೆಲ ಸಮಸ್ಯೆ ಕಂಡುಬಂತು. ಮೇ 2ರಂದು ತಾರಿಖು ಬೆಳಗ್ಗೆ ಚಿಕಿತ್ಸೆಗೆ ಬಂದಿದ್ದೆವು, ಅಂದು ಎರಡು ಮಗು ಡೆಲಿವರಿ ಆಯ್ತು. ಆವತ್ತು ಬೆಳಗ್ಗೆ 11 ಗಂಟೆಗೆ ಹೆಂಡತಿಯನ್ನು ಮಾತನಾಡಿಸಿದಾಗ ಚೆನ್ನಾಗಿದ್ದಳು. ಇದ್ದಕ್ಕಿದ್ದಂತೆ ಸೀರಿಯಸ್ ಆಗಿದೆ ಎಂದರು. ನಂತರ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿದರು. ಈಗ ಪೇಮೆಂಟ್ ಮಾಡಿದರೆ ಮಾತ್ರ ನನ್ನ ಹೆಂಡತಿ ಮೃತದೇಹ ಸಿಗುತ್ತೆ ಎನ್ನುತ್ತಿದ್ದಾರೆ. 11 ಲಕ್ಷದ ಮೆಡಿಸಿನ್ ತಂದಿದ್ದೆ. 30 ಲಕ್ಷ ಬಿಲ್ ಆಗಿದೆ. ಇವರು ಮಾಡಿದ ತಪ್ಪಿನಿಂದ ನಮಗೆ ಸಮಸ್ಯೆ ಆಗಿದೆ ಎಂದು ಹೇಳಿದ್ದರು.
ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ಹೆರಿಗೆಗೆ 1 ಲಕ್ಷ 30 ಸಾವಿರ ಪ್ಯಾಕೇಜ್ ಇತ್ತು. ಇಲ್ಲೂ 25 ಲಕ್ಷ ಬಿಲ್ ಆಗಿದೆ, ಮಣಿಪಾಲ್ ಆಸ್ಪತ್ರೆಯಲ್ಲೂ 30 ಲಕ್ಷ ಬಿಲ್ ಆಗಿದೆ. ಇವರ ಎಡವಟ್ಟಿನಿಂದ ಅಲ್ಲಿ ಹಣ ಕಟ್ಟಿ ಮೃತದೇಹ ತರಬೇಕಾದ ಪರಿಸ್ಥಿತಿ ಬಂದಿದೆ. ಈಗ ತಪ್ಪು ನೀವು ಮಾಡಿದ್ದು, ನೀವೇ ಪರಿಹಾರ ನೀಡಬೇಕು ಎಂದು ಕೇಳಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ವಿಸ್ತಾರ ನ್ಯೂಸ್ ವಿಸ್ತೃತವಾಗಿ ವರದಿ ಮಾಡಿತ್ತು.
ಇದನ್ನೂ ಓದಿ | Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!
ವಿಸ್ತಾರ ನ್ಯೂಸ್ ಸುದ್ದಿಗೆ ಕಡೆಗೂ ಮಣಿಪಾಲ್ ಆಡಳಿತ ಮಂಡಳಿಯವರು ಮಣಿದಿದ್ದು, ಜನನಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಬಿಲ್ ಪಾವತಿ ಬದಿಗಿಟ್ಟು ಮೃತದೇಹವನ್ನು ಹಸ್ತಾಂತರ ಮಾಡಿ ಮಾನವೀಯತೆ ಮರೆದಿದ್ದಾರೆ. ಆದರೆ, ಈ ಬಾಕಿ ಹಣವನ್ನು ನಂತರದಲ್ಲಿ ಪಾವತಿ ಮಾಡಬೇಕೇ? ಯಾರು ಮಾಡಬೇಕು ಎಂಬ ಬಗ್ಗೆ ಇನ್ನೂ ವಿವರಗಳು ತಿಳಿದು ಬಂದಿಲ್ಲ.
ಕ್ಲೌಡ್‌ನೈನ್ ಆಸ್ಪತ್ರೆ ವಿರುದ್ಧ ದೂರು
ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಲೌಡ್‌ನೈನ್ ಆಸ್ಪತ್ರೆಯ ವಿರುದ್ಧ ಆಕೆಯ ಪತಿ ಕೇಶವ್ ಮತ್ತು ಕುಟುಂಬಸ್ಥರು ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದಾರೆ. ಕ್ಲೌಡ್‌ನೈನ್ ಆಸ್ಪತ್ರೆ ನಿರ್ಲಕ್ಷ್ಯದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜನನಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿದ್ದಾರೆ.
ತನಿಖೆಗೆ ತಂಡ ರಚನೆ
ಈ ಪ್ರಕರಣ ಸಂಬಂಧ ತನಿಖೆಗೆ ಜಿಲ್ಲಾ ಆರೋಗ್ಯಾಧಿಕಾರಿ ತಂಡ ರಚನೆ ಮಾಡಿದ್ದಾರೆ. ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಯ ಜಂಟಿ ನಿರ್ದೇಶಕರು -1 ಡಾ. ಮಮತಾ, ಡಾ. ಸಿರಾಜುದ್ದಿನ್ ಮದಿನ್, ಆರ್ ಸಿ ಎಚ್ ನೇತೃತ್ವದ ತನಿಖಾ ತಂಡವನ್ನು ರಚನೆ ಮಾಡಿದ್ದಾರೆ. ಸಾವಿಗೆ ನಿಖರ ಕಾರಣವೇನೆಂದು ಪತ್ತೆ ಹಚ್ಚಲು ಸೂಚನೆ ನೀಡಲಾಗಿದೆ.